ಮಂಗಳವಾರ, ಮೇ 26, 2020
27 °C
ಕಲಬುರ್ಗಿಯಲ್ಲಿ ಗರಿಷ್ಠ ಉಷ್ಣಾಂಶ 44.5 ಡಿಗ್ರಿ ಸೆಲ್ಸಿಯಸ್‌ ದಾಖಲು

ಕಲಬುರ್ಗಿ | ಗರಿಷ್ಠ ಉಷ್ಣಾಂಶ, ಬಿಸಿಗಾಳಿಗೆ ಜನ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕಳೆದ ಎರಡು ವಾರಗಳಿಂದ ನಿರ್ದಿಷ್ಟ ಗತಿಯಲ್ಲಿದ್ದ ನಗರದ ತಾಪಮಾನ, ಶನಿವಾರ (ಮೇ 23) ಏಕಾಏಕಿ 44.5 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಮನೆಯಿಂದ ಹೊರಬಿದ್ದ ಜನ ಬಿಸಿಗಾಳಿಯ ಹೊಡೆತ ತಾಳಿಕೊಳ್ಳದೇ ತತ್ತರಿಸಿದರು.

ವಾಡಿಕೆಯಂತೆ ಏಪ್ರಿಲ್‌ 30ರ ನಂತರ ಗರಿಷ್ಠ ತಾಪಮಾನ 42ರಿಂದ 42.5 ಡಿಗ್ರಿ ನಡುವೆಯೇ ಏರಿಳಿತ ಕಂಡಿತ್ತು. ಮಧ್ಯದಲ್ಲಿ ಪದೇಪದೇ ಮಳೆ ಸುರಿದ ಕಾರಣ ಮತ್ತೆ 41 ಡಿಗ್ರಿಗೆ ನಿಂತಿತ್ತು. ಮೇ 5ರಂದು 44ರ ಗಡಿ ದಾಟಿದ್ದ ನಗರದ ಉಷ್ಣಾಂಶವು, ಮೇ 10ರಿಂದ 20ರವರೆಗೆ 42– 43ರ ಆಸುಪಾಸಿನಲ್ಲೇ ಏರಿಳಿತ ಕಂಡಿತು. ಆದರೆ, ಶನಿವಾರ 44.5 ಡಿಗ್ರಿಗೆ ತಲುಪುವ ಮೂಲಕ ಪ್ರಸಕ್ತ ವರ್ಷದ ಗರಿಷ್ಠ ತಾಪಮಾನ ದಾಖಲಿಸಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೇ 12ರಿಂದ ಜೂನ್‌ ಮೊದಲ ವಾರದವರೆಗೂ ಅತಿ ಹೆಚ್ಚು ಉಷ್ಣಾಂಶ ದಾಖಲಾಗುತ್ತದೆ. ಈ ವರ್ಷ ಮೇ ಕೊನೆಯ ವಾರದವರೆಗೆ 45 ಡಿಗ್ರಿಗೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಕಲಬುರ್ಗಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಚುರುಗುಟ್ಟಿದ ಚರ್ಮ: ಸೋಮವಾರ (ಮೇ 25) ಈದ್‌ ಉಲ್‌ ಫಿತ್ರ್‌ ಇದೆ. ಭಾನುವಾರ ಕರ್ಫ್ಯೂ ಜಾರಿ. ಹೀಗಾಗಿ, ಶನಿವಾರವೇ ಹಬ್ಬದ ಸಾಮಗ್ರಿಗಳನ್ನು ಖರೀದಿಸಲು ಅತಿ ಹೆಚ್ಚು ಜನ ಮನೆಯಿಂದ ಹೊರಗೆ ಬಂದರು. ವಾಹನ ಸವಾರರು, ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಬಂದವರು ಬಿಸಿಗಾಳಿಗೆ ಬಸವಳಿದರು. ಮಧ್ಯಾಹ್ನ 12ರ ನಂತರ ಟೊಪ್ಪಿಗೆ, ಮಫ್ಲರ್‌, ವೇಲ್‌ಗಳಿಗೆ ಮೊರೆ ಹೋದರು. ದ್ವಿಚಕ್ರ ವಾಹನ ಸವಾರರು ಚರ್ಮ ಚುರುಗುಟ್ಟಿದ ಅನುಭವ ಪಡೆದರು.

ರಾತ್ರಿ ವೇಳೆಯ ಉಷ್ಣಾಂಶದಲ್ಲೂ ಹೆಚ್ಚಳವಾಗಿದ್ದು, ಕೆಲದಿನಗಳಿಂದ ರಾತ್ರಿಯ ಕನಿಷ್ಠ ಉಷ್ಣಾಂಶ 29ರಿಂದ 31 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. 2019ರಲ್ಲಿ ಇದೇ ದಿನ 42 ಡಿಗ್ರಿ ಹಾಗೂ 2018ರಲ್ಲಿ 43 ಡಿಗ್ರಿ ತಾಪಮಾನ ದಾಖಲಾಗಿತ್ತು. 

ಈ ಭಾಗದ ಜಿಲ್ಲೆಗಳಲ್ಲಿ ಈಗ ಗಾಳಿ ಬೀಸುವ ಪ್ರಮಾಣ ಹಾಗೂ ವೇಗ ಕಡಿಮೆ ಆಗಿದೆ. ಇದರಿಂದಾಗಿ ಝಳದ ಅನುಭವ ಹೆಚ್ಚಾಗುತ್ತಿದೆ. ಮುಂದಿನ ವಾರದ ತಾಪಮಾನ ಕೂಡ ಗಾಳಿ ಬೀಸುವಿಕೆ ಮೇಲೆ ನಿರ್ಧರಿತವಾಗುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು.

**

ನಿಗದಿತ ಸಮಯಕ್ಕೇ ಬರಲಿದೆ ಮುಂಗಾರು
ಈ ಬಾರಿ ಮುಂಗಾರು ರಾಜ್ಯಕ್ಕೆ ಬೇಗನೇ ಕಾಲಿಡುತ್ತದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದರು. ಆದರೆ, ಪಶ್ಚಿಮ ಬಂಗಾಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ‘ಅಂಪನ್‌’ ಚಂಡಮಾರುತ ಹವಾಮಾನದ ಗತಿಯನ್ನು ಬದಲಿಸಿದೆ. ಇದರ ಹೊಡೆತಕ್ಕೆ ಮುಂಗಾರು ಮೋಡಗಳು ಚೆದುರಿ ಹಿಂದಕ್ಕೆ ಹೋಗಿವೆ. ಹಾಗಾಗಿ, ಈ ಬಾರಿ ಕೂಡ ಮುಂಗಾರು ತನ್ನ ನಿಗದಿತ ಸಮಯಕ್ಕೆ (ಜೂನ್‌ 7ರ ನಂತರ) ಪ್ರವೇಶ ಮಾಡಲಿದೆ. ಜೂನ್‌ 2 ಅಥವಾ 3ಕ್ಕೆ ಕೇರಳ ರಾಜ್ಯಕ್ಕೆ ಪ್ರವೇಶ ಮಾಡಿದರೆ ಮಾತ್ರ ಕರ್ನಾಟಕದಲ್ಲೂ ಅವಧಿಗೂ ಮುನ್ನ ಬರುತ್ತಿತ್ತು.
–ಪ್ರೊ.ರಾಚಪ್ಪ ವಿ., ಹಿರಿಯ ವಿಜ್ಞಾನಿ, ಕೃಷಿ ಸಂಶೋಧನಾ ಕೇಂದ್ರ, ಕಲಬುರ್ಗಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು