ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಯು ಫಲಿತಾಂಶ: ಕಲಬುರಗಿಗೆ 28ನೇ ಸ್ಥಾನ, ಶೇ 6.11ರಷ್ಟು ಫಲಿತಾಂಶ ಹೆಚ್ಚಳ

Published 11 ಏಪ್ರಿಲ್ 2024, 6:37 IST
Last Updated 11 ಏಪ್ರಿಲ್ 2024, 6:37 IST
ಅಕ್ಷರ ಗಾತ್ರ

ಕಲಬುರಗಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಬುಧವಾರ ಪ್ರಕಟವಾಗಿದ್ದು, ಶೇ 75.48ರಷ್ಟು ಫಲಿತಾಂಶದ ಮೂಲಕ ಕಲಬುರಗಿ ಜಿಲ್ಲೆಗೆ ರಾಜ್ಯದಲ್ಲಿ 28ನೇ ಸ್ಥಾನ ಲಭಿಸಿದೆ.

2023ರ ಸಾಲಿನಲ್ಲಿ ಶೇ 69.37ರಷ್ಟು ಫಲಿತಾಂಶ ಬಂದು ರಾಜ್ಯದಲ್ಲಿ 29ನೇ‌ ಸ್ಥಾನ ಪಡೆದಿತ್ತು. ಈ ವರ್ಷದ ಫಲಿತಾಂಶದಲ್ಲಿ ಶೇ 6.11ರಷ್ಟು ಹೆಚ್ಚಳವಾಗಿ, ಒಂದು ಸ್ಥಾನ ಮೇಲೆ ಬಂದಿದೆ.

ಪ್ರಸಕ್ತ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ರೆಗ್ಯುಲರ್, ಖಾಸಗಿ, ಪುನರಾವರ್ತಿತ ಸೇರಿ ಒಟ್ಟು 29,885 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.

ರೆಗ್ಯುಲರ್‌ ಪರೀಕ್ಷೆ ಬರೆದ ಒಟ್ಟು 26,599 ವಿದ್ಯಾರ್ಥಿಗಳಲ್ಲಿ 20,078 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಎದುರಿಸಿದ 997 ಮಂದಿಯಲ್ಲಿ 389 ಮಂದಿ ಹಾಗೂ ಮರು ಪರೀಕ್ಷೆ ಬರೆದ 1,076 ವಿದ್ಯಾರ್ಥಿಗಳಲ್ಲಿ 425 ಮಂದಿ ಪಾಸಾಗಿದ್ದಾರೆ. ರೆಗ್ಯುಲರ್‌, ರಿಪೀಟರ್ಸ್‌ ಹಾಗೂ ಖಾಸಗಿ ಸೇರಿ ಒಟ್ಟು 28,599 ಮಂದಿ ಪರೀಕ್ಷೆ ಬರೆದಿದ್ದು, 20,892 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಶೇ 60.83ರಷ್ಟು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶೇ 83.55ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು ಫಲಿತಾಂಶದಲ್ಲಿ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ, ವಿಜ್ಞಾನ ವಿಭಾಗದಲ್ಲಿ ಪುರುಷ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ಶೇ 75.17ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ 70.32ರಷ್ಟು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. 

ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡ 12,648 ವಿದ್ಯಾರ್ಥಿಗಳ ‍ಪೈಕಿ 10,969 ಮಂದಿ ತೇರ್ಗಡೆ ಆಗುವ ಮೂಲಕ ಶೇ 86.73ರಷ್ಟು ಫಲಿತಾಂಶ ಸಾಧಿಸಿದ್ದಾರೆ. ವಾಣಿಜ್ಯ ವಿಭಾಗದ 3,692 ಮಂದಿಯಲ್ಲಿ 2,548 (ಶೇ 69.01ರಷ್ಟು) ಮಂದಿ ಮತ್ತು ಕಲಾ ವಿಭಾಗದ 10,259 ವಿದ್ಯಾರ್ಥಿಗಳಲ್ಲಿ 6,561 (ಶೇ 63.95ರಷ್ಟು) ಮಂದಿ ಪಾಸಾಗಿದ್ದಾರೆ.

ಗ್ರಾಮೀಣ ಭಾಗದ 3,713 ವಿದ್ಯಾರ್ಥಿಗಳ ಪೈಕಿ 2,615 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ನಗರ ಪ್ರದೇಶದ 22,886 ವಿದ್ಯಾರ್ಥಿಗಳಲ್ಲಿ 17,463 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳ ಫಲಿತಾಂಶ ಶೇ 70.43ರಷ್ಟು ಇದ್ದರೆ, ನಗರದ್ದು ಶೇ 76.3ರಷ್ಟು ಇದೆ. ಗ್ರಾಮೀಣ ಭಾಗಕ್ಕಿಂತ ನಗರದ ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣ ಶೇ 5.87ರಷ್ಟು ಹೆಚ್ಚಿದೆ.

ಪಿಸಿಎಂಬಿ ಕನ್ನಡ ಮಾಧ್ಯಮ, 10 ಮಂದಿ ಪಾಸ್: ವಿಜ್ಞಾನ ವಿಭಾಗದ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವವಿಜ್ಞಾನ (ಪಿಸಿಎಂಬಿ) ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ 40 ವಿದ್ಯಾರ್ಥಿಗಳ ತೆಗೆದುಕೊಂಡಿದ್ದರು. ಈ ಪೈಕಿ 10 ಮಂದಿ ಮಾತ್ರ ಪಾಸಾಗಿದ್ದಾರೆ.

