ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಟಿ ಅಂಗಡಿ ಬಂದ್: ಕಟೀಲ್ ಹೇಳಿಕೆಗೆ ಮಲ್ಲಿಕಾರ್ಜುನ ‌ಖರ್ಗೆ ತಿರುಗೇಟು ಹೀಗಿದೆ

Last Updated 21 ನವೆಂಬರ್ 2021, 7:00 IST
ಅಕ್ಷರ ಗಾತ್ರ

ಕಲಬುರಗಿ: 'ಖರ್ಗೆ ಲೂಟಿ ಅಂಗಡಿ ಬಂದ್ ಆಗಿದೆ' ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಟೀಕೆಗೆ ಉತ್ತರಿಸಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ‌ಖರ್ಗೆ ಅವರು, ದೆಹಲಿಯಲ್ಲಿ ಕುಳಿತಿರುವ ಅವರು ಗುರುಗಳು (ಪ್ರಧಾನಿ ನರೇಂದ್ರ ಮೋದಿ) ಕೇಳಿದರೆ ಸೂಕ್ತ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದರು.

ಇಲ್ಲಿನ ಐವಾನ್ ಇ ಶಾಹಿ ಬಡಾವಣೆಯ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್ ಅವರ ಹೇಳಿಕೆ ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಏನಾದರೂ ಪ್ರಶ್ನಿಸಿದರೆ ಟಿಂಗಲ್ ಉಡಾಯಿಸುವುದನ್ನು ಕಲಿತಿದ್ದಾರೆ. ಅವರಿಗೆ ನಮ್ಮ ಪಕ್ಷದ ರಾಜ್ಯ ನಾಯಕರು ಸೂಕ್ತ ಉತ್ತರ ನೀಡುತ್ತಾರೆ ಎಂದರು.

ಕೃಷಿ ಕಾಯ್ದೆಗಳನ್ನು ನರೇಂದ್ರ ಮೋದಿ ರೈತರ ಒತ್ತಡಕ್ಕೆ ಮಣಿದು ಹಿಂದಕ್ಕೆ ಪಡೆದಿಲ್ಲ. ಈಗ ಏಕಾಏಕಿ ಬಂದಿರುವ ರೈತರ ಬಗೆಗಿನ ಕಾಳಜಿ 700 ರೈತರು ತೀರಿಕೊಳ್ಳುವಾಗ ಎಲ್ಲಿ ಹೋಗಿತ್ತು. ಚುನಾವಣೆ ಬಂದಿದೆ ಎಂದು ಈಗ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಈ ಕಾಯ್ದೆ ಜಾರಿಗೊಳಿಸುವ ಮುನ್ನ ಸಂಸತ್ತಿನಲ್ಲಿ ಚರ್ಚಿಸಿದ್ದರೆ ನಾವೂ ಸಲಹೆ ನೀಡುತ್ತಿದ್ದೆವು. ಈಗ ಚುನಾವಣೆ ಬಂದಿದ್ದರಿಂದ ಕಾಯ್ದೆ ವಾಪಸ್ ಪಡೆಯುವ ಘೋಷಣೆ ಮಾಡಿದ್ದಾರೆ. ಇದು ಏಕವ್ಯಕ್ತಿ ಪ್ರದರ್ಶನವಾಗಿದ್ದು, ಮೋದಿ ಅವರಿಗೆ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಗೌರವವೇ ಇಲ್ಲದಂತಾಗಿದೆ ಎಂದು ಟೀಕಿಸಿದರು.

ರೈತರ ಒತ್ತಡಕ್ಕೆ ಮಣಿದು ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕಾಗುತ್ತದೆ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿಯವರು 11 ತಿಂಗಳ ಹಿಂದೆಯೇ ಹೇಳಿದ್ದರು ಎಂದರು.

ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕೊಡಿಸುವ ಕಾಯ್ದೆ ತರುವುದು, ಪೆಗಾಸಸ್ ಹಗರಣ, ಚೀನಾದವರು ನಮ್ಮ ಗಡಿಯಲ್ಲಿ ಗ್ರಾಮ ನಿರ್ಮಿಸಿರುವುದು ಸೇರಿದಂತೆ ಸುಮಾರು 15 ವಿಷಯಗಳ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದೇ 25ರಂದು ಸಭೆ ಕರೆದಿದ್ದಾರೆ ‌ಎಂದರು.

ಭಾರತ-ಚೀನಾ ಮಧ್ಯೆ ಇರುವ ವಿವಾದಿತ ಜಾಗ ಹಾಗೂ ‌ಅಂತರರಾಷ್ಟ್ರೀಯ ಗಡಿ ರೇಖೆಯ ಬಳಿ ಯಾವುದೇ ನಿರ್ಮಾಣ ಚಟುವಟಿಕೆ ನಡೆಸುವಂತಿಲ್ಲ. ಮಾಧ್ಯಮಗಳಲ್ಲಿ ಚೀನಾ ಗ್ರಾಮ ನಿರ್ಮಿಸಿರುವ ಸುದ್ದಿ ಪ್ರಕಟವಾದ ಬಳಿಕ ಎಲ್ಲರೂ ಮಾತನಾಡುತ್ತಿದ್ದರು. ಆದರೆ, 56 ಇಂಚಿನ ಎದೆಯ ಮೋದಿಯವರು ಚೀನಾ ಒಳನುಸುಳುವಿಕೆಯನ್ನು ತಡೆಯಲು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಬರೀ ಭಾಷಣದಲ್ಲೇ ಸಮಯ ಕಳೆಯುತ್ತಿದ್ದಾರೆ ಎಂದು ಛೇಡಿಸಿದರು.

ಉತ್ತರ ಪ್ರದೇಶದಲ್ಲಿ ‌ಏಕಾಂಗಿ‌ ಸ್ಪರ್ಧೆ: ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ‌ ಸ್ಪರ್ಧಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಉಸ್ತುವಾರಿಯಾಗಿರುವ ಪ್ರಿಯಾಂಕಾ ಗಾಂಧಿಯವರು ಘೋಷಿಸಿದ್ದಾರೆ. ಅಲ್ಲೊಂದು ಇಲ್ಲೊಂದು ಕ್ಷೇತ್ರಗಳನ್ನು ಬೇರೆಯವರಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT