ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ‘ಕೈ’ ಬಲಪಡಿಸಿದ ‘ಕಲ್ಯಾಣ’

ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಗೆಲುವು
ವಿನಾಯಕ ಭಟ್‌
Published 5 ಜೂನ್ 2024, 6:35 IST
Last Updated 5 ಜೂನ್ 2024, 6:35 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಐದೂ ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ಕೈ’ ಬಲಪಡಿಸಿದ್ದಾರೆ.

ರಾಜ್ಯದ 28 ಕ್ಷೇತ್ರಗಳ ಪೈಕಿ ಒಂಬತ್ತರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಒಂಬತ್ತರಲ್ಲಿ ಕಲ್ಯಾಣ ಕರ್ನಾಟಕದ ಐದು ಕ್ಷೇತ್ರಗಳು ಇರುವುದು ಮಲ್ಲಿಕಾರ್ಜುನ ಖರ್ಗೆ ಅವರ ವರ್ಚಸ್ಸನ್ನು ಕಾಂಗ್ರೆಸ್‌ನಲ್ಲಿ ಇಮ್ಮಡಿಗೊಳಿಸಿದೆ. ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸಿರುವುದು ಖರ್ಗೆ ಅವರಿಗೆ ಬಲ ತಂದುಕೊಟ್ಟಿದೆ.

ಕಲಬುರಗಿ, ಬೀದರ್‌, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕಲ್ಯಾಣ ಕರ್ನಾಟಕದಲ್ಲಿ 2019ರ ಚುನಾವಣೆಯಲ್ಲಿ ಎಲ್ಲಾ ಐದು ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿತ್ತು. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸ್ವತಃ ಸೋಲು ಅನುಭವಿಸಿದ್ದರು. ಆದರೆ, ಈ ಬಾರಿ ಎಲ್ಲಾ ಐದು ಸ್ಥಾನಗಳನ್ನೂ ಕಾಂಗ್ರೆಸ್‌ ಗೆಲ್ಲುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಕ್ಷೇತ್ರದ ಮೇಲೆ ತಮಗೆ ಇನ್ನೂ ಹಿಡಿತ ಇದೆ ಎಂಬ ಸಂದೇಶವನ್ನು ಸಾರಿದ್ದಾರೆ. ಇನ್ನೊಂದೆಡೆ ಬೀದರ್‌ನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಎದುರು ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್‌ ಖಂಡ್ರೆ ಗೆಲವು ಸಾಧಿಸಿದ್ದು, ವೀರಶೈವ ಲಿಂಗಾಯತ ಸಮಾಜದವರು ಕಾಂಗ್ರೆಸ್‌ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಸಂದೇಶವೂ ರವಾನೆಯಾಗಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಹೆಚ್ಚಿದ ಕಾಂಗ್ರೆಸ್‌ ಶಾಸಕರ ಸಂಖ್ಯಾ ಬಲ, ಬಿಜೆಪಿ ಅಭ್ಯರ್ಥಿಗಳು ವೈಯಕ್ತಿಕ ವರ್ಚಸ್ಸಿನ ಬದಲು ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸನ್ನೇ ನಂಬಿಕೊಂಡಿದ್ದು ಹಾಗೂ ಬಿಜೆಪಿಯೊಳಗೆ ಮುಖಂಡರು ನೀಡಿದ ಒಳ ಏಟು, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಗೆಲುವಿನ ದಡವನ್ನು ಸೇರಲು ಅನುಕೂಲ ಮಾಡಿಕೊಟ್ಟಿತು.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಒಟ್ಟು 41 ವಿಧಾನಸಭಾ ಕ್ಷೇತ್ರಗಳಲ್ಲಿ (ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹರಪನಹಳ್ಳಿಯೂ ಸೇರಿ) ಕಾಂಗ್ರೆಸ್‌ನ 21, ಬಿಜೆಪಿಯ 16 ಹಾಗೂ ಜೆಡಿಎಸ್‌ನ 4 ಶಾಸಕರಿದ್ದರು. ಆಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರೂ ಐದರಲ್ಲಿ ಒಂದು ಸ್ಥಾನವನ್ನೂ ಕಾಂಗ್ರೆಸ್‌ಗೆ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನ 27, ಬಿಜೆಪಿಯ 11 ಹಾಗೂ ಜೆಡಿಎಸ್‌ನ 3 ಶಾಸಕರು ಇದ್ದರು. ಈ ಸಲ ಬಿಜೆಪಿ–ಜೆಡಿಸ್‌ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿತ್ತು. ಜೆಡಿಎಸ್‌ ಬೆಂಬಲ ಇದ್ದರೂ ಕಲ್ಯಾಣದಲ್ಲಿ ಖಾತೆ ತೆರೆಯಲಾಗದೇ ‘ಕಮಲ’ ಮುದುಡಿಹೋಗಿದೆ. ‘ಕಲ್ಯಾಣ’ದ ಶಾಸಕರ ಹಾಗೂ ಪಕ್ಷದ ಮುಖಂಡರ ಸಂಘಟಿತ ಕಾರ್ಯಯೋಜನೆಯು ಲೋಕಸಭಾ ಚುನಾವಣೆಯಲ್ಲಿ ‘ಕಾಂಗ್ರೆಸ್‌ನ ಕಹಳೆ’ ಮೊಳಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT