ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ವಾರಿಯರ್ಸ್‌ ರೀತಿ ಕೆಲಸ ಮಾಡಿ: ಶಿಕ್ಷಣ ಸಚಿವ ಸುರೇಶ್ ಕುಮಾರ್

ಎಸ್ಸೆಸ್ಸೆಲ್ಸಿ ಪರೀಕ್ಷೆ: ಪ್ರಾಥಮಿಕ ಮತ್ತು ‍ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ ಸೂಚನೆ
Last Updated 7 ಜೂನ್ 2020, 11:43 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯದ 25 ಶೈಕ್ಷಣಿಕ ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಲೋಪ‍ವಾಗದಂತೆ ಪರೀಕ್ಷೆ ನಡೆಸಲು ನಾವೆಲ್ಲ ಪರೀಕ್ಷಾ ವಾರಿಯರ್ಸ್‌ ರೀತಿ ಕೆಲಸ ಮಾಡಬೇಕಿದೆ’ ಎಂದು ಪ್ರಾಥಮಿಕ ಮತ್ತು ‍ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ ಸೂಚನೆ ನೀಡಿದರು.‌

ನಗರದಲ್ಲಿ ಭಾನುವಾರ ನಡೆದ ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ದಿನಾಂಕ ನಿಗದಿ ಮಾಡುವ ಮುನ್ನ ಮೂರು ಹಂತದ ಚರ್ಚೆಗಳು ನಡೆದವು. ಪೂರ್ವಭಾವಿಯಾಗಿ ನಡೆಸಿದ ಪರೀಕ್ಷೆಗಳ ಫಲಿತಾಂಶದ ಆಧಾರದಲ್ಲೇ ಪಾಸ್‌ ಮಾಡಬೇಕು ಎಂಬ ಸಲಹೆಯೂ ಬಂತು. ಇತರರಂತೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನೂ ಹಾಗೇ ಪಾಸ್‌ ಮಾಡಬೇಕು, ಪರೀಕ್ಷೆ ನಡೆಸಬಾರದು ಎಂದು ಒಬ್ಬರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್‌ ಅದನ್ನು ತಿರಸ್ಕರಿಸಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ’ ಎಂದರು.

‘ನಾನು ಖುದ್ದಾಗಿ ಹಲವು ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದೇನೆ. ಹಲವರನ್ನು ಫೋನ್‌ ಮೂಲಕ ಮಾತನಾಡಿಸಿದ್ದೇನೆ. ಎಲ್ಲರೂ ಪರೀಕ್ಷೆ ಯಾವಾಗ ನಡೆಸುತ್ತೀರಿ ಎಂದೇ ಕೇಳಿದ್ದಾರೆ ಹೊರತು, ರದ್ದು ಮಾಡಿ ಎಂದು ಒಬ್ಬ ವಿದ್ಯಾರ್ಥಿಯೂ ಹೇಳಿಲ್ಲ. ಜತೆಗೆ, ಪರೀಕ್ಷೆ ಇಲ್ಲದೇ ಪಾಸಾದರೆ ಓದಿದವರು, ಓದದವರು ಎಲ್ಲರಿಗೂ ಒಂದೇ ಮಾನದಂಡ ಅನ್ವಯವಾಗುತ್ತದೆ. ಇದು ಸರಿಯಲ್ಲ ಎಂದೂ ಕೆಲವರು ಹೇಳಿದರು. ಎಲ್ಲಕ್ಕಿಂತ ಮುಖ್ಯವಾಗಿ, ಪರೀಕ್ಷೆ ತೆಗೆದುಕೊಳ್ಳದೇ ನಮ್ಮನ್ನು ಹಾಗೇ ಪಾಸ್‌ ಮಾಡಿದರೆ ಭವಿಷ್ಯದುದ್ದಕ್ಕೂ ’ಇದು ಕೊರೊನಾ ಬ್ಯಾಚ್‌‘ ಎಂಬ ಹಣೆಪಟ್ಟಿ ಬೀಳುತ್ತದೆ. ಇಂಥ ಮಾನಸಿಕ ಹಿಂಸೆ ಆಗದಂತೆ ನೋಡಿಕೊಳ್ಳಬೇಕು‘ ಎಂಬುದಾಗಿಯೂ ಸಲಹೆಗಳು ಬಂದಿವೆ’ ಎಂದರು.

‘ಅಧಿಕಾರಿಗಳು ಹಾಗೂ ಶಿಕ್ಷಕರು ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಶಿಕ್ಷಣ ಇಲಾಖೆಗೆ ಇದು ನಿಜವಾದ ಅಗ್ನಿಪರೀಕ್ಷೆ. ನಾವು ಪರೀಕ್ಷೆಯನ್ನೂ ಎದುರಿಸಬೇಕು, ಕೊರೊನಾವನ್ನೂ ಗೆಲ್ಲಬೇಕು. ಸರ್ಕಾರ ಎರಡು ವಿಚಾರಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬುವುದು. ಈ ಬಗ್ಗೆ ರಾಜೀ ಇಲ್ಲ’ ಎಂದೂ ಸಚಿವ ಸ್ಪ‍ಷ್ಟಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಸುಭಾಷ ಗುತ್ತೇದಾರ, ಕಲಬುರ್ಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಯಾದಗಿರಿಯ ಸಿಇಒ ಶಿಲ್ಪಾ ಶರ್ಮಾ, ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ನಳಿನ್‌ ಅತುಲ್‌ ಇದ್ದರು.

ಸಚಿವ ಹೇಳಿದ ಪರೀಕ್ಷಾ ನಿಯಮ

* ಒಬ್ಬರಿಂದ ಒಬ್ಬರಿಗೆ ಸರಿಯಾಗಿ 3.5 ಮೀಟರ್‌ ಅಂತರ ಇರಲಿದೆ.

* ಪ್ರತಿಯೊಬ್ಬ ವಿದ್ಯಾರ್ಥಿಗೂ 2 ಮಾಸ್ಕ್‌ ನೀಡಲಾಗವುವುದು. ಸ್ಯಾನಿಟೈಸರ್‌, ಆರೋಗ್ಯ ತಪಾಸಣೆ ವ್ಯವಸ್ಥೆಯೂ ಇರಲಿದೆ.

* ನೀರಿನ ಬಾಟಲಿಗಳನ್ನು ಮನೆಯಿಂದಲೇ ತರಬೇಕು.

* ಮಕ್ಕಳು ಈಗಿನಿಂದಲೇ ಮನೆಯಲ್ಲಿ ಆಗಾಗ ಮಾಸ್ಕ್‌ ಹಾಕಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು. ಇದರಿಂದ ಪರೀಕ್ಷೆ ವೇಳೆ ಕಿರಿಕಿರಿ ಆಗುವುದಿಲ್ಲ.

* ಒಂದು ವೇಳೆ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಅವಕಾಶ ನೀಡಲಾಗುವುದು. ಆದರೆ, ತನ್ನನ್ನು ಬೇರೆ ರೀತಿ ಕಾಣುತ್ತಿದ್ದಾರೆ ಎಂಬ ಕೀಳರಿಮೆ ವಿದ್ಯಾರ್ಥಿಗೆ ಮೂಡಬಾರದು. ಅಂಥ ಎಚ್ಚರ ವಹಿಸುವುದು ಅಧಿಕಾರಿಗಳ ಜವಾಬ್ದಾರಿ.

* ಶಾಲೆಯ ಶೌಚಗೃಹಗಳನ್ನು ಪರೀಕ್ಷೆ ಆರಂಭವಾಗುವ ಮುನ್ನ ಹಾಗೂ ಮುಗಿದ ಮೇಲೆ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ಇದು ಆಯಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ.

* ಆನ್‌ಲೈನ್‌ ಪಾಠ ಬೋಧನೆಗೆ ಇನ್ನೂ ಅನುಮತಿ ಕೊಟ್ಟಿಲ್ಲ. ಕೆಲವೆಡೆ ವಠಾರ ಶಾಲೆ, ಸಂಜೆ ಶಾಲೆಗಳನ್ನು ಶಿಕ್ಷಕರೇ ಸ್ವಯಂ ಪ್ರೇರಣೆಯಿಂದ ನಡೆಸುತ್ತಿದ್ದಾರೆ. ಅದರ ಬಗ್ಗೆ ತಕರಾರು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT