ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ನದಿ ಪ್ರವಾಹ: ಚಳಿಯಲ್ಲೇ ರಾತ್ರಿ ಕಳೆದ ಸಂತ್ರಸ್ತರು

ಜಿಲ್ಲಾಡಳಿತದ ಕ್ರಮಕ್ಕೆ ಮಹಿಳೆಯರ ಆಕ್ರೋಶ
Last Updated 21 ಅಕ್ಟೋಬರ್ 2020, 3:58 IST
ಅಕ್ಷರ ಗಾತ್ರ

ಕಲಬುರ್ಗಿ: ಭೀಮಾ ನದಿ ಪ್ರವಾಹದ ನೀರು ಮನೆಗೆ ನುಗ್ಗಿದ್ದರಿಂದ ಶಾಲೆಗಳು, ದೇವಸ್ಥಾನಗಳು, ಮಸೀದಿಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ನಾಲ್ಕು ದಿನಗಳಿಂದ ಕೊರೆಯುವ ಚಳಿಯಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಜಿಲ್ಲಾಡಳಿತ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿ ಊಟ ಹೊರತುಪಡಿಸಿ ಬಟ್ಟೆ, ಹಾಸಿಗೆ, ಹೊದಿಕೆಯನ್ನೂ ನೀಡಿಲ್ಲ.

ನೆರೆಯಿಂದಾಗಿ ಹೆಚ್ಚು ಬಾಧಿತವಾದ ಜೇವರ್ಗಿ ಹಾಗೂ ಅಫಜಲಪುರ ತಾಲ್ಲೂಕಿನ ಕೆಲವು ಕಾಳಜಿ ಕೇಂದ್ರಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಬಹುತೇಕ ಸಂತ್ರಸ್ತರು ನಾಲ್ಕೈದು ದಿನಗಳಿಂದಲೂ ಉಟ್ಟ ಬಟ್ಟೆಯಲ್ಲಿದ್ದಾರೆ. ಕೆಲ ಗರ್ಭಿಣಿಯರು, ಬಾಣಂತಿಯರು, ಪುಟ್ಟ ಮಕ್ಕಳು ಚಳಿಯನ್ನು ತಾಳದೇ ಕಷ್ಟಪಡುತ್ತಿದ್ದಾರೆ.

ಜೇವರ್ಗಿ ತಾಲ್ಲೂಕಿನ ಕೂಡಿ ಗ್ರಾಮದ ದರ್ಗಾ ಹಾಗೂ ಸರ್ಕಾರಿ ಶಾಲೆಯಲ್ಲಿ ಬಹುತೇಕ ಮುಳುಗಡೆ ಯಾದ ಕೋನಾ ಹಿಪ್ಪರಗಾ, ಮಂದರ ವಾಡ, ಕೋಬಾಳ ಹಾಗೂ ಕೂಡಿ ಗ್ರಾಮದ 500ಕ್ಕೂ ಅಧಿಕ ಸಂತ್ರಸ್ತರಿಗೆ ನೆಲೆ ಕಲ್ಪಿಸ ಲಾಗಿದೆ. ಊಟವನ್ನು ಸಕಾಲಕ್ಕೆ ಪೂರೈಸಲಾಗುತ್ತಿದೆ. ಆದರೆ, ನಾಲ್ಕು ದಿನಗಳಿಂದ ಸ್ನಾನವೂ ಇಲ್ಲದೇ, ಹೊದಿಕೆ ಇಲ್ಲದ್ದಕ್ಕೆ ರಾತ್ರಿ ನಿದ್ದೆಯೂ ಇಲ್ಲದೇ ದಿನಗಳನ್ನು ಕಳೆಯುವಂತಾಗಿದೆ ಎಂದು ಗೋಳು ತೋಡಿಕೊಂಡರು.

‘ನಮಗ ಊಟ ಕೊಟ್ಟರ ಸಾಕೇನ್ರಿ? ಉಟ್ಟ ಸೀರಿ ಮ್ಯಾಲ ಇಲ್ಲಿಗಿ ಬಂದೇವಿ. ಮನೆಯಲ್ಲಿದ್ದ ಕಾಳು, ಕಡಿ, ಕುರಿ, ಕೋಳಿ ಎಲ್ಲಾ ನೀರು ಪಾಲು ಆಗ್ಯಾವು. ಅಡಗಿ ಮಾಡ್ಕೊಬೇಕಂದ್ರ ಮನೆಯಲ್ಲಿ ಏನೂ ಉಳದಿಲ್ಲ. ರಾತ್ರಿ ಕಳಿಯೂದರೊಳಗೆ ನೀರ ಬಂದಿದ್ದರಿಂದ ಏನೂ ತಗೊಳ್ದನ ಜೀವ ಉಳದ್ರ ಸಾಕು ಅಂತ ಈ ಕಡಿ ಓಡೋಡಿ ಬಂದೀವಿ. ಇಲ್ಲಿಗಿ ಬಂದರೂ ನಮ್ಮ ಕಷ್ಟಗಳು ಕಡಿಮೆಯಾಗಿಲ್ಲ. ಇಡೀ ರಾತ್ರಿ ಸೊಳ್ಳೆ ಕಡಿಸಿಕೊಂಡು ಸಾಕಾಗೇದ’ ಎಂದು ಕೋನಾ ಹಿಪ್ಪರಗಾ ಗ್ರಾಮದ ಹರಿಜನವಾಡಾ ನಿವಾಸಿ ಶಾಂತಾಬಾಯಿ ಜಾಡಿ ನೋವಿನಿಂದ ಹೇಳಿದರು.

‘ಈ ಹೊಳಿ ಯಾಕಾದರೂ ಬಂತು ಅಂತ ಚಿಂತಿ ಆಗೇದ. ಮಕ್ಕಳು, ಮೊಮ್ಮಕ್ಕಳನ್ನ ಕರಕೊಂಡು ನಮ್ಮಂಥಾ ವಯಸ್ಸು ಹ್ವಾದವರು ಇಲ್ಲಿ ಬಂದು ಕುಂತೇವಿ. ಮನಿ ಮುಳುಗಿ ಮ್ಯಾಲ್ ಒಂದು ಫೂಟ್ ನೀರು ನಿಂತಾವು. ವಾಪಸ್ ಹೋಗಬೇಕಂದ್ರ ನೀರು ಯಾವಾಗ ಇಳಿತದೊ ಗೊತ್ತಿಲ್ಲ. ಸರ್ಕಾರದವ್ರು ದೊಡ್ಡ ಮನಸ್ಸು ಮಾಡಿ ಎತ್ತರ ಜಾಗಾದ ಮ್ಯಾಲ ಮನಿ ಕಟ್ಟಿಸಿಕೊಡಬೇಕು. ಮತ್ತ ಮೊದಲಿನಿಂದನ ಸಂಸಾರ ಶುರು ಮಾಡಬೇಕಾಗೈತಿ’ ಎಂದು ಕೋನಾ ಹಿಪ್ಪರಗಾದ ಖಾಸಿಂಬಿ ಕಣ್ಣೀರಿಟ್ಟರು.

ಈ ಕುರಿತು ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರನ್ನು ಸಂಪರ್ಕಿಸಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ವಿತರಣೆಯಾಗದ ಸರ್ಕಾರದ ಬೆಡ್‌ಶೀಟ್!

ಕೂಡಿ ದರ್ಗಾದಲ್ಲಿರುವ ಸಂತ್ರಸ್ತರು ಸೇರಿದಂತೆ ಜಿಲ್ಲೆಯ ಎಲ್ಲ ಕಾಳಜಿ ಕೇಂದ್ರಗಳಲ್ಲಿರುವರಿಗೆ ಬೆಡ್‌ಷೀಟ್, ಸೋಪು, ಬ್ರಷ್, ಟವೆಲ್ ಸೇರಿದಂತೆ ಅತ್ಯಗತ್ಯ ಸಾಮಗ್ರಿಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಅಕ್ಟೋಬರ್ 16ರಂದೇ ಆದೇಶ ಹೊರಡಿಸಿದ್ದರು. ಮಂಗಳವಾರವಷ್ಟೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆಯ್ದ ಕೆಲ ಕಾಳಜಿ ಕೇಂದ್ರಗಳ ಸಂತ್ರಸ್ತರಿಗೆ ಬೆಡ್‌ಷೀಟ್‌ಗಳನ್ನು ವಿತರಿಸಿದರು.

ಕೂಡಿ ದರ್ಗಾದಲ್ಲಿ 150ಕ್ಕೂ ಅಧಿಕ ಸಂತ್ರಸ್ತರಿದ್ದರೂ ಮಂಗಳವಾರ ರಾತ್ರಿಯಾದರೂ ಅವರಿಗೆ ಬೆಡ್‌ಷೀಟ್‌ ವಿತರಣೆ ಆಗಿರಲಿಲ್ಲ. ‘ಇಲ್ಲಿ ಮಲಗಲೂ ಜಾಗ ಇಲ್ಲ. ಅನ್ನ ಹಾಕುವುದನ್ನು ಬಿಟ್ಟು ಸರ್ಕಾರದವರು ಏನನ್ನೂ ಕಲ್ಪಿಸಿಲ್ಲ. ರಾತ್ರಿಯೆಲ್ಲ ಮಳೆಯಲ್ಲೇ ನೆನೆಯುತ್ತಾ ಮಲಗಬೇಕಿದೆ’ ಎಂದು ಕೋನಾ ಹಿಪ್ಪರಗಾ ಗ್ರಾಮಸ್ಥ ರಾಜಶೇಖರ ಜಾಡಿ ಬೇಸರದಿಂದ ಹೇಳಿದರು.

ಗ್ರಾಮದ ಶಾಲೆಯೊಂದರಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಜೇವರ್ಗಿ ತಹಶೀಲ್ದಾರ್ ಸಿದರಾಯ ಭೋಸಗಿ ಅವರು ಸ್ವತಃ ಊಟ ಬಡಿಸುವುದರ ಜೊತೆಗೆ ಬೆಡ್‌ಷೀಟ್‌ಗಳನ್ನೂ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT