ಬುಧವಾರ, ಮಾರ್ಚ್ 29, 2023
27 °C

PV Web Exclusive: ಮತ್ತದೇ ‘ಅಪಾಯ ಅಪ್ಪಿಕೊಳ್ಳುವ’ ಮುನ್ನ...

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಮೊದಲ ಮತ್ತು ಎರಡನೇ ಅಲೆ ವ್ಯಾಪಿಸುವ ಮುನ್ನ ಮಾಡಿದ್ದ ತಪ್ಪನ್ನೇ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಮಾಡಲಾಗುತ್ತಿದೆ!

ಮೂರನೇ ಅಲೆ ಬಗ್ಗೆ ತಜ್ಞರು ಅಷ್ಟೇ ಅಲ್ಲ, ಐಎಂಎ, ಪ್ರಧಾನಿ ಹಾಗೂ ನಮ್ಮ ಮುಖ್ಯಮಂತ್ರಿ ಎಷ್ಟೆಲ್ಲ ಎಚ್ಚರಿಕೆ ನೀಡಿದರೂ ಈ ಜಿಲ್ಲೆಗಳ ಜನ ಮತ್ತು ಜಿಲ್ಲಾ ಆಡಳಿತಗಳು ಪಕ್ಕದ ಮಹಾರಾಷ್ಟ್ರದಿಂದ ‘ಅಪಾಯವನ್ನು ಅಪ್ಪಿಕೊಳ್ಳುವಂತೆ’ ವರ್ತಿಸುತ್ತಿವೆ.

ಕರ್ನಾಟಕದಲ್ಲಿ ಕೋವಿಡ್‌ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂಬುದು ನಿಜ. ಆದರೆ, ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲಿ ಇನ್ನೂ ಸೆಮಿ ಲಾಕ್‌ಡೌನ್‌ ಜಾರಿಯಲ್ಲಿದೆ. ಸಂಜೆ 4ರ ವರೆಗೆ ಮಾತ್ರ ವ್ಯಾಪಾರ–ವಹಿವಾಟಿಗೆ ಅವಕಾಶ ನೀಡಲಾಗಿದೆ. ಪ್ರಸಿದ್ಧ ಯಾತ್ರಾ ಸ್ಥಳಗಳಾದ ಪಂಢರಪುರ, ತುಳಜಾಪುರ, ಶಿರಡಿ ಸೇರಿದಂತೆ ಎಲ್ಲ ದೇವಾಲಯಗಳನ್ನು ಇನ್ನೂ ತೆರೆದಿಲ್ಲ. ಆದರೆ, ನಮ್ಮಲ್ಲಿ ಇದಕ್ಕೆ ತದ್ವಿರುದ್ಧ.

ಸೊಲ್ಲಾಪುರ ಜಿಲ್ಲೆಯಲ್ಲಿ ಉಲ್ಬಣಿಸುವ ಕೋವಿಡ್‌, ಕ್ರಮೇಣ ಪಕ್ಕದ ಕಲಬುರ್ಗಿ ಜಿಲ್ಲೆಯಲ್ಲೂ ಹೆಚ್ಚಿನ ಪರಿಣಾಮ ಬೀರುವುದು ಹಿಂದಿನ ಎರಡು ಅಲೆಗಳ ವೇಳೆ ಸಾಬೀತಾಗಿದೆ.

‘ಕಲಬುರ್ಗಿ ಜಿಲ್ಲೆಯಿಂದ ಸೊಲ್ಲಾಪುರಕ್ಕೆ, ಸೊಲ್ಲಾಪುರ ಸೇರಿದಂತೆ ಮಹಾರಾಷ್ಟ್ರದ ವಿವಿಧೆಡೆಯಿಂದ ಕಲಬುರ್ಗಿ–ಬೀದರ್‌ ಜಿಲ್ಲೆಗಳಿಗೆ ನಿತ್ಯ ಸಂಚರಿಸುವವರ ಸಂಖ್ಯೆ ದೊಡ್ಡದಿದೆ. ಗಡಿಯಲ್ಲಿ ಕಟ್ಟುನಿಟ್ಟು ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ’ ಎನ್ನುತ್ತಾರೆ ಸದ್ಯ ಸೊಲ್ಲಾಪುರದಲ್ಲಿ ನೆಲೆಸಿರುವ ಹಿರಿಯ ಕನ್ನಡ ಪತ್ರಕರ್ತ ಎಚ್‌.ಪ್ರಭಾಕರ್.

‘ಗಡಿಗಳಲ್ಲಿ ಚೆಕ್‌ಪೋಸ್ಟ್‌ ಆರಂಭಿಸಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದೇವೆ’ ಎಂದು ಜಿಲ್ಲಾ ಆಡಳಿತಗಳು ಹೇಳುತ್ತಿವೆ. ‘ಮಹಾರಾಷ್ಟ್ರದಿಂದ ಗಡಿ ಪ್ರವೇಶಿಸುವವರು ಆರ್‌ಟಿ–ಪಿಸಿಆರ್‌ ತಪಾಸಣೆಯ ನೆಗೆಟಿವ್‌ ವರದಿ ಹೊಂದಿರಬೇಕು ಇಲ್ಲವೇ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿರಬೇಕು. ಅಂತಹವರನ್ನು ಮಾತ್ರ ಜಿಲ್ಲೆಯೊಳಗೆ ಬಿಟ್ಟುಕೊಳ್ಳುತ್ತಿದ್ದೇವೆ’ ಎಂದು ಕಲಬುರ್ಗಿ ಜಿಲ್ಲಾ ಆಡಳಿತ ಹೇಳುತ್ತಿದೆ. ಆದರೆ, ‘ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಕಾರು–ಜೀಪುಗಳಲ್ಲಿ ಬರುವವರನ್ನು ತಡೆದು ವಿಚಾರಿಸಲಾಗುತ್ತಿದೆ. ಆದರೆ, ಬಸ್‌ ಹಾಗೂ ರೈಲುಗಳ ಮೂಲಕ ಬರುವವರನ್ನು ಹಾಗೇ ಬಿಡಲಾಗುತ್ತಿದೆ. ಕಳ್ಳದಾರಿಗಳೂ ಸಾಕಷ್ಟಿವೆ’ ಎಂದು ಚೆಕ್‌ಪೋಸ್ಟ್‌ ಇರುವ ಕಡೆಗಳಲ್ಲಿ ನೆಲೆಸಿರುವ ಜನರು ಹೇಳುವ ಮಾತು.

‘ಕಳೆದ ಬಾರಿ ಚೆಕ್‌ಪೋಸ್ಟ್‌ಗಳು ದೊಡ್ಡಮಟ್ಟದ ಸುಲಿಗೆಯ ಕೇಂದ್ರಗಳಾಗಿದ್ದವು’ ಎನ್ನುವುದು ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಆಳಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್‌. ಪಾಟೀಲ ಅವರ ಆರೋಪ.

ಅಪಾಯ ತಪ್ಪಿದ್ದಲ್ಲ: ಜುಲೈ 12ರ ಅಂಕಿಅಂಶ ಗಮನಿಸುವುದಾದರೆ ಕರ್ನಾಟಕದಲ್ಲಿ ವರದಿಯಾದ ಕೋವಿಡ್‌ ಪ್ರಕರಣಗಳು 1913. ಅದೇ ದಿನ ಮಹಾರಾಷ್ಟ್ರದಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 3334. ಬೀದರ್‌ ಜಿಲ್ಲೆಯಲ್ಲಿ ಜುಲೈ 12ರಂದು ಎರಡು ಪ್ರಕರಣ ವರದಿಯಾಗಿದ್ದು, ಸಕ್ರಿಯ ಪ್ರಕರಣ 24 ಮಾತ್ರ. ಈ ವರೆಗೆ ಕೋವಿಡ್‌ನಿಂದ ಸತ್ತವರು 395 ಜನ. ಕಲಬುರ್ಗಿ ಜಿಲ್ಲೆಯಲ್ಲೂ ಅಷ್ಟೇ, ಮಂಗಳವಾರ ವರದಿಯಾದ ಪ್ರಕರಣ ಎರಡು ಮಾತ್ರ. ಸಕ್ರಿಯ ಪ್ರಕರಣಗಳು 178. ಒಟ್ಟು ಕೋವಿಡ್‌ ಸಾವು 815. ಈ ದಿನ ಎರಡೂ ಜಿಲ್ಲೆಗಳಲ್ಲಿ ಕೋವಿಡ್‌ನಿಂದ ಸಾವು ಸಂಭವಿಸಿಲ್ಲ ಎಂಬುದು ಆರೋಗ್ಯ ಇಲಾಖೆಯ ಮಾಹಿತಿ.

ಲಸಿಕೆಯಲ್ಲೂ ಹಿಂದೆ: ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳು ಲಸಿಕಾಕರಣದಲ್ಲಿ ಅಷ್ಟೇನು ಸಾಧನೆ ಮಾಡಿಲ್ಲ. ಕಲಬುರ್ಗಿ ಜಿಲ್ಲೆಯಲ್ಲಿ ಆಗಿರುವ ಸಾಧನೆ ಶೇ 30ರಷ್ಟು ಮಾತ್ರ. ಜುಲೈ 12ರ ವರೆಗೆ ಕಲಬುರ್ಗಿ ಜಿಲ್ಲೆಯಲ್ಲಿ ಮೊದಲ ಡೋಸ್‌ ಲಸಿಕೆ ಪಡೆದವರು 5,48,328 ಜನರಾದರೆ, ಎರಡನೇ ಡೋಸ್‌ ಪಡೆದವರು 1,12,874 ಮಾತ್ರ. ಬೀದರ್‌ ಜಿಲ್ಲೆಯಲ್ಲಿ 4,67,421 ಜನರು ಮೊದಲ ಡೋಸ್‌ ಲಸಿಕೆ ಪಡೆದಿದ್ದರೆ, ಎರಡನೇ ಡೋಸ್‌ ಪಡೆದವರ ಸಂಖ್ಯೆ 1,00,756 ಮಾತ್ರ.

‘ಕಲಬುರ್ಗಿ ಜಿಲ್ಲೆಯಲ್ಲಿ 62 ಸಾವಿರ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಗುರಿ  ಇದೆ. ಈ ವರೆಗೆ 31,600 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ ಶೇ 50ರಷ್ಟು ಗುರಿ ಸಾಧಿಸಿದ್ದೇವೆ’ ಎನ್ನುತ್ತಾರೆ ಲಸಿಕಾಕರಣದ ಉಸ್ತುವಾರಿ ವಹಿಸಿಕೊಂಡಿರುವ ಹಿಂದುಳಿದ ವರ್ಗಗಳ ಇಲಾಖೆಯ ಕಲಬುರ್ಗಿ ಜಿಲ್ಲಾ ಅಧಿಕಾರಿ ರಮೇಶ ಸಂಗಾ.

‘ಲಸಿಕಾಕರಣ ಇದೇ ವೇಗದಲ್ಲಿ ಸಾಗಿದರೆ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಇನ್ನೂ ಒಂದು ತಿಂಗಳು ಬೇಕು’ ಎಂಬುದು ಹೆಸರು ಬಹಿರಂಗಪಡಿಸಲು ಒಲ್ಲದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುವ ಮಾತು.

ಗೃಹ ಸಚಿವರ ಎಚ್ಚರಿಕೆ: ರಾಜ್ಯದಲ್ಲಿ ಕೋವಿಡ್‌ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಅಂತರ ರಾಜ್ಯ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯದ ಗಡಿ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ.

‘ಕಳೆದ ಬಾರಿ ಮಹಾರಾಷ್ಟ್ರ ಮತ್ತು ಕೇರಳದಿಂದ ಜನರು ಯಾವುದೇ ತಪಾಸಣೆ ಇಲ್ಲದೆ ಬರಲು ಅವಕಾಶ ನೀಡಿದ್ದರಿಂದ ರಾಜ್ಯದಲ್ಲಿ ಕೋವಿಡ್‌ ಸೋಂಕು ಹೆಚ್ಚಾಗಿತ್ತು’ ಎಂದು ಒಪ್ಪಿಕೊಂಡಿರುವ ಅವರು, ‘ಈ ಬಾರಿ ಅಂತಹ ಸಂದರ್ಭ ಮರುಕಳಿಸಲು ಅವಕಾಶ ನೀಡಬಾರದು. ಸೋಂಕು ಇರುವವರು ಕಣ್ತಪ್ಪಿಸಿ ರಾಜ್ಯ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಸೋಂಕು ಲಕ್ಷಣಗಳು ಇರುವವರ ಗಂಟಲು ಮತ್ತು ಮೂಗಿನ ದ್ರವದ ಮಾದರಿ ಪಡೆದು ಪರೀಕ್ಷಿಸಲು ಗಡಿಯಲ್ಲೇ ವ್ಯವಸ್ಥೆ ಮಾಡಿಕೊಳ್ಳಬೇಕು. ಆರೋಗ್ಯ ಇಲಾಖೆ ಸಹಯೋಗದಲ್ಲಿ ಈ ಕೆಲಸ ಮಾಡಬೇಕು’ ಎಂಬ ಅವರ ಸಲಹೆ ಈ ಜಿಲ್ಲೆಗಳಲ್ಲಿ ಇನ್ನಷ್ಟೇ  ಕಾರ್ಯರೂಪಕ್ಕೆ ಬರಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು