ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ: ಶಾಸಕ ಪ್ರಿಯಾಂಕ್ ಖರ್ಗೆ ಆತಂಕ

Last Updated 25 ಜೂನ್ 2022, 6:43 IST
ಅಕ್ಷರ ಗಾತ್ರ

ಕಲಬುರಗಿ: ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ರಾಜಕೀಯ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂವಿಧಾನವನ್ನು ಗಾಳಿಗೆ ತೂರಿ ಶಾಸಕರನ್ನು ಖರೀದಿಸುವ ಪ್ರವೃತ್ತಿ ಸಲ್ಲದು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ತಮ್ಮ ಪಕ್ಷ ಎಲ್ಲಿ ಅಧಿಕಾರದಲ್ಲಿ ಇಲ್ಲವೋ ಅಲ್ಲೆಲ್ಲ ಅಸಂವಿಧಾನಿಕ ದಾರಿಗಳ ಮೂಲಕ ಅಧಿಕಾರಕ್ಕೆ‌ ತರಲು ಪ್ರಯತ್ನ ನಡೆಯುತ್ತಿದೆ. ಬಹುಶಃ ಉತ್ತರ ಪ್ರದೇಶ ಹೊರತುಪಡಿಸಿ ಗೋವಾ, ಮಧ್ಯಪ್ರದೇಶ, ಕರ್ನಾಟಕ, ಆಸ್ಸಾಂ, ಮೇಘಾಲಯ ಸೇರಿದಂತೆ ಬಹುತೇಕ ಕಡೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ ತಮ್ಮ ಅಧಿಕಾರದ ಹಸಿವು ನೀಗಿಸಿಕೊಳ್ಳಲು ಬಿಜೆಪಿಯವರು ಅಸಂವಿಧಾನಿಕ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದರು.

‘ಶಿವಸೇನೆಯ ಸಿದ್ದಾಂತ ಏನೇ ಇರಲಿ ನಾವು ಹಾಗೂ ಅವರು ಜೊತೆಯಾಗಿ ಒಂದು ಒಳ್ಳೆಯ ಸರ್ಕಾರ ಕೊಡುವ ಉದ್ದೇಶ ಹೊಂದಿದ್ದೆವು. ಅದರಂತೆ ಎರಡು ವರ್ಷದಿಂದ ನಡೆಯುತ್ತಾ ಬಂದಿದೆ. ಅಭಿವೃದ್ಧಿ ವಿಚಾರದಲ್ಲಿ ತಕರಾರಿಲ್ಲ. ಆದರೆ ಆ ಪಕ್ಷದ ನಾಯಕರು ತಮ್ಮ ನಡುವಿನ ಜಗಳವನ್ನು ಬೇರೆಯವರ ಮೇಲೆ ಹಾಕುತ್ತಿದ್ದಾರೆ’ ಎಂದು ಟೀಕಿಸಿದರು.

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ಕೈವಾಡ ಇಲ್ಲ ಎನ್ನುವ ಬಿಜೆಪಿ ಮಾತಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ಸೂರತ್ ಹಾಗೂ ಆಸ್ಸಾಂನಲ್ಲಿ ಇವರ ಕುಮ್ಮಕ್ಕು ಇಲ್ಲದೇ ಅವರಿಗೆಲ್ಲ ಪೊಲೀಸ್ ಭದ್ರತೆ ಒದಗಿಸಲಾಗಿದೆಯಾ? ಇಲ್ಲಿಯೂ 17 ಜನ ಶಾಸಕರು ಹೋದರಲ್ಲ, ಆವಾಗಲೂ ಇವರ ಕುಮ್ಮಕ್ಕು ಇರಲಿಲ್ಲವೇ? ಜಾತ್ಯತೀತ ನಿಲುವಿನ ಶಾಸಕರು ಬಿಜೆಪಿಯ ಕುಮ್ಮಕ್ಕು ಇಲ್ಲದೇ ಏಕಾಏಕಿ ಬಿಜೆಪಿ ಸೇರುತ್ತಾರೆಯೇ? ಅದು ಹೇಗೆ ತಾವು ನಂಬಿದ ಬುದ್ದ, ಬಸವ, ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಬಲಿಕೊಟ್ಟು ಆರ್‌ಎಸ್‌ಎಸ್ ಹಾಗೂ ಕೋಮುವಾದಿ ವಿಚಾರಗಳಿಗೆ ಬೆಂಬಲ ಕೊಡುತ್ತಾರೆ? ಇದಕ್ಕೆ ಅಧಿಕಾರದ ಆಸೆ ಹಾಗೂ ಹಣ ಆಮಿಷ ಕಾರಣವಾಗಿದೆ’ ಎಂದರು.

ಕಲ್ಯಾಣ ಕರ್ನಾಟಕದ ಕೆಲ‌ ಕಾಂಗ್ರೆಸ್ ನಾಯಕರು ಬಿಜೆಪಿ ಸೇರುವ ಸುದ್ದಿಗಳ ಬಗ್ಗೆ ಪ್ರಶ್ನಿಸಿದಾಗ, ಯಾರಾದರೂ ಹೋಗಲಿ. ಆದರೆ ಮೊದಲೇ ತಿರ್ಮಾನ ಮಾಡಲಿ. ಚುನಾವಣೆಯ ನಂತರ ಜನರ ಆಶೀರ್ವಾದ ಮಾರಿಕೊಂಡು ಪಕ್ಷ ಸೇರುವುದಕ್ಕಿಂತ ಮೊದಲೇ ಹೋಗಲಿ. ಕಾಂಗ್ರೆಸ್ ಪಕ್ಷ ಸ್ವತಂತ್ರ ಪೂರ್ವದಿಂದಲೂ ಹೋರಾಟ ನಡೆಸುತ್ತಲೇ ಬಂದಿದೆ. ಮುಂದೆಯೂ ಹೋರಾಟ ನಡೆಸುತ್ತದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT