ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಅರ್ಜಿ ಪಡೆಯಲು ದಿನವಿಡೀ ಸರತಿಸಾಲು!

Published : 26 ಸೆಪ್ಟೆಂಬರ್ 2024, 5:50 IST
Last Updated : 26 ಸೆಪ್ಟೆಂಬರ್ 2024, 5:50 IST
ಫಾಲೋ ಮಾಡಿ
Comments

ಕಲಬುರಗಿ: ಸೂರ್ಯ ಉದಯವಾಗುತ್ತಿದ್ದಂತೆ ಕಚೇರಿ ಮುಂದೆ ನೂರಾರು ಜನರ ಸಾಲು. ತಡವಾಗಿ ಬಂದರೆ ಅರ್ಜಿ ಸಿಗುವುದಿಲ್ಲ ಎಂಬ ಆತಂಕ; ಸರದಿಯಲ್ಲಿ ನಿಂತು ಅರ್ಜಿ ಪಡೆಯಲು ದಿನವಿಡೀ ದುಂಬಾಲು...

ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಸಮೀಪದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿ ಎದುರು ದಿನನಿತ್ಯ ಕಂಡುಬರುತ್ತಿರುವ ದೃಶ್ಯಗಳಿವು.

ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ ₹24 ಸಾವಿರ ವಿದ್ಯಾರ್ಥಿ ವೇತನ ನೀಡುತ್ತಾರೆ ಎಂಬ ಸಾಮಾಜಿಕ ಜಾಲತಾಣದ ಸುಳ್ಳು ಸಂದೇಶವು ಜನರನ್ನು ದಿನವಿಡೀ ಸಾಲುಗಟ್ಟಿ ನಿಲ್ಲುವಂತೆ ಮಾಡಿದೆ. ಆದರೆ, ತಂದೆ ಇಲ್ಲದ ಎಲ್ಲ ಮಕ್ಕಳ ಬದಲಾಗಿ ಅರ್ಹತಾ ಮಾನದಂಡ ಪೂರೈಸಿದ ವಿಶೇಷ ಮಕ್ಕಳಿಗೆ ಮಾತ್ರ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ. ಪ್ರತಿ ತಿಂಗಳು ₹4 ಸಾವಿರಗಳಂತೆ ಒಂದು ವರ್ಷಕ್ಕೆ ಸೀಮಿತವಾಗಿ ಮಾತ್ರ ಆರ್ಥಿಕ ನೆರವು ನೀಡಲಾಗುತ್ತಿದೆ.

ಇದನ್ನು ಅರಿಯದ ಜನ ದಿನಬೆಳಗಾದರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿ ಎದುರು ಪಾಳಿಯಲ್ಲಿ ನಿಲ್ಲತೊಡಗಿದ್ದಾರೆ. ಈ ಕುರಿತು ಸ್ವತಃ ಜಿಲ್ಲಾಧಿಕಾರಿ ಅವರೇ ಸ್ಪಷ್ಟನೆ ನೀಡಿದರೂ ಅರ್ಜಿ ಸಲ್ಲಿಕೆಗೆ ಬರುವ ಜನರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ!

‘ಮಂಗಳವಾರ ಬೆಳಿಗ್ಗೆಯೇ ಬಸ್‌ಗೆ ಬಂದು ಸರದಿ ಸಾಲಿನಲ್ಲಿ ನಿಂತಿದ್ದೆ. ಆದರೆ, ಅಂದು ನನ್ನ ಸರದಿ ಬರಲಿಲ್ಲ. ಆದ್ದರಿಂದ ಕಲಬುರಗಿಯ ಪರಿಚಯಸ್ಥರ ಮನೆಯಲ್ಲಿ ಉಳಿದುಕೊಂಡು ಇಂದು ಅರ್ಜಿ ಪಡೆದಿರುವೆ’ ಎಂದು ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ಯುವಕ ಈರಣ್ಣ ಸುಲ್ತಾನಪುರ ತಿಳಿಸಿದರು.

‘ತಂದೆ ಇಲ್ಲದ ಮಕ್ಕಳಿಗೆ ಹಣ ಬರುವುದಾಗಿ ನಮ್ಮ ಪಕ್ಕದ ಮನೆಯವರು ಹೇಳಿದ್ದರಿಂದ ಆಧಾರ್ ಕಾರ್ಡ್‌ ಪ್ರತಿ ತೆಗೆದುಕೊಂಡು ಅರ್ಜಿ ಪಡೆಯಲು ಸರದಿ ಸಾಲಿನಲ್ಲಿ ನಿಂತಿರುವೆ. ಸಂಜೆ ಹೊತ್ತಿಗೆ ಪಾಳಿ ಬರುವ ನಿರೀಕ್ಷೆ ಇದೆ’ ಎಂದು ಸೇಡಂ ತಾಲ್ಲೂಕಿನ ತಾಂಡಾವೊಂದರ ನಿವಾಸಿ ಹೀರಾಬಾಯಿ ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯಿಂದ ಸೆ.30ರವರೆಗೆ ಅರ್ಜಿಗಳನ್ನು ಪಡೆದು ಅಕ್ಟೋಬರ್ 10ರೊಳಗಾಗಿ ಸೇಡಂ ರಸ್ತೆಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಬೇಕಿದೆ.

ಸುಮಾರು ಒಂದು ವಾರದಿಂದ ನಿರಂತರವಾಗಿ ಪ್ರತಿದಿನ ಬೆಳಿಗ್ಗೆ 6ರಿಂದ ಸಂಜೆ 5 ಗಂಟೆಯವರೆಗೆ ಜನರು ಸರದಿ ಸಾಲಿನಲ್ಲಿ ನಿಂತು ಅರ್ಜಿ ಪಡೆಯುತ್ತಿದ್ದಾರೆ. ಬಂದ ದಿನ ಅರ್ಜಿ ಸಿಗದೇ ಹೋದರೆ ಮತ್ತೆ ಮರುದಿನ ಬೆಳಿಗ್ಗೆ ಬೇಗ ಬಂದು ಪಾಳಿಯಲ್ಲಿ ನಿಲ್ಲುತ್ತಿದ್ದಾರೆ. ಈವರೆಗೆ 4,000ಕ್ಕೂ ಹೆಚ್ಚು ಅರ್ಜಿಗಳನ್ನು ಕಚೇರಿ ಸಿಬ್ಬಂದಿಯಿಂದ ಪಡೆದಿದ್ದಾರೆ ಎಂದು ಕಚೇರಿ ಮೂಲಗಳು ತಿಳಿಸಿವೆ.

‘ಫಲಾನುಭವಿಗಳ ಸ್ಥಿತಿಗತಿ ಪರಿಶೀಲನೆ’

‘ಅರ್ಹತಾ ಮಾನದಂಡ ಪೂರೈಸಿದ ವಿಶೇಷ ಮಕ್ಕಳಿಗೆ ಮಾತ್ರ ವಿದ್ಯಾರ್ಥಿ ವೇತನಕ್ಕೆ ಅವಕಾಶವಿದೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶದಿಂದ ನೂರಾರು ಜನರು ಪ್ರತಿದಿನ ಸರದಿಯಲ್ಲಿ ನಿಂತು ಅರ್ಜಿ ಪಡೆಯುತ್ತಿದ್ದಾರೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅ.10ರ ಒಳಗಾಗಿ ಪಡೆದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಬಾರಿ ಮಾನದಂಡಗಳಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಕೆ ಕಾರ್ಯ ಪೂರ್ಣವಾದ ನಂತರ ಮನೆಗಳಿಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ಪರಿಶೀಲಿಸಿ ಫಲಾನುಭವಿಗಳ ಪಟ್ಟಿ ತಯಾರಿಸಲಾಗುವುದು’ ಎಂದರು.

ಅರ್ಹತೆಗೆ ಇರುವ ಮಾನದಂಡ

l 18 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ.

l ಮಕ್ಕಳು ಅನಾಥರಾಗಿದ್ದರೆ, ಪೋಷಕರು ಜೀವಕ್ಕೆ ಬೆದರಿಕೆಯೊಡ್ಡುವ, ಗಂಭೀರ ಸ್ವರೂಪದ ಕಾಯಿಲೆಯ ಸಂತ್ರಸ್ತರಾಗಿದ್ದರೆ, ಪೋಷಕರು ಅಶಕ್ತರಾಗಿದ್ದರೆ ಅಥವಾ ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕವಾಗಿ ಹಾಗೂ ದೈಹಿಕವಾಗಿ ಅಸಮರ್ಥವಾಗಿದ್ದರೆ ಬಾಲನ್ಯಾಯ ಕಾಯ್ದೆ–2015ರ ಪ್ರಕಾರ ಮಕ್ಕಳು ಪೋಷಣೆ ಮತ್ತು ರಕ್ಷಣೆಯ ಅಗತ್ಯ ಹೊಂದಿದ್ದರೆ ಮಾತ್ರ ಅಂಥವರು ಅರ್ಜಿ ಸಲ್ಲಿಸಬಹುದು.

l ವಸತಿರಹಿತರು, ಯಾವುದಾದರೂ ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಬಾಲ ಕಾರ್ಮಿಕರು, ಬಾಲ್ಯ ವಿವಾಹದ ಸಂತ್ರಸ್ತರು, ಮಾನವ ಕಳ್ಳಸಾಗಾಣೆ ಸಂತ್ರಸ್ತರು, ಎಚ್‍ಐವಿ ಏಡ್ಸ್ ಪೀಡಿತ ಮಗು, ಅಂಗವಿಕಲ ಮಗು, ತಪ್ಪಿಸಿಕೊಂಡಿರುವ ಅಥವಾ ಓಡಿಬಂದಿರುವ ಮಗು, ಭಿಕ್ಷಾಟನೆ ಅಥವಾ ಬೀದಿಯಲ್ಲಿ ವಾಸಿಸುತ್ತಿರುವ ಮಗುವಾಗಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT