ಕಲಬುರಗಿ: ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಆಡಳಿತದ ಶಕ್ತಿ ಕೇಂದ್ರವಾದ ಕಲಬುರಗಿ ನಗರವು ರಾಜ್ಯದಲ್ಲಿ ಎರಡನೇ ಅತ್ಯಂತ ಕಲುಷಿತ ನಗರ ಎಂದು ಗುರುತಿಸಲಾಗಿದೆ.
ಸ್ವಿಸ್‌ನ ಐಕ್ಯುಏರ್ ಸಂಸ್ಥೆ ಬಿಡುಗಡೆ ಮಾಡಿದ ವಿಶ್ವ ವಾಯು ಗುಣಮಟ್ಟದ ವರದಿಯಲ್ಲಿ ಈ ಅಂಶ ಪತ್ತೆಯಾಗಿದೆ. ರಾಜ್ಯದ ಹಲವು ನಗರಗಳ ವಾತಾವರಣದಲ್ಲಿ ಮಕ್ಕಳು, ವೃದ್ಧರು ಹಾಗೂ ಶಾಸ್ವಕೋಶ ಸಂಬಂಧಿತ ರೋಗಿಗಳ ಜೀವಕ್ಕೆ ಹಾನಿ ಉಂಟು ಮಾಡುವಂತಹ ದೂಳಿನ ಕಣಗಳಿವೆ ಎಂದು ವರದಿ ಹೇಳಿದೆ.
ಜಾಗತಿಕವಾಗಿ 7,323 ನಗರಗಳನ್ನು ಒಳಗೊಂಡಿರುವ ಕಲುಷಿತ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕದ ಬೆಳಗಾವಿ ನಗರವು 45.0 ಯುಜಿ/ಎಂ3 (ಪ್ರತಿ ಘನ ಮೀಟರ್ ಮೈಕ್ರೋಗ್ರಾಂ) ಮೂಲಕ 159ನೇ ಸ್ಥಾನದಲ್ಲಿದೆ. ಬೆಳಗಾವಿ ನಗರದ ಗಾಳಿಯಲ್ಲಿ ತೇಲಾಡುವ ದೂಳಿನ ಕಣ ಹೆಚ್ಚಿನ ಪ್ರಮಾಣದಲ್ಲಿದೆ. ಕಲಬುರಗಿ ನಗರವು 37.7 ಯುಜಿ/ಎಂ3 ದೂಳಿನ ಮೂಲಕ 288ನೇ ಸ್ಥಾನದಲ್ಲಿದೆ.
ನಂತರದ ಸ್ಥಾನದಲ್ಲಿ ಜಾಗತಿಕವಾಗಿ ಧಾರವಾಡ 408, ಹುಬ್ಬಳ್ಳಿ 427, ಚಿಕ್ಕಬಳ್ಳಾಪುರ 431, ಬೆಂಗಳೂರು 443, ರಾಯಚೂರು 459, ಯಾದಗಿರಿ 485, ಹಾವೇರಿ 503 ಹಾಗೂ ಹಾಸನ 552 ಸ್ಥಾನ ಪಡೆದಿವೆ.
ರಾಜ್ಯದ ಅತಿ ಕಡಿಮೆ ಕಲುಷಿತ ನಗರಗಳ ಸಾಲಿನಲ್ಲಿ ವಿಜಯಪುರ 16.7ಯುಜಿ/ಎಂ3 ಮೂಲಕ ಅಗ್ರ ಸ್ಥಾನ ಪಡೆದು, ಜಾಗತಿಕವಾಗಿ 1,407ನೇ ಸ್ಥಾನದಲ್ಲಿದೆ. 17.4 ಯುಜಿ/ಎಂ3 ಮುಖೇನ ಚಾಮರಾಜನಗರ 1,319ನೇ ಸ್ಥಾನದಲ್ಲಿದೆ. ಚಿಕ್ಕಮಗಳೂರು 1,231, ಕೊಪ್ಪಳ 1,155, ಮೈಸೂರು 1,024, ಮಡಿಕೇರಿ 938, ಶಿವಮೊಗ್ಗ 858, ಬಾಗಲಕೋಟೆ 756, ಗದಗ 757, ಮಂಗಳೂರು 857 ಮತ್ತು ದಾವಣಗೆರೆ 690ನೇ ಸ್ಥಾನದಲ್ಲಿದೆ.
