ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕಾಂಗ್ರೆಸ್ಸೇತರರು ಗೆದ್ದಿದ್ದು ಮೂರೇ ಬಾರಿ!

ಕಲಬುರಗಿ ಕ್ಷೇತ್ರದಲ್ಲಿ 19 ಚುನಾವಣೆಗಳು: ‘ಕೈ’ ಪಾಳೆಯಕ್ಕೆ 16 ಬಾರಿ ಗೆಲುವು
Published 19 ಮಾರ್ಚ್ 2024, 5:03 IST
Last Updated 19 ಮಾರ್ಚ್ 2024, 5:03 IST
ಅಕ್ಷರ ಗಾತ್ರ

ಕಲಬುರಗಿ: ಕಪ್ಪು ಮಣ್ಣಿನ ಸಮೃದ್ಧ ನೆಲ. ನೆಲದಡಿ ಹೇರಳವಾದ ಸುಣ್ಣದ ಕಲ್ಲಿನ ಖನಿಜ ಸಂಪತ್ತು. ಬೇಸಿಗೆಯೊಂದಿಗೆ ಬರಿದಾಗುವ ನದಿಗಳು. ಮೆಟ್ರೊ ನಗರಿಗಳಿಗೆ ‘ವಲಸಿ’ಗ ಕಾರ್ಮಿಕರನ್ನು ಪೂರೈಸುವ ವೈಶಿಷ್ಟ್ಯದ ಕಲಬುರಗಿ ಲೋಕಸಭಾ ಕ್ಷೇತ್ರವು ದಶಕಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಏಳೂವರೆ ದಶಕಗಳ ರಾಜಕೀಯ ಏರಿಳಿತದ ನಡುವೆಯೂ ಕಾಂಗ್ರೆಸ್ಸೇತರ ಅಭ್ಯರ್ಥಿಗಳು ಗೆದ್ದಿದ್ದು ಮೂರು ಬಾರಿ ಮಾತ್ರ!

ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ 1951ರಿಂದ ಇಲ್ಲಿಯವರೆಗೆ ಉಪಚುನಾವಣೆಗಳು ಸೇರಿದಂತೆ ಒಟ್ಟು 19 ಚುನಾವಣೆಗಳು ನಡೆದಿವೆ. ಅವುಗಳಲ್ಲಿ ಒಂದು ಬಾರಿ ಜನತದಾಳ ಹಾಗೂ ಎರಡು ಬಾರಿ ಬಿಜೆಪಿಯ ಅಭ್ಯರ್ಥಿಗಳು ಗೆಲುವಿನ ದಡ ಸೇರಿದ್ದಾರೆ. ಉಳಿದಂತೆ 16 ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

1951ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸ್ವಾಮಿ ರಾಮಾನಂದ ತೀರ್ಥರು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ, ಒಟ್ಟು ಮತಗಳಲ್ಲಿ ಶೇ 52.8ರಷ್ಟು ಗಳಿಸಿ ವಿಜಯ ಶಾಲಿಗಳಾದರು. ಆ ಮೂಲಕ ಕಾಂಗ್ರೆಸ್‌ಗೆ ಭದ್ರವಾದ ನೆಲೆ ಒದಗಿಸಿದ್ದರು. 1957ರ ಚುನಾವಣೆಯಲ್ಲಿ ಕಲಬುರಗಿ ದ್ವಿಸದಸ್ಯತ್ವ ಹೊಂದಿತ್ತು. ಪರಿಶಿಷ್ಟ ಜಾತಿ ಮೀಸಲು ಸದಸ್ಯತ್ವದಡಿ ಶಂಕರದೇವ ಅವರು ಕಾಂಗ್ರೆಸ್‌ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದಿದ್ದರು. ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಹಾದೇವಪ್ಪ ಯಶವಂತರಾವ ಅವರು ಗೆಲುವಿನ ನಗೆ ಬೀರಿದ್ದರು.

1951ರಿಂದ 1991ರ ಅವಧಿಯ ನಡುವಿನ 12 ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗರೇ ಪಾರುಪತ್ಯ ಮೆರೆದರು. 1974ರಲ್ಲಿ ಧರ್ಮರಾವ ಅವರ ಅಕಾಲಿಕ ನಿಧನದಿಂದ ಹಾಗೂ 1980ರಲ್ಲಿ ಧರ್ಮಸಿಂಗ್ ಅವರ ರಾಜೀನಾಮೆಯ ಕಾರಣಕ್ಕೆ ಎರಡು ಉಪಚುನಾವಣೆಗಳು ನಡೆದವು. ಅವುಗಳಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆದ್ದಿದ್ದರು.

1996ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಖಮರುಲ್ ಇಸ್ಲಾಂ ಅವರು ಕಾಂಗ್ರೆಸ್‌ ಓಟಕ್ಕೆ ಬ್ರೇಕ್ ಹಾಕಿದರು. ಖಮರುಲ್ ಅವರು 2,03,521 ಮತಗಳನ್ನು ಪಡೆದು 15,545 ಮತಗಳ ಅಂತರದಿಂದ ಬಿಜೆಪಿಯ ಬಸವರಾಜ ಪಾಟೀಲ ಸೇಡಂ ಅವರನ್ನು ಸೋಲಿಸಿದರು. ಎರಡು ಬಾರಿ ಸಂಸದರಾಗಿದ್ದ ಡಾ. ಬಿ.ಜಿ.ಜವಳಿ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. 1996ರ ಚುನಾವಣೆಯು ಜಿಲ್ಲೆಯ ‘ಕಮಲ’ ಪಾಳೆಯಕ್ಕೆ ಆತ್ಮವಿಶ್ವಾಸ ತಂದುಕೊಟ್ಟಿತ್ತು.

1998 ಚುನಾವಣೆಯಲ್ಲಿ ಬಿಜೆಪಿಯ ಬಸವರಾಜ ಪಾಟೀಲ ಸೇಡಂ ಅವರು 3,28,982 ಮತಗಳನ್ನು ಪಡೆದು ಜನತಾದಳದ ಖಮರುಲ್ ಇಸ್ಲಾಂ ಅವರಿಗೆ 1,31,798 ಮತಗಳಿಂದ ಸೋಲಿನ ಕಹಿ ಉಣಿಸಿದರು. ಕಾಂಗ್ರೆಸ್‌ನ ಡಾ. ಬಿ.ಜಿ.ಜವಳಿ ಅವರು 1.40 ಲಕ್ಷ ಮತ ಗಳಿಸಿ ಮತ್ತೆ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

1999ರಲ್ಲಿ ‘ಕೈ’ ಚಿಹ್ನೆಯಡಿ ಸ್ಪರ್ಧಿಸಿದ್ದ ಇಕ್ಬಾಲ್ ಅಹಮದ್ ಸರಡಗಿ ಅವರು ಮತ್ತೆ ‘ಕೈ’ಗೆ ಶಕ್ತಿ ತಂದುಕೊಟ್ಟರು. ಬಿಜೆಪಿಯ ಬಸವರಾಜ ಪಾಟೀಲ ಸೇಡಂ ಅವರನ್ನು 69,837 ಮತಗಳಿಂದ ಸೋಲಿಸಿದರು. 2004ರಲ್ಲಿ ಇದೇ ಫಲಿತಾಂಶ ಮರುಕಳಿಸಿತ್ತು.

ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಖರ್ಗೆಯವರ ರಾಷ್ಟ್ರ ರಾಜಕಾರಣಕ್ಕೆ ಕಲಬುರಗಿಯೇ ಭೂಮಿಕೆ

ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣ ಪ್ರವೇಶಕ್ಕೆ ಭೂಮಿಕೆಯಾಗಿದ್ದು ಇದೇ ಕಲಬುರಗಿ ಕ್ಷೇತ್ರ. 2009ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಖರ್ಗೆ ಅವರು ಕಲಬುರಗಿ ಎಸ್‌ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ 345241 ಮತಗಳನ್ನು ಪಡೆದರು. ಅಂದಿನ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಅವರನ್ನು 13404 ಮತಗಳಿಂದ ಸೋಲಿಸಿ ಕೇಂದ್ರದ ಮಂತ್ರಿಯೂ ಆದರು. 2014ರಲ್ಲಿಯೂ ಖರ್ಗೆ ಅವರು ಬೆಳಮಗಿ ಅವರನ್ನು ಸೋಲಿಸಿ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಏರಿದ್ದರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಿಗಿದು ‘ಕಮಲ’ ಹಿಡಿದು ಸ್ಪರ್ಧಿಸಿದ್ದ ಡಾ. ಉಮೇಶ ಜಾಧವ ಅವರು ಖರ್ಗೆ ಅವರನ್ನು ಪರಾಭವಗೊಳಿಸುವಲ್ಲಿ ಯಶಸ್ವಿಯಾದರು. ಸೋಲಿಲ್ಲದ ಸರದಾರ ಎಂದೇ ಖ್ಯಾತರಾದ್ದ ಖರ್ಗೆ ಅವರಿಗೆ ಸೋಲಿನ ರುಚಿ ತೋರಿಸಿ ಸಂಸತ್ ಪ್ರವೇಶಿಸಿದರು.

<div class="paragraphs"><p></p></div>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT