ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‌ಡಿಸಿವಿರ್‌: ನಿತ್ಯ 500 ಚುಚ್ಚುಮದ್ದಿಗ ಬೇಡಿಕೆ; ಪೂರೈಕೆಯಲ್ಲಿ ಭಾರಿ ವ್ಯತ್ಯ

Last Updated 30 ಏಪ್ರಿಲ್ 2021, 4:01 IST
ಅಕ್ಷರ ಗಾತ್ರ

ಕಲಬುರ್ಗಿ: ಶ್ವಾಸಕೋಶದಲ್ಲಿ ಕಫ ತುಂಬಿಕೊಂಡು ಉಸಿರಾಟಕ್ಕೆ ತೊಂದರೆಯಾಗುತ್ತಿರುವ ಕೋವಿಡ್ ರೋಗಿಗಳಿಗೆ ಅತ್ಯಗತ್ಯವಾಗಿ ಬೇಕಿರುವ ರೆಮ್‌ಡಿಸಿವಿರ್ ಇಂಜೆಕ್ಷನ್‌ ಪೂರೈಕೆ ಅಗತ್ಯಕ್ಕೆ ತಕ್ಕಷ್ಟು ಇಲ್ಲದೇ ಇರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ.

ಸಂಸದ ಡಾ. ಉಮೇಶ ಜಾಧವ ಅವರು ಬೆಂಗಳೂರಿನಿಂದ ತಂದಿದ್ದ 350 ವೈಲ್ಸ್‌ ರೆಮ್‌ಡಿಸಿವಿರ್ ಇಂಜೆಕ್ಷನ್‌ಗಳು ಬುಧವಾರ ಸಂಜೆಯ ವೇಳೆಗೆ ಖಾಲಿಯಾಗಿವೆ. ನಿತ್ಯವೂ 800ರಿಂದ 900 ಹೊಸ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗುತ್ತಿದ್ದು, ಅವರಲ್ಲಿ ಬಹುತೇಕರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಕಫದ ಪ್ರಮಾಣವನ್ನು ತಗ್ಗಿಸುವ ಗುಣ ಹೊಂದಿರುವ ರೆಮ್‌ಡಿಸಿವಿರ್‌ಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿದೆ.

ಒಂದು ಅಂದಾಜಿನ ಪ್ರಕಾರ ಜಿಲ್ಲೆಗೆ ಪ್ರತಿನಿತ್ಯ 500 ವೈಲ್ಸ್‌ (ಒಂದು ವೈಲ್ಸ್‌ನಲ್ಲಿ ಆರು ಡೋಸ್ ಇಂಜೆಕ್ಷನ್ ಕೊಡಬಹುದು) ಅಗತ್ಯವಿದೆ. ಆದರೆ, ಕಳೆದ ಒಂದು ವಾರದಿಂದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಅಗತ್ಯವಾದಷ್ಟು ಇಂಜೆಕ್ಷನ್ ಬರುತ್ತಿಲ್ಲ. ಹೀಗಾಗಿ, ಸಕಾಲಕ್ಕೆ ಇಂಜೆಕ್ಷನ್ ಇಲ್ಲದೆಯೇ ರೋಗಿಗಳು ಕೊನೆಯುಸಿರೆಳೆದ ಘಟನೆಗಳೂ ಇವೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು.

ಕೊರತೆಗೆ ಏನು ಕಾರಣ? ರಾಜ್ಯಕ್ಕೆ ರೆಮ್‌ಡೆಸಿವಿರ್ ಇಂಜೆಕ್ಷನ್‌ಗಳನ್ನು ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಝೈಡಸ್ ಕ್ಯಾಡಿಲಾ, ಹೈದರಾಬಾದ್‌ನ ಹೆಟೆರೊ, ಮುಂಬೈನ ಸಿಪ್ಲಾ, ಮೈಲಾನ್ ಕಂಪನಿಗಳು ರೆಮ್‌ಡೆಸಿವಿರ್‌ ಇಂಜೆಕ್ಷನ್‌ಗಳನ್ನು ರಾಜ್ಯಕ್ಕೆ ಕಳಿಸಿಕೊಡುತ್ತವೆ. ಅದರಲ್ಲಿ ಝೈಡಸ್ ಕ್ಯಾಡಿಲಾ ಕಂಪನಿಯ ಉತ್ಪನ್ನವೇ ಹೆಚ್ಚು ಪ್ರಮಾನದಲ್ಲಿ ರಾಜ್ಯಕ್ಕೆ ಬರುತ್ತಿತ್ತು. ಆದರೆ, ಅದೇ ಔಷಧ ಸಂಸ್ಥೆ ತೆರೆದಿರುವ ಬೃಹತ್ ಆಸ್ಪತ್ರೆಗೆ ಕೋವಿಡ್‌ ರೋಗಿಗಳು ದಾಖಲಾಗುತ್ತಿರುವ ಪ್ರಮಾಣ ಹೆಚ್ಚಾಗಿದ್ದು, ಅಲ್ಲಿಗೇ ಹೆಚ್ಚಿನ ಇಂಜೆಕ್ಷನ್ ಪೂರೈಕೆಯಾಗುತ್ತಿವೆ. ಅಲ್ಲದೇ, ಗುಜರಾತ್, ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಸೋಂಕಿತರು ಇರುವುದರಿಂದ ಆ ರಾಜ್ಯಗಳ ಬೇಡಿಕೆಯನ್ನೂ ಪೂರೈಸಬೇಕಾಗಿದೆ. ಹೀಗಾಗಿ, ರಾಜ್ಯದ ಖಾಸಗಿ ಔಷಧ ವಿತರಕರಿಗೆ ಪೂರೈಕೆಯಾಗುತ್ತಿರುವ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತವೆ ಮೂಲಗಳು.

ಒಬ್ಬರಿಗೆ ಎರಡೇ ಡೋಸ್! ಜಿಲ್ಲೆಯಲ್ಲಿ ನಿತ್ಯವೂ ಹಲವಾರು ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಮತ್ತು ಅವರಿಗೂ ರೆಮ್‌ಡಿಸಿವಿರ್ ಇಂಜೆಕ್ಷನ್ ಅಗತ್ಯವಿರುವುದರಿಂದ ಇಂಜೆಕ್ಷನ್‌ ಡೋಸ್‌ಗಳನ್ನು ಹಂಚಿಕೆ ಮಾಡುವ ಅನಿವಾರ್ಯತೆ ಎದುರಾಗಿದೆ. ಒಬ್ಬರಿಗೆ ಒಂದು ವೈಲ್‌ನಲ್ಲಿರುವ ಎಲ್ಲ ಆರು ಡೋಸ್‌ಗಳನ್ನೂ ಕೊಟ್ಟರೆ ಪರಿಣಾಮಕಾರಿಯಾಗುತ್ತದೆ. ಆದರೆ, ಹೆಚ್ಚುತ್ತಿರುವ ರೋಗಿಗಳು ಹಾಗೂ ಅಗತ್ಯವಿದ್ದಷ್ಟು ಇಂಜೆಕ್ಷನ್‌ ಸಿಗದೇ ಇರುವುದರಿಂದ ಒಬ್ಬರಿಗೆ ಎರಡು ಡೋಸ್ ಮಾತ್ರ ನೀಡಿ ಸಾಗಹಾಕಲಾಗುತ್ತಿದೆ ಎಂದು ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಇದೇ ಪರಿಸ್ಥಿತಿ ಮುಂದುವರಿದರೆ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಮತ್ತೊಬ್ಬ ವೈದ್ಯರು ಆತಂಕ ವ್ಯಕ್ತಪಡಿಸಿದರು.

‘ಶೀಘ್ರವೇ ರೆಮ್‌ಡಿಸಿವಿರ್ ಇಂಜೆಕ್ಷನ್ ತಯಾರಿಸುವ ಕಂಪನಿಗಳು ತಮ್ಮ ಉತ್ಪಾದನೆಯನ್ನು ದ್ವಿಗುಣಗೊಳಿಸಬೇಕು. ಸರ್ಕಾರವು ಇತರೆ ಔಷಧಿ ಕಂಪನಿಗಳಿಗೆ ಈ ರೆಮ್‌ಡಿಸಿವಿರ್ ತಯಾರಿಕೆಗೆ ಅನುಮತಿ ನೀಡಬೇಕು’ ಎಂದು ಸಲಹೆ ನೀಡಿದರು.

‘ರೆಮ್‌ಡಿಸಿವಿರ್ ಹಂಚಿಕೆ ನಿಗಾಕ್ಕೆ ತಂಡ’

ಕಲಬುರ್ಗಿಯ ಜಿಮ್ಸ್‌, ಇಎಸ್‌ಐ ಹಾಗೂ ಜಿಲ್ಲಾಡಳಿತದ ಕೋಟಾದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಿಗೆ ರೆಮ್‌ಡಿಸಿವಿರ್ ಇಂಜೆಕ್ಷನ್ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಗಳ ಕೋಟಾದಲ್ಲಿ ದಾಖಲಾಗಿರುವ ರೋಗಿಗಳಿಗೆ ಕೊರತೆ ಕಂಡು ಬಂದಿದೆ. ಇಂಜೆಕ್ಷನ್ ದುರುಪಯೋಗವಾಗುವ ಹಾಗೂ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಪ್ಪಿಸಲು ನೇರವಾಗಿ ಆಸ್ಪತ್ರೆಗಳಿಗೇ ಇಂಜೆಕ್ಷನ್ ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘ಇಂಜೆಕ್ಷನ್‌ ಯಾವ ರೋಗಿಗೆ ಬೇಕು ಎಂಬ ಬಗ್ಗೆ ಆಸ್ಪತ್ರೆಯವರು ವಿವರವಾಗ ಕೇಸ್ ಶೀಟ್ ಹಾಜರುಪಡಿಸಬೇಕು. ಅದನ್ನು ನಮ್ಮ ಅಧಿಕಾರಿಗಳ ತಂಡ ಪರಿಶೀಲಿಸಲಿದೆ. ಅವರಿಗೆ ಮನವರಿಕೆಯಾದರೆ ಇಂಜೆಕ್ಷನ್ ಪೂರೈಕೆಗೆ ಅವಕಾಶ ನೀಡಲಾಗುತ್ತದೆ. 20 ರೋಗಿಗಳ ವಿವರ ನೀಡಿ 10 ರೋಗಿಗಳಿಗೆ ಇಂಜೆಕ್ಷನ್ ಕೊಟ್ಟು ಉಳಿದಿದ್ದನ್ನು ತಮ್ಮ ಬಳಿ ಉಳಿಸಿಕೊಳ್ಳುವ ಬಗ್ಗೆ ದೂರುಗಳು ಬಂದಿದ್ದರಿಂದ ಇದರ ಮೇಲ್ವಿಚಾರಣೆಗೆ ತಂಡವನ್ನು ರಚಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ರೆಮ್‌ಡಿಸಿವಿರ್ ದರ ಪಟ್ಟಿ

ಕಂಪನಿ;ದರ

ಝಯ್ಡಸ್ ಕ್ಯಾಡಿಲಾ;₹ 900

ಸಿಪ್ಲಾ;₹ 4800

ಮೈಲಾನ್;₹ 5400

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT