ಕಲಬುರಗಿ: ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ತಂಗಿರುವ ಐತಿಹಾಸಿಕ ಐವಾನ್ ಇ ಶಾಹಿ ಅತಿಥಿಗೃಹದಿಂದ ಸಂಪುಟ ಸಭೆ ನಡೆಯಲಿರುವ ಮಿನಿ ವಿಧಾನಸೌಧ ಆವರಣದ ಪ್ರಾದೇಶಿಕ ಆಯುಕ್ತರ ಕಚೇರಿಗೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಬಂದರು.
ಬೆಳಿಗ್ಗೆ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಖರೀದಿಸಲಾದ 50 ಬಸ್ ಗಳನ್ನು ಲೋಕಾರ್ಪಣೆ ಮಾಡಿದ್ದರು.
ಮಧ್ಯಾಹ್ನ ಆರಂಭವಾದ ಸಚಿವ ಸಂಪುಟ ಸಭೆಗೆ ಹೊಸ ಬಸ್‌ನಲ್ಲಿ ಪ್ರಯಾಣ ಬೆಳೆಸಿದರು.
ಮುಖ್ಯಮಂತ್ರಿ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ. ಪಾಟೀಲ, ಡಾ.ಶರಣಪ್ರಕಾಶ್ ಪಾಟೀಲ, ಪ್ರಿಯಾಂಕ್ ಖರ್ಗೆ, ಭೈರತಿ ಸುರೇಶ್ ಇತರರು ಕೆಂಪು ಬಸ್ ನಲ್ಲಿಯೇ ಬಂದರು.