ಗುರುವಾರ , ಅಕ್ಟೋಬರ್ 1, 2020
24 °C
ಯುಪಿಎಸ್‌ಸಿ ಪರೀಕ್ಷೆಯಲ್ಲಿ 443ನೇ ರ‍್ಯಾಂಕ್‌

ವಿಷಯ ಆಯ್ಕೆ ನಿಮ್ಮದೇ ಆಗಿರಲಿ: ಸ್ಪರ್ಶಾ ನೀಲಂಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಪ್ರಜಾವಾಣಿ’ಯ ಕಲಬುರ್ಗಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಮಾರ್ಗದರ್ಶಿ ಆಯಿತು. ಯುಪಿಎಸ್‌ಸಿ ಪರೀಕ್ಷೆಯಲ್ಲಿ 443ನೇ ರ್‍ಯಾಂಕ್‌ ಪಡೆದು ಸಾಧನೆ ತೋರಿದ, ಕಲಬುರ್ಗಿಯ ಸ್ಪರ್ಶಾ ನೀಲಂಗಿ ಅವರು ಹಲವು ಆಸಕ್ತರ ಕರೆಗಳಿಗೆ ಸ್ಪಂದಿಸಿದರು. ಸ್ಪರ್ಶಾ ನೀಲಂಗಿ ಅವರು 2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 805ನೇ ರ್‍ಯಾಂಕ್ ಪಡೆದಿದ್ದು, ಪ್ರಸ್ತುತ ಅಸ್ಸಾಂನಲ್ಲಿ ಐಆರ್‌ಟಿಎಸ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಉತ್ತಮ ರ್‍ಯಾಂಕ್‌ ದೊರೆತಿದ್ದು, ಐಪಿಎಸ್‌ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ.

‘ಯಾರೋ ಹೇಳಿದ್ದಾರೆ ಎಂದು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಬದಲು ನಿಮಗಿಷ್ಟವಾದ ವಿಷಯವನ್ನು ಆಯ್ದುಕೊಂಡು ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಜೊತೆಗೆ, ದಿನ ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗಿ ಉತ್ತಮ ಅಂಕ ಪಡೆಯಬಹುದು...’  ಸ್ಪರ್ಶಾ ನೀಲಂಗಿ ಅವರ ಸಲಹೆಗಳು ಇವು.

ಕಲಬುರ್ಗಿ, ಬೀದರ್‌, ಯಾದಗಿರಿ, ಸುರಪುರ, ಕೊಪ್ಪಳ, ರಾಯಚೂರು, ಗದಗ ಸೇರಿದಂತೆ ವಿವಿಧ ನಗರಗಳಿಂದ ಪರೀಕ್ಷಾ ಆಕಾಂಕ್ಷಿಗಳು ಮಾಡಿದ ಕರೆಗಳಿಗೆ ಉತ್ತರಿಸಿದ ಅವರು,‌ ಹೊಸ ಭರವಸೆ ಮೂಡಿಸಿದರು.

‌‘ನಾನು ಓದಿದ್ದು ಕಂಪ್ಯೂಟರ್‌ ಸೈನ್ಸ್‌. ಆದರೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಈ ವಿಷಯ ಆಯ್ಕೆ ಮಾಡಿಕೊಳ್ಳುವಂತಿರಲಿಲ್ಲ. ಹಾಗಾಗಿ, ಇತಿಹಾಸವನ್ನು ಆಯ್ಕೆ ಮಾಡಿಕೊಂಡೆ. ಮೊದಲ ಮೂರು ಬಾರಿ ನನಗೆ ಯಶಸ್ಸು ಸಿಗಲಿಲ್ಲ. ಆದರೆ, ನಾಲ್ಕನೇ ಬಾರಿ ಉತ್ತೀರ್ಣಳಾದೆ. ಸರಿಯಾಗಿ ಯೋಜನೆ ರೂಪಿಸಿಕೊಂಡು ಹಳೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬಿಡಿಸುತ್ತಾ ಇದ್ದರೆ ಮೊದಲ ಪ್ರಯತ್ನದಲ್ಲಿಯೇ ಪಾಸಾಗಬಹುದು. ಕೆಲವರು ಭೂಗೋಳ ವಿಜ್ಞಾನ ಹಾಗೂ ಭೂಗರ್ಭ ವಿಜ್ಞಾನ ಆರಿಸಿಕೊಂಡರೆ ಹೆಚ್ಚು ಅಂಕಗಳನ್ನು ಪಡೆಯಬಹುದು ಎನ್ನುತ್ತಾರೆ. ಆದರೆ, ನನಗೇನೂ ಹಾಗೆ ಅನಿಸುವುದಿಲ್ಲ. ಇತ್ತೀಚೆಗೆ ಮಾನವಶಾಸ್ತ್ರ, ಪಶು ವೈದ್ಯಕೀಯ, ಕೃಷಿ, ಎಂಜಿನಿಯರಿಂಗ್, ಅರ್ಥಶಾಸ್ತ್ರ, ಕಾನೂನು, ಸಾಹಿತ್ಯದಂತಹ ಮಾನವಿಕ ವಿಷಯಗಳನ್ನು ಅಧ್ಯಯನ ಮಾಡಿದವರೂ ಉತ್ತಮ ಅಂಕಗಳನ್ನು ಪಡೆದಿದ್ದಾರೆ’ ಎಂದರು.

ಟಾಪರ್‌ಗಳ ಉತ್ತರಗಳನ್ನು ಪರಿಶೀಲಿಸಿ
ಪ್ರತಿ ವರ್ಷ ಕೇಂದ್ರ ಲೋಕಸೇವಾ ಆಯೋಗವು ಆ ವರ್ಷದ ಟಾಪರ್‌ಗಳ ಉತ್ತರ ಪತ್ರಿಕೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ಜೊತೆಗೆ, ಯೂಟ್ಯೂಬ್‌ನಲ್ಲಿಯೂ ಟಾಪರ್‌ಗಳ ಸಂದರ್ಶನಗಳು, ಅವರು ಹೇಗೆ ಸಿದ್ಧತೆ ನಡೆಸಿದ್ದರು ಎಂಬುದರ ವಿಡಿಯೊಗಳು ಲಭ್ಯವಿರುತ್ತವೆ. ಅವುಗಳನ್ನು ಸ್ಪರ್ಧಾ ಆಕಾಂಕ್ಷಿಗಳು ವೀಕ್ಷಿಸಬಹುದು. ಇದರಿಂದ ಹೊಸ ಹೊಳವು ಸಿಗುತ್ತದೆ. ಯಾವ ರೀತಿ ಉತ್ತರಗಳನ್ನು ಬರೆಯಬೇಕು ಎಂಬುದೂ ಸ್ಪಷ್ಟವಾಗುತ್ತದೆ.

ಮಹಿಳೆಯರಿಗೆ ಯುಪಿಎಸ್‌ಸಿ ಪ್ರೋತ್ಸಾಹ
ಯುಪಿಎಸ್ಸಿಯು ಮಹಿಳೆಯರಿಗೂ ಪರೀಕ್ಷೆ ಬರೆಯಲು ಸಾಕಷ್ಟು ಪ್ರೋತ್ಸಾಹ ನೀಡುತ್ತದೆ. ಅರ್ಜಿ ಸಲ್ಲಿಸಲು ಶುಲ್ಕ ವಿನಾಯಿತಿ ನೀಡಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಂಡು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕು. ಇತ್ತೀಚೆಗೆ ಮಹಿಳೆಯರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್‌ ಆಗುತ್ತಿರುವುದು ಖುಷಿಯ ವಿಚಾರವೇ. ಆದರೆ, ಪುರುಷರಿಗೆ ಸಮಾನವಾಗಿ ಮಹಿಳೆಯರೂ ಯುಪಿಎಸ್ಸಿ ಪರೀಕ್ಷೆಯಲಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ಸ್ಪರ್ಶಾ ನೀಲಂಗಿ ಅಭಿಪ್ರಾಯಪಟ್ಟರು.

ಪರೀಕ್ಷೆ ಹತ್ತಿರ ಬಂದಾಗ ಏನು ಮಾಡಬೇಕು?

* ಮೇನ್ಸ್‌ ಪರೀಕ್ಷೆಗೆ ಎರಡು ಅಥವಾ ಮೂರು ತಿಂಗಳು ಮಾತ್ರ ಇದ್ದಾಗ ಹೆಚ್ಚಿನ ಪುಸ್ತಕ ಓದಬೇಕು ಎಂಬ ಧಾವಂತ ಬೇಡ. ಹೆಚ್ಚು ಹೆಚ್ಚು ಓದುವ ಭರದಲ್ಲಿ ಈ ಹಿಂದೆ ಓದಿದ್ದು ಮರೆತು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಈವರೆಗೆ ಎಷ್ಟು ಓದಿದ್ದೀರೋ ಅದನ್ನೇ ಪುನರ್‌ಮನನ (ರಿವಿಜನ್‌) ಮಾಡಿಕೊಳ್ಳಿ.

* ಒಂದು ಅಥವಾ ಎರಡು ವಾರ ಬಾಕಿ ಇದ್ದಾಗ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಬಿಡಿಸಲು ಪ್ರಯತ್ನಿಸಿ. ನೈಜ ಪರೀಕ್ಷೆ ಮಾದರಿಯಲ್ಲೇ ಇದನ್ನು ರೂಢಿ ಮಾಡಿಕೊಳ್ಳಿ.

* ಸಾಮಾನ್ಯವಾಗಿ 5ನೇ ತರಗಯಿಂದ 12ನೇ ತರಗತಿವರೆಗಿನ ಎಲ್ಲ ಪುಸ್ತಕಗಳನ್ನೂ ಅಭ್ಯಾಸ ಮಾಡಿಕೊಳ್ಳಿ ಎಂದು ಬಹುಪಾಲು ಸಾಧಕರು ಹೇಳುತ್ತಾರೆ. ಕೊನೆಯ ಸಂದರ್ಭದಲ್ಲಿ ವರ್ತಮಾನದ ವಿಷಯಕ್ಕೆ ಗಮನ ಕೊಡಿ.

* ಹಿಂದೆ ಪರೀಕ್ಷೆಯಲ್ಲಿ ಸಾಧನೆ ತೋರಿದವರಿಂದ ಮಾರ್ಗದರ್ಶನ ಪಡೆಯಿರಿ.

ವಯೋಮಿತಿ ವಿವರ
ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ವಯೋಮಿತಿ ನಿಗದಿ ಮಾಡಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 32 ವರ್ಷದವರೆಗೆ ಆರು ಪ್ರಯತ್ನಗಳಲ್ಲಿ ಪರೀಕ್ಷೆ ಬರೆಯಬಹುದು. ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 35 ವರ್ಷ ವಯೋಮಾನದವರಿಗೆ 9 ಪ್ರಯತ್ನಗಳಲ್ಲಿ ಪರೀಕ್ಷೆ ಬರೆಯಬಹುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 40 ವರ್ಷದವರೆಗೂ ಪರೀಕ್ಷೆ ಎದುರಿಸಬಹುದು.

ಪ್ರಿಲಿಮ್ಸ್‌ ಪರೀಕ್ಷೆಗೆ ಕುಳಿತುಕೊಳ್ಳುವವರು ಎನ್‌ಸಿಇಆರ್‌ಟಿ ಪ್ರಕಟಿಸಿದ 11 ಹಾಗೂ 12ನೇ ತರಗತಿಯ ಪಠ್ಯಪುಸ್ತಕಗಳನ್ನು ಓದಿದರೆ ಸಾಕಷ್ಟು ಮಾಹಿತಿ ದೊರೆಯುತ್ತದೆ. ಅಲ್ಲದೇ, ಇಂಟರ್ನೆಟ್‌ನಲ್ಲಿ ಅಭ್ಯಾಸ ಮಾಡಬೇಕಾದ ಪುಸ್ತಕಗಳ ಪಟ್ಟಿ ಸಿಗುತ್ತದೆ.

ಇತಿಹಾಸ ಅಧ್ಯಯನ ಮಾಡುವವರು ಸ್ಪೆಕ್ಟ್ರಮ್‌ನವರು ಪ್ರಕಟಿಸಿದ ಪುಸ್ತಕ ಹಾಗೂ ರಾಜ್ಯಶಾಸ್ತ್ರ ಆರಿಸಿಕೊಳ್ಳುವವರು ಲಕ್ಷ್ಮಿಕಾಂತ್ ಅವರು ಬರೆದ ಪುಸ್ತಕಗಳನ್ನು ಓದಬಹುದು ಎಂದು ಹೇಳಿದರು.

ಕೋಚಿಂಗ್ ಇಲ್ಲದೆಯೂ ಪರೀಕ್ಷೆ
ಕೋಚಿಂಗ್ ಇಲ್ಲದೆಯೂ ಪರೀಕ್ಷೆಯನ್ನು ಎದುರಿಸಿ ಪಾಸಾದವರು ಹಲವರಿದ್ದಾರೆ. ದಿನ ನಿತ್ಯ ಪ್ರಮುಖ ಇಂಗ್ಲಿಷ್‌, ಕನ್ನಡ ಪತ್ರಿಕೆಗಳನ್ನು ಓದಿಕೊಳ್ಳುತ್ತಾ ಸಾಮಾನ್ಯ ಜ್ಞಾನದ ಬಗ್ಗೆ ಮಾಹಿತಿ ಪಡೆಯುತ್ತಿರಬೇಕು. ಕೋಚಿಂಗ್ ಪಡೆಯುವ ಆಸೆ ಇದ್ದರೆ ಬೆಂಗಳೂರು, ಹೈದರಾಬಾದ್‌, ಚೆನ್ನೈ, ದೆಹಲಿಯಲ್ಲಿ ಉತ್ತಮ ತರಬೇತಿ ಸಂಸ್ಥೆಗಳಿವೆ. ನಾನು ದೆಹಲಿಯಲ್ಲಿ ತರಬೇತಿ ಪಡೆದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಿಲಿಮ್ಸ್‌ ಪರೀಕ್ಷೆಯು ಬಹು ಆಯ್ಕೆಯ ಉತ್ತರಗಳನ್ನು ಹೊಂದಿರುತ್ತದೆ. ಇದಕ್ಕೆ ಸಿದ್ಧತೆ ನಡೆಸುವವರು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಮೇಲೆ ಕಣ್ಣಾಡಿಸಬೇಕು. ನಂತರ ಮೇನ್ಸ್‌ ಪರೀಕ್ಷೆಯಲ್ಲಿ ನಾವು ಆಯ್ದುಕೊಂಡ ವಿಷಯದ ಮೇಲೆ ಪ್ರಶ್ನೆಗಳಿರುತ್ತವೆ. ಪ್ರಿಲಿಮ್ಸ್‌ ಹಾಗೂ ಮೇನ್ಸ್‌ನಲ್ಲಿ ನಾವು ಪಡೆದುಕೊಂಡ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ ಕರೆ ಬರುತ್ತದೆ. ಮೇನ್ಸ್‌ನಲ್ಲಿ 40ಕ್ಕೂ ಅಧಿಕ ವಿಷಯಗಳನ್ನು ಆಯ್ದುಕೊಳ್ಳಬಹುದು ಎಂದು ಸ್ಪರ್ಶಾ ಹೇಳಿದರು.

‘ಪ್ರಜಾವಾಣಿ’ಯ ಕಲಬುರ್ಗಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಮಾರ್ಗದರ್ಶಿ ಆಯಿತು. ಯುಪಿಎಸ್‌ಸಿ ಪರೀಕ್ಷೆಯಲ್ಲಿ 443ನೇ ರ್‍ಯಾಂಕ್‌ ಪಡೆದು ಸಾಧನೆ ತೋರಿದ, ಕಲಬುರ್ಗಿಯ ಸ್ಪರ್ಶಾ ನೀಲಂಗಿ ಅವರು ಹಲವು ಆಸಕ್ತರ ಕರೆಗಳಿಗೆ ಸ್ಪಂದಿಸಿದರು. ಸ್ಪರ್ಶಾ ನೀಲಂಗಿ ಅವರು 2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 805ನೇ ರ್‍ಯಾಂಕ್ ಪಡೆದಿದ್ದು, ಪ್ರಸ್ತುತ ಅಸ್ಸಾಂನಲ್ಲಿ ಐಆರ್‌ಟಿಎಸ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಉತ್ತಮ ರ್‍ಯಾಂಕ್‌ ದೊರೆತಿದ್ದು, ಐಪಿಎಸ್‌ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು