ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಧವ ದ್ವಂದ್ವ ನಿಲುವಿನಿಂದ ಹಿಂದುಳಿದವರಿಗೆ ಅನ್ಯಾಯ’; ಶಾಸಕ ಪ್ರಿಯಾಂಕ್ ಖರ್ಗೆ

ಪತ್ರಿಕಾಗೋಷ್ಠಿಯಲ್ಲಿ ಸಂಸದರ ಕಾರ್ಯವೈಖರಿ ಟೀಕಿಸಿದ ಶಾಸಕ ಪ್ರಿಯಾಂಕ್ ಖರ್ಗೆ
Last Updated 14 ಆಗಸ್ಟ್ 2021, 13:59 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಂಸದ ಡಾ. ಉಮೇಶ ಜಾಧವ ಅವರ ದ್ವಂದ್ವ ನಿಲುವಿನಿಂದ ಕುರುಬ, ಕೋಲಿ ಹಾಗೂ ಬಂಜಾರ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ’ ಎಂದು ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ನಾಯಕರು ಮತ್ತು ಸಂಸದರು ಒಳಗೊಳಗೆ ಬಂಜಾರ ಸಮುದಾಯವನ್ನು ಎಸ್.ಟಿ‌ಗೆ ಸೇರಿಸಲು ದೆಹಲಿಯಲ್ಲಿ ಓಡಾಡುತ್ತಿದ್ದಾರೆ. ಜೊತೆಗೆ ಪ್ರಧಾನಿಯವನ್ನು ಈ ವಿಚಾರದಲ್ಲಿ ಭೇಟಿ ಮಾಡಿದ್ದಾರೆ. ಇದು ಸಂಸದರ ದ್ವಂದ್ವ ನಿಲುವು ಅಲ್ಲವೇ’ ಎಂದು ಪ್ರಶ್ನಿಸಿದರು.

‘ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿರುವ ಕುರುಬ ಸಮುದಾಯದ ಗೊಂಡ, ರಾಜಗೊಂಡ ಜಾತಿಗಳು ಸೇರಿದಂತೆ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಅಂದಿನ ರಾಜ್ಯ ಸರ್ಕಾರ 2014ರ ಮಾರ್ಚ್‌ 3ರಂದು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಮಾರ್ಚ್ 4ರಂದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ‌‌ಪ್ರಸ್ತಾವ ಕಳಿಸಿತ್ತು’ ಎಂದರು.

‘ಕೇಂದ್ರ ಸರ್ಕಾರವು ಮಾರ್ಚ್ 23ರಂದು ಪತ್ರ ಬರೆದು ಕುಲಶಾಸ್ತ್ರ ಅಧ್ಯಯನ‌ ಸಮಿತಿ ವರದಿಯಲ್ಲಿ ನ್ಯೂನತೆಗಳಿವೆ ಎಂದಿತ್ತು. ಆಗ ರಾಜ್ಯ ಸರ್ಕಾರ ನ್ಯೂನತೆಗಳನ್ನು ಸರಿಪಡಿಸಿ, ವರದಿಯನ್ನು ಇನ್ನಷ್ಟು ಮಾಹಿತಿಗಳ ಸಮೇತ ಮತ್ತೊಮ್ಮೆ ಕಳಿಸಿತ್ತು. ಆದರೆ, ಮೂರು ವರ್ಷದ ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಸಕಾರಣವಿಲ್ಲದೇ ಪ್ರಸ್ತಾವವನ್ನು ತಿರಸ್ಕೃತಗೊಂಡಿದೆಯೆಂದು ರಿಜಿಸ್ಟ್ರಾರ್ ಜನರಲ್ ಸೆನ್ಸಸ್ ಕಮಿಷನ್‌ನವರು ತಿಳಿಸಿದರು’ ಎಂದರು.

‘ಸಂಸದರಿಗೆ ಈ ಬಗ್ಗೆ ಪ್ರಶ್ನೆ ಮಾಡಿದರೆ ಅವರ ಕಡೆಯವರು ಉತ್ತರ ಕೊಡುತ್ತಾರೆ. ಜನರು ಆಯ್ಕೆ ಮಾಡಿದವರು ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಡಬೇಕೆ ಹೊರತು ಅವರ ಕಡೆಯವರಲ್ಲ’ ಎಂದರು.

‘ವ್ಯಕ್ತಿಯೊಬ್ಬರು ಬಂಜಾರ ಸಮುದಾಯವನ್ನು ಎಸ್‌ಸಿ ಪಟ್ಟಿಯಿಂದ ತೆಗೆದು ಹಾಕುವಂತೆ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರಿಂದ, ಈ‌ ಕುರಿತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಆಯೋಗದಿಂದ ಮಾಹಿತಿ ಬಯಸಿತು. ಆಗ ಆಯೋಗ ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಳಿತು. ಆಗ ಸಂಸದರು ಬಂಜಾರ ಸಮುದಾಯ ಎಸ್‌ಸಿಯಲ್ಲೇ ಇರಬೇಕು ಎಂದು ಆಗ್ರಹಿಸಿ ಪತ್ರ ಚಳವಳಿಗೆ ಕರೆ‌ ನೀಡುತ್ತಾರೆ. ಬಂಜಾರ ಸಮುದಾಯದ ವಿಚಾರದಲ್ಲಿ ಒಂದೊಂದು ಕಡೆ ಒಂದೊಂದು‌ ನಿಲುವು ತಾಳುವ ಮೂಲಕ ಆ ಸಮುದಾಯಕ್ಕೂ ಅನ್ಯಾಯ‌ ಎಸಗಿದ್ದಾರೆ’ ಎಂದು ಅವರು ಹರಿಹಾಯ್ದರು.

‘ನೆಹರೂ ಸಿಗರೇಟ್ ಸೇದುತ್ತಿದ್ದುದು ಅಪರಾಧವೇ? ಬಿಜೆಪಿಯಲ್ಲಿ ಯಾರೂ ಸಿಗರೇಟ್ ಸೇದಲ್ಲವೇ? ವಾಜಪೇಯಿ ಅವರು ಮದ್ಯಪಾನ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಹಾಗಾದರೆ ಬಾರ್‌ಗಳಿಗೆ ವಾಜಪೇಯಿ ಹೆಸರು ಇಡಬೇಕಾ’ ಎಂದು ಪ್ರಿಯಾಂಕ್ ಅವರು ಸಿ.ಟಿ.ರವಿಗೆ ತಿರುಗೇಟು ನೀಡಿದರು.

ಶಾಸಕಿ ಖನೀಜ್ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನಪರಿಷತ್ ಮಾಜಿ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಅಲ್ಲಮಪ್ರಭು ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT