ಕಲಬುರಗಿ: ‘ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದಂದು ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ 371(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಕೃಷಿ ಮತ್ತು ಕೈಗಾರಿಕೆ ನೀತಿ ರೂಪಿಸಬೇಕು’ ಎಂಬುದು ಸೇರಿದಂತೆ 20 ಬೇಡಿಕೆಗಳ ಈಡೇರಿಕೆಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು ಒತ್ತಾಯಿಸಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡರು, ‘ಸೆ.17ರ ಸಚಿವ ಸಂಪುಟ ಸಭೆಯಲ್ಲಿ ಕೇವಲ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಬೇಕು. ಆ ಯೋಜನೆಗಳು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಅವರು ಸವಾಲಿನ ರೂಪದಲ್ಲಿ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ‘371(ಜೆ) ಕಲಂನ ಕಂಡಿಕೆ 12(ಎ) ಪ್ರಕಾರ ವಿಶೇಷ ಸ್ಥಾನಮಾನದಡಿ ಬರುವ ಸಮಸ್ಯೆ ಮತ್ತು ಅಪೀಲುಗಳ ನಿವಾರಣೆಗೆ ಕಲಬುರಗಿಯಲ್ಲಿ ಪ್ರತ್ಯೇಕ ನ್ಯಾಯಮಂಡಳಿ ಸ್ಥಾಪಿಸಬೇಕು. 371(ಜೆ) ಕಲಂನಲ್ಲಿ ಬರುವ ಕೃಪಾಂಕ, ವಯೋಮಿತಿ ವಿಸ್ತರಣೆಯಂತಹ ಸುಮಾರು 30 ಅಂಶಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಕಲ್ಯಾಣ ಭಾಗದ ರಚನಾತ್ಮಕ ಪ್ರಗತಿಗೆ ಮತ್ತು ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕೆಕೆಆರ್‌ಡಿಬಿಯಿಂದ ದೂರದೃಷ್ಟಿಕೋನವುಳ್ಳ ಐದು ವರ್ಷದ ವೈಜ್ಞಾನಿಕ ಕ್ರಿಯಾಯೋಜನೆ ರಚಿಸಿ ಕಾಲಮಿತಿಯಲ್ಲಿ ಅಭಿವೃದ್ಧಿಗೆ ಕ್ರಮವಹಿಸಬೇಕು. ಈಶಾನ್ಯ ರಾಜ್ಯಗಳ ಮಾದರಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಕೇಂದ್ರದಿಂದ ವಿಶೇಷ ಪ್ಯಾಕೇಜ್ ಘೋಷಿಸಲು ಸಚಿವ ಸಂಪುಟದಲ್ಲಿ ನಿರ್ಣಯಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಪ್ರತಿಪಾದಿಸಿದರು.
‘ಕೆಕೆಆರ್‌ಡಿಬಿಯ ಕಾಮಗಾರಿಗಳ ವಿಶೇಷ ನಿಗಾ ವಹಿಸಲು ಮೇಲ್ವಿಚಾರಣಾ ಸಮಿತಿ, ಮೌಲ್ಯಮಾಪನ ಸಮಿತಿ ಹಾಗೂ ಜಾಗೃತದಳ ರಚಿಸಬೇಕು. ಕೃಷ್ಣಾ ಜಲಾನಯನ ಮತ್ತು ಗೋದಾವರಿ ಕಣಿವೆ ಪ್ರದೇಶದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಕಾಲಾವಧಿಯಲ್ಲಿ ಮುಗಿಸಲು ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಆರ್.ಕೆ.ಹುಡಗಿ, ಪ್ರೊ. ಬಸವರಾಜ ಕುಮನೂರ, ಡಾ. ಮಾಜಿದ್ ದಾಗಿ, ಮನೀಷ್, ಗಾಂಧೀಜಿ ಮೊಳಖೆರೆ, ಅಶೋಕ ಗುರೂಜಿ, ಅಸ್ಲಂ ಚೌಂಗೆ, ಸುನೀಲ ಕುಲಕರ್ಣಿ, ಅಬ್ದುಲ್ ರಹೀಂ ಇದ್ದರು.
ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ಸರ್ಕಾರದ ತೀರ್ಮಾನ ಸ್ವಾಗತಾರ್ಹ. 371(ಜೆ) ಕಲಂ ಪರಿಣಾಮಕಾರಿ ಜಾರಿಗೆ ಈ ಸಂಪುಟದಲ್ಲಿ ಸರ್ಕಾರ ಕ್ರಮವಹಿಸಲಿಬಸವರಾಜ ದೇಶಮುಖ ಗೌರವಾಧ್ಯಕ್ಷ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ
‘ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಸಚಿವ ಸಂಪುಟ ಸಭೆಯ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅಗತ್ಯಬಿದ್ದರೆ ಅದಕ್ಕಾಗಿ ಕೆಕೆಆರ್‌ಡಿಬಿಯ ₹100 ಕೋಟಿ ಅನುದಾನ ನೀಡಬೇಕು’ ಎಂದು ಲಕ್ಷ್ಮಣ ದಸ್ತಿ ಆಗ್ರಹಿಸಿದರು. ‘ಅನುಭವ ಮಂಟಪದ ಮೂಲಕ ಜಗತ್ತಿಗೆ ಸಂಸತ್ತು ನೀಡಿದ ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ಕವಿರಾಜಮಾರ್ಗ ಗ್ರಂಥ ನೀಡಿದ ರಾಷ್ಟ್ರಕೂಟ ಸ್ಮರಣಾರ್ಥ ಸೇಡಂ ಅನ್ನು ರಾಷ್ಟ್ರಕೂಟ ಜಿಲ್ಲೆಯಾಗಿ ಘೋಷಿಸಬೇಕು. ಕಲ್ಯಾಣ ಕರ್ನಾಟಕ ಉತ್ಸವವನ್ನು ಸರ್ಕಾರದಿಂದಲೇ ರಾಜ್ಯಮಟ್ಟದಲ್ಲಿ ಆಚರಿಸುವಂತಾಗಬೇಕು. ಕಲ್ಯಾಣ ಪ್ರದೇಶದ ನೈಸರ್ಗಿಕ ಐತಿಹಾಸಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳನ್ನು ಒಂದೇ ವಲಯವಾಗಿ (ಸರ್ಕ್ಯೂಟ್) ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.