ಗಾಳಿಯ ಗುಣಮಟ್ಟದ ಮೇಲ್ವಿಚಾರಣೆ ಉಪಕರಣಗಳು, ಗಾಳಿಯ ಗುಣಮಟ್ಟದ ಸಂವೇದಕಗಳು, ಸರ್ಕಾರಿ ಏಜೆನ್ಸಿ, ಶಿಕ್ಷಣ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ಥಳೀಯ ಗಾಳಿಯ ಗುಣಮಟ್ಟ ಮೇಲ್ವಿಚಾರಣೆಯ ಕೇಂದ್ರಗಳು, ಜಾಗತಿಕ ವಾಯು ಗುಣಮಟ್ಟ ವರದಿಯ ಅಂಶಗಳನ್ನು ಆಧರಿಸಿ ‘ವಿಶ್ವದ ಅತ್ಯಂತ ಕಲುಷಿತ ನಗರಗಳು (ಐತಿಹಾಸಿಕ ಮಾಹಿತಿ 2017-2022)’ ಶೀರ್ಷಿಕೆಯಡಿ ಐಕ್ಯುಏರ್ ಸಂಸ್ಥೆಯು ಈ ವರದಿ ಸಿದ್ಧಪಡಿಸಿದೆ.
‘ಕಲಬುರಗಿ ನಗರ ಪ್ರದೇಶದ ಗಾಳಿಯಲ್ಲಿ ದೂಳಿನ ಪ್ರಮಾಣ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಒಣ ಪ್ರದೇಶ, ವಿಶಾಲ ವ್ಯಾಪ್ತಿಯುಳ್ಳ ನಗರ, ದೂಳಿನಿಂದ ಕೂಡಿದ ರಸ್ತೆಗಳು ವಾಯುಮಾಲಿನ್ಯ ಕಲುಷಿತ ಮಾಡಿವೆ. ಎಲ್ಲ ಸಮಯದಲ್ಲೂ ಕಲುಷಿತ ವಾತಾವರಣ ಕಂಡು ಬರುವುದಿಲ್ಲ. ವಾಹನಗಳ ಸಂಚಾರ ಹೆಚ್ಚಾದಾಗ ದೂಳಿನ ಪ್ರಮಾಣ ವೃದ್ಧಿಯಾಗುತ್ತದೆ. ಸಂಚಾರ ದಟ್ಟಣೆ ಕಂಡುಬರುವ ಪ್ರದೇಶದಲ್ಲಿ ತುಸು ಏರಿಕೆ ಆಗುತ್ತದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಮಂಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶ್ವಾಸಕೋಶದ ಮೇಲೆ ಪರಿಣಾಮ’
‘ವಾಯು ಮಾಲಿನ್ಯವು ನೇರವಾಗಿ ವ್ಯಕ್ತಿಯ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಅಂಗಾಂಗಳು ಸೂಕ್ಷ್ಮವಾಗಿ ಇರುವ ಕಾರಣ ವಾಯು ಮಾಲಿನ್ಯವು ಅವರ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತವೆ’ ಎಂದು ಜಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಸಂದೀಪ್ ಹರಸಂಗಿ ತಿಳಿಸಿದರು.
‘ದೂಳಿನ ಕಣಗಳು ಮಕ್ಕಳ ದೇಹ ಸೇರಿದರೆ ನಿರಂತರವಾಗಿ ಕೆಮ್ಮು, ಜ್ವರ, ನೆಗಡಿಯಾಗಿ ವೈರಾಣು ಜ್ವರ, ಅಸ್ತಮಾಕ್ಕೂ ಕಾರಣ ಆಗುಬಹುದು. ಹೀಗಾಗಿ, ಪೋಷಕರು ತಮ್ಮ ಮಕ್ಕಳನ್ನು ಕಲುಷಿತ ವಾತಾರಣದಿಂದ ದೂರ ಇರಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಆರಂಭದಲ್ಲೇ ಕಲುಷಿತ ವಾತಾವರಣ ನಿಯಂತ್ರಿಸಲು ಮುಂದಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.