ಅಫಜಲಪುರದ ಟಿಇಎಸ್‌ ಖಾದರ್ ಪಟೇಲ್ ಪಿಯು ಕಾಲೇಜು ಮತ್ತು ನಗರದ ಜಿಡಿಎ ಕಾಲೊನಿಯ ಎಚ್‌ಕೆ ಗರಿಬ್ ನವಾಜ್‌ ಪಿಯು ಕಾಲೇಜು ಶೂನ್ಯ ಫಲಿತಾಂಶ ದಾಖಲಿಸಿವೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಓದಿಗೆ ಪೂರಕವಾದ ಕಲಿಕಾ ವಾತಾವರಣವನ್ನು ಕಾಲೇಜಿನಲ್ಲಿ ಒದಗಿಸಲಾಗಿತ್ತು. ಜತೆಗೆ ಅಧ್ಯಯನ ಸಾಮಗ್ರಿಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡಿದ್ದೆವು
ಪ್ರೊ.ಚನ್ನಾರೆಡ್ಡಿ ಪಾಟೀಲ ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ
ವಿಜ್ಞಾನ ವಿಭಾಗ: ಇಬ್ಬರಿಗೆ 4ನೇ ಸ್ಥಾನ
ವಿಜ್ಞಾನ ವಿಭಾಗದಲ್ಲಿ ನಗರದ ಶರಣಬಸವೇಶ್ವರ ವಸತಿ ಪಿಯು ಕಾಲೇಜು (ಎಸ್‌ಬಿಆರ್) ವಿದ್ಯಾರ್ಥಿ ಸಮರ್ಥ್ ಎಸ್‌.ಬಿ. ಹಾಗೂ ಸರ್ವಜ್ಞ ಪಿಯು ಕಾಲೇಜಿನ ಪ್ರವೀಣ್ ಸಿದ್ದಪ್ಪ ತಲಾ 595 ಅಂಕ ಪಡೆದು ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಅಫಜಲಪುರದ ನಿಸರ್ಗ ಪಿಯು ಕಾಲೇಜಿನ ಮಲ್ಲಪ್ಪ ಭೀಮರಾಯ 592 ಅಂಕಗಳೊಂದಿಗೆ ರಾಜ್ಯದಲ್ಲಿ 5ನೇ ಸ್ಥಾನ ಗಳಿಸಿದ್ದಾರೆ.
ರೈತನ ಮಗ ಟಾಪರ್: ಓದಿನ ಟಿಪ್ಸ್...
ವಿಜ್ಞಾನದಲ್ಲಿ 595 ಅಂಕ ಗಳಿಸಿದ ಸರ್ವಜ್ಞ ಪಿಯು ಕಾಲೇಜಿನ ಪ್ರವೀಣ್ ಕುಂಸಿವಾಡಿಯ ರೈತ ಸಿದ್ದಪ್ಪ ಅವರ ಮಗ. ಸಿದ್ದಪ್ಪ ಅವರು ಕೃಷಿಕರಾಗಿದ್ದು ಎಸ್ಸೆಸ್ಸೆಲ್ಸಿವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಅಳಿಯನ ಮನೆಯಲ್ಲಿ ಇರಿಸಿ ಓದಿಸಿದ್ದರು. ಆ ಬಳಿಕ ಸರ್ವಜ್ಞ ಕಾಲೇಜಿಗೆ ಸೇರಿಸಿದರು. ಟಾಪರ್‌ ಪಡೆದ ಬಗ್ಗೆ ‘ಪ್ರಜಾವಾಣಿ’ ಜತೆಗೆ ಮಾತಾಡಿದ ಪ್ರವೀಣ್ ‘ಅಂದಿನ ಪಾಠಗಳನ್ನು ಅಂದೇ ಓದುತ್ತಿದ್ದೆ. ಓದಿಗೆ ಅಡ್ಡಿಯಾಗಬಾರದೆಂದು ಒಂದು ದಿನವೂ ಮೊಬೈಲ್ ಮುಟ್ಟಲಿಲ್ಲ. ಪುಸ್ತಕಗಳೇ ಸ್ನೇಹಿತರಾಗಿದ್ದವು. ಕಾಲೇಜು ತರಗತಿ ಬಳಿಕ 10 ತಾಸು ಓದುತ್ತಿದ್ದೆ. ಪ್ರತಿ ವಾರ ನಡೆಸುತ್ತಿದ್ದ ಕಿರು ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದು ಕ್ಯಾಶ್ ಪ್ರೈಜ್ ಗೆಲ್ಲುತ್ತಿದ್ದೆ. ಅದೇ ಇವತ್ತು ರ್‍ಯಾಂಕ್ ತಂದುಕೊಟ್ಟಿದೆ. ಸಂಜೆ ಕಾಲೇಜಿಗೆ ಬಂದು ‘ಅಧ್ಯಯನ ಅವಧಿ (ಸ್ಟಡಿ ಅವರ್‌)’ ಸದ್ಬಳಕೆಯೂ ಮಾಡಿಕೊಂಡೆ’ ಎಂದು ಸಂತಸ ವ್ಯಕ್ತಪಡಿಸಿದರು. ಮೊಬೈಲ್‌ ಗೀಳಿಲ್ಲ: ‘ತರಗತಿಯ ಪಾಠಗಳು ಅಧ್ಯಾಪಕರ ಮಾರ್ಗದರ್ಶನ ಬಹಳಷ್ಟು ನೆರವಾಗಿದೆ. ಮೊಬೈಲ್‌ನಿಂದ ಅಂತರ ಕಾಯ್ದುಕೊಂಡು ಓದುತ್ತಿದ್ದೆ. ಕಾಲೇಜಿನ ಅಧ್ಯಯನ ಅವಧಿಯ ಜತೆಗೆ ನಿರಂತರ ಓದಿಗೂ ಉಪನ್ಯಾಸಕರಾದ ತಾಯಿ–ತಂದೆಯ ಬೆಂಬಲವೂ ಇತ್ತು’ ಎನ್ನುತ್ತಾರೆ ಎಸ್‌ಬಿಆರ್ ಕಾಲೇಜಿನ ಸಮರ್ಥ್ ಎಸ್‌.ಬಿ.
ಫಲ ನೀಡಿದ ಮ್ಯಾರಥಾನ್ ಕ್ಲಾಸ್: ಡಿಡಿಪಿಯು
‘ಈ ಬಾರಿ 25ನೇ ಸ್ಥಾನ ಪಡೆಯುವ ಗುರಿಯೊಂದಿಗೆ ಉಪನ್ಯಾಸಕರ ಅನುಸಂಧಾನ ಮತ್ತು ಮ್ಯಾರಥಾನ್ ಕ್ಲಾಸ್‌ ನಡೆಸಿದ್ದರಿಂದ ಶೇ 6.11ರಷ್ಟು ಫಲಿತಾಂಶ ಹೆಚ್ಚಳವಾಗಿದೆ’ ಎಂದು ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ‘ಪ್ರಜಾವಣಿ’ಗೆ ತಿಳಿಸಿದರು. ‘ಶೇ 80ರಷ್ಟು ಫಲಿತಾಂಶ ಪಡೆಯಬೇಕು ಎಂದು ಸಾಕಷ್ಟು ತಯಾರಿ ಮಾಡಿಕೊಂಡು ಜಾರಿಗೆಯೂ ತಂದಿದ್ದೆವು. ಆದರೆ ಶೇ 75.48ರಷ್ಟು ಬಂತು. ಈ ವರ್ಷ ಆರಂಭದಿಂದಲೇ ಮ್ಯಾರಥಾನ್‌ ಕ್ಲಾಸ್ ಹಾಗೂ ಉಪನ್ಯಾಸಕರ ಅನುಸಂಧಾನ ಜಾರಿಗೆ ತಂದು ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT