ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡ ಮಣಿಕಂಠ ಗಡಿಪಾರಿಗೆ ಕಾರಣಗಳೇನು ಗೊತ್ತೇ?

ಸೆ 30ರಿಂದ ಒಂದು ವರ್ಷ ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಿದ ಡಿಸಿಪಿ ಅಡ್ಡೂರು ಶ್ರೀನಿವಾಸಲು
Last Updated 4 ಅಕ್ಟೋಬರ್ 2022, 3:11 IST
ಅಕ್ಷರ ಗಾತ್ರ

ಕಲಬುರಗಿ: ಪಡಿತರ ಅಕ್ಕಿ ಕಳ್ಳಸಾಗಾಟ ಸೇರಿದಂತೆ ಜನರಿಗೆ ಬೆದರಿಕೆ ಹಾಕಿದ ಆರೋಪ ಸೇರಿದಂತೆ ವಿವಿಧ 20 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಮಣಿಕಂಠ ರಾಠೋಡನನ್ನು ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದ್ದು, ಆತನ ವಿರುದ್ಧ ಇರುವ ಆರೋಪಗಳೇನು ಎಂಬ ಬಗ್ಗೆ ಕಲಬುರಗಿ ನಗರ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯೂ ಆದ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಅವರು ಆದೇಶದಲ್ಲಿ ವಿವರಿಸಿದ್ದಾರೆ.

ಮಣಿಕಂಠ ವಿರುದ್ಧ ಐದು ಐಪಿಸಿ ಪ್ರಕರಣಗಳು, 15 ಪ್ರಕರಣಗಳು ಕರ್ನಾಟಕ ಅಗತ್ಯ ವಸ್ತುಗಳ ಲೆಕ್ಕಪತ್ರ ನಿರ್ವಹಣೆ, ದಾಸ್ತಾನು ಬೆಲೆ ಆದೇಶ ಅಡಿಯಲ್ಲಿ ದಾಖಲಾಗಿವೆ. ಸಾರ್ವಜನಿಕರಿಗೆ ವಿತರಿಸಿದ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಹಾಗೂ ಸಂಗ್ರಹಣೆ ಮಾಡುವ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಮತ್ತು ಓಣಿಯಲ್ಲಿ ತಾನು ಏರಿಯಾದ ರೌಡಿ ಇದ್ದೇನೆ. ಯಾರೂ ಏನೂ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಚೀರಾಡುತ್ತಾ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಭಯದ ವಾತಾವರಣ ಸೃಷ್ಟಿಸಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುವ ಸಾಧ್ಯತೆ ಇದೆ. ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸಿ ಬೇರೆ ಜಿಲ್ಲೆಗಳಲ್ಲಿ ಮಾರಾಟ ಮಾಡಿದ್ದಕ್ಕಾಗಿ 20 ಪ್ರಕರಣಗಳು ದಾಖಲಾಗಿವೆ. ಆದರೂ, ಕಾನೂನಿಗೆ ಗೌರವಿಸದೇ ತನ್ನ ಪ್ರವೃತ್ತಿಯನ್ನು ಮುಂದುವರೆಸಿದ್ದಾನೆ. ದಾಖಲಾದ ಪ್ರಕರಣಗಳಲ್ಲಿ ತನ್ನ ಪ್ರಭಾವ ಬೀರಿ ನ್ಯಾಯಾಲಯದಿಂದ ಜಾಮೀನು ಪಡೆದು ಜಾಮೀನಿನ ಷರತ್ತುಗಳನ್ನು ಉಲ್ಲಂಘನೆ ಮಾಡುತ್ತಾ ಬಂದಿದ್ದಾನೆ. ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ಜೀವ ಭಯ ಹಾಕುವ ಸ್ವಭಾವ ಹೊಂದಿದ್ದಾನೆ. ಭಾರತೀಯ ದಂಡ ಸಂಹಿತೆ ಅಧ್ಯಾಯ 8, 16 ಮತ್ತು 22ರ ಅಡಿಯಲ್ಲಿ ಅಪರಾದ ಎಸಗುವ ಪ್ರವೃತ್ತಿವುಳ್ಳವನಾಗಿರುತ್ತಾನೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಚಿತ್ತಾಪುರದತ್ತ ಮಣಿಕಂಠ ಚಿತ್ತ!

ಮಣಿಕಂಠ ರಾಠೋಡ ಮೂಲತಃ ಯಾದಗಿರಿ ಜಿಲ್ಲೆ ಗುರುಮಠಕಲ್‌ನ ನಿವಾಸಿ. ಆದರೂ, ಕಲಬುರಗಿಯ ಚಿತ್ತಾಪುರದತ್ತ ಇತ್ತೀಚಿನ ದಿನಗಳಲ್ಲಿ ಚಿತ್ತ ನೆಟ್ಟಿದ್ದಾನೆ. ಹಾಲಿ ಶಾಸಕ ಪ್ರಿಯಾಂಕ್‌ ಖರ್ಗೆ ಅವರನ್ನು ಟೀಕಿಸುವುದರ ಜೊತೆಗೆ ಬಿಜೆಪಿ ನಾಯಕರಿಗೆ ಹತ್ತಿರವಾಗಲೂ ಯತ್ನಿಸಿದ್ದಾನೆ. ಆದರೆ, ಈತನ ಗಡಿಪಾರಿಗೆ ಒತ್ತಡಗಳು ಹೆಚ್ಚಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ಆತನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಾರೆ.

ಆದರೂ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯ ಬಾಬುರಾವ ಚಿಂಚನಸೂರ ಸೇರಿದಂತೆ ಹಲವರೊಂದಿಗೆ ಒಡನಾಟ ಇಟ್ಟುಕೊಂಡಿದ್ದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಚಿತ್ರಗಳೇ ಹೇಳುತ್ತವೆ.

ಇತ್ತೀಚೆಗೆ ಚಿತ್ತಾಪುರ ತಾಲ್ಲೂಕಿನ ದಂಡೋತಿ, ಬೋರಬಂಡಾ ಸೇರಿದಂತೆ ಹಲವು ಕಡೆಗಳಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಏರ್ಪಡಿಸಿ ಮಹಿಳೆಯರ ಉಡಿ ತುಂಬುವ ಕಾರ್ಯಕ್ರಮ ಏರ್ಪಾಟು ಮಾಡಿದ್ದ. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹಲವು ಸ್ವಾಮೀಜಿಗಳೂ ಭಾಗವಹಿಸಿದ್ದಾರೆ.

ಮಳಿಗೆ ಉದ್ಘಾಟನೆಗೆ ಮಂಗ್ಲಿ ಕರೆಸಿದ್ದ ಮಣಿಕಂಠ

ಕಳೆದ ವರ್ಷದ ನವೆಂಬರ್ 10ರಂದು ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನ ರಸ್ತೆಯಲ್ಲಿ ಎಂ.ಆರ್. ಮಾರ್ಟ್ ಸೂಪರ್ ಮಾರ್ಕೆಟ್ ಆರಂಭಿಸಿದ್ದ ಮಣಿಕಂಠ ರಾಠೋಡ ಅದರ ಉದ್ಘಾಟನೆಗೆ ಖ್ಯಾತ ಗಾಯಕಿ ಮಂಗ್ಲಿ ಅವರನ್ನು ಕರೆಸಿ ಅದ್ಧೂರಿ ಕಾರ್ಯಕ್ರಮ ಮಾಡಿಸಿದ್ದ.

ಅದಾದ ಬಳಿಕವೂ ಮಣಿಕಂಠ ವಿರುದ್ಧ ಅಕ್ಕಿ ಕಳ್ಳತನದ ಪ್ರಕರಣಗಳು ದಾಖಲಾಗುತ್ತಲೇ ಇದ್ದವು. ಹೀಗಾಗಿ, ಇತ್ತೀಚೆಗೆ ಆತನ ಗಡಿಪಾರಿಗೆ ಒತ್ತಡಗಳು ಹೆಚ್ಚಿದ್ದವು. ನಗರಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಅವರು ಭೇಟಿ ನೀಡಿದ್ದ ವೇಳೆಯೂ ದಲಿತ ಸಂಘಟನೆಗಳ ಮುಖಂಡರು ಕ್ರಮಕ್ಕೆ ಒತ್ತಾಯಿಸಿದ್ದರು. ಇದು ಸರ್ಕಾರಕ್ಕೂ ತಲೆನೋವಾಗಿತ್ತು. ಅಂತಿಮವಾಗಿ ಸೆ 30ರಂದು ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಠಾಣೆ ವ್ಯಾಪ್ತಿಗೆ ಮಣಿಕಂಠನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನು ಪ್ರಶ್ನಿಸಿ ಮಣಿಕಂಠ ಹೈಕೋರ್ಟ್ ಮೊರೆ ಹೋಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT