ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓದುವ ಬೆಳಕು’ ಜಾರಿಗೆ ಪಂಚಾಯಿತಿಗಳಿಗಿಲ್ಲ ಆಸಕ್ತಿ!

27 ಗ್ರಾಮ ಪಂಚಾಯಿತಿಗಳಿರುವ ಸೇಡಂ ತಾಲ್ಲೂಕಿನಲ್ಲಿ ಈ ವರ್ಷ ಕೇವಲ 20 ಮಕ್ಕಳ ಹೆಸರು ನೋಂದಣಿ
Last Updated 30 ಜುಲೈ 2022, 4:28 IST
ಅಕ್ಷರ ಗಾತ್ರ

ಕಲಬುರಗಿ: ಮಕ್ಕಳ ಓದನ್ನು ಉತ್ತೇಜಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಜಾರಿಗೆ ತಂದಿರುವ ‘ಓದುವ ಬೆಳಕು’ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 87314 ಮಕ್ಕಳು ನೋಂದಾಯಿಸಿಕೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರಾಸಕ್ತಿ ಕಾರಣಕ್ಕೆ ಯೋಜನೆ ಜಾರಿಯಾದ ಮೊದಲ ವರ್ಷಕ್ಕೆ ಹೋಲಿಸಿದರೆ, ಉಳಿದ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.

2020ರ ಮಕ್ಕಳ ದಿನಾಚರಣೆ ದಿನದಂದು 6ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಈ ಯೋಜನೆ ಜಾರಿ ಮಾಡಲಾಗಿತ್ತು. ಈ ಯೋಜನೆಯಡಿ ಗ್ರಂಥಾಲಯಗಳಲ್ಲಿ ಉಚಿತವಾಗಿ ಮಕ್ಕಳ ಹೆಸರು ನೋಂದಾಯಿಸಲಾಗುತ್ತದೆ. ಅವರಿಗೆ ಪುಸ್ತಕಗಳನ್ನು ಎರವಲು ಕೊಡಲಾಗುತ್ತದೆ. ನೋಂದಣಿ ಶುಲ್ಕವನ್ನು ಗ್ರಾಮ ಪಂಚಾಯಿತಿ ಸೆಸ್‌ನಿಂದ ಭರಿಸಲಾಗುತ್ತದೆ. 2020ರ ಡಿಸೆಂಬರ್ ಒಳಗೆ ಎಲ್ಲ ಮಕ್ಕಳನ್ನು ಈ ಯೋಜನೆ ವ್ಯಾಪ್ತಿಗೆ ತರುವ ಗುರಿಯಿತ್ತು. ಆದರೆ, ಈವರೆಗೆ ಅದು ಸಾಧ್ಯವಾಗಿಲ್ಲ.

ಯೋಜನೆ ಜಾರಿಯಾದ ವರ್ಷ 38,586 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದರು. 6,540 ಮಕ್ಕಳು ಪುಸ್ತಕಗಳನ್ನು ಎರವಲು ಪಡೆದಿದ್ದರು. ಆ ಸಂಖ್ಯೆ 2021–22ರಲ್ಲಿ 32,995 ಕ್ಕೆ ಇಳಿಕೆಯಾಯಿತು. 2022–23ರಲ್ಲಿ 15733ಕ್ಕೆ ಕುಸಿದಿದೆ. ಅದರಲ್ಲಿ 224 ಅಂಗವಿಕಲ ಮಕ್ಕಳೂ ಸೇರಿದ್ದಾರೆ. ಅಲ್ಲದೆ, ಈ ವರ್ಷ 2522 ಮಕ್ಕಳು ಮಾತ್ರ ಪುಸ್ತಕ ಎರವಲು ಪಡೆದಿದ್ದಾರೆ.

27 ಗ್ರಾಮ ಪಂಚಾಯಿತಿಗಳಿರುವ ಸೇಡಂ ತಾಲ್ಲೂಕಿನಲ್ಲಿ 2022–23ರಲ್ಲಿ 20 ಮಕ್ಕಳ ಹೆಸರು ಮಾತ್ರ ನೋಂದಣಿ ಆಗಿದೆ. 2021–22ರಲ್ಲೂ ಈ ತಾಲ್ಲೂಕು ಕಡಿಮೆ ಸಾಧನೆ ಮಾಡಿತ್ತು. ಆಗ 933 ಮಕ್ಕಳು ಹೆಸರು ನೋಂದಾಯಿಸಿದ್ದರು. ಜೇವರ್ಗಿ ತಾಲ್ಲೂಕಿನಲ್ಲಿ 25 ಗ್ರಾಮ ಪಂಚಾಯಿತಿಗಳಿವೆ. ಈ ವರ್ಷ ಕೇವಲ 80 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕಮಲಾಪುರ ಹೆಚ್ಚು: ಈ ವರ್ಷ ಜಿಲ್ಲೆಯಲ್ಲಿ ಕಮಲಾಪುರದಲ್ಲಿ ಹೆಚ್ಚು ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ. 6006 ಮಕ್ಕಳು ಯೋಜನೆ ವ್ಯಾಪ್ತಿಗೆ ಬಂದಿದ್ದಾರೆ. ಅದರಲ್ಲಿ 31 ಅಂಗವಿಕಲ ಮಕ್ಕಳೂ ಸೇರಿದ್ದಾರೆ. ಅಫಜಲಪುರದಲ್ಲಿ ನೋಂದಣಿ ಮಾಡಿಕೊಂಡ 2096 ಮಕ್ಕಳ ಪೈಕಿ 59 ಅಂಗವಿಕಲ ಮಕ್ಕಳಿದ್ದಾರೆ. ಚಿಂಚೋಳಿಯ ಲ್ಲಿ 1664, ಕಲಬುರಗಿ 1638, ಆಳಂದ 1214 ಹಾಗೂ ಚಿತ್ತಾಪುರ ತಾಲ್ಲೂಕಿನಲ್ಲಿ 1183 ಮಕ್ಕಳು ಯೋಜನೆಯ ಪ್ರಯೋಜನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT