ಭಾನುವಾರ, ನವೆಂಬರ್ 27, 2022
25 °C

ಕಲಬುರಗಿ; ಜಿಲ್ಲೆಯ ಹಲವೆಡೆ ಸಾಧಾರಣ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ಸಾಧಾರಣ ಮಳೆ ಸುರಿಯಿತು.

ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ರಾತ್ರಿ ಆಗುತ್ತಿದ್ದಂತೆಯೇ ದಟ್ಟ ಮೋಡಗಳು ಆವರಿಸಿಕೊಂಡು ಮಳೆ ಸುರಿಯಲಾರಂಭಿಸಿತು. ಇದರಿಂದಾಗಿ ವಿಜಯದಶಮಿಯ ಬನ್ನಿ ವಿನಿಮಯದಲ್ಲಿ ತೊಡಗಿದವರು ಮಳೆಯಲ್ಲಿ ನೆನೆದು ಆಪ್ತರಿಗೆ ಶುಭಕೋರಿದರು.

ಕಲಬುರಗಿ ನಗರ ಮತ್ತು ತಾಲ್ಲೂಕು, ಚಿಂಚೋಳಿ, ಚಿತ್ತಾಪುರ, ಸೇಡಂನ ಕೆಲವು ಪ್ರದೇಶಗಳಲ್ಲಿ 20ರಿಂದ 40 ಮಿ.ಮೀ.ವರೆಗೂ ಮಳೆಯಾಗಿದೆ. ಉಳಿದಂತೆ ಶಹಬಾದ್, ಅಫಜಲಪುರದಲ್ಲಿ ಹಗುರ ಮಳೆ ಬಿತ್ತು.

ನಗರ ವ್ಯಾಪ್ತಿಯಲ್ಲಿ 27 ಮಿ.ಮೀಟರ್‌ನಷ್ಟು ಮಳೆ ಆಯಿತು. ನಗರದಲ್ಲಿನ ಚರಂಡಿಗಳು ತುಂಬಿ ಹರಿದು ರಸ್ತೆಗಳಲ್ಲಿ ವ್ಯಾಪಿಸಿತು. ಖರ್ಗೆ ಪೆಟ್ರೋಲ್ ಬಂಕ್, ಲಾಲಗೇರಿ ಕ್ರಾಸ್, ಆನಂದ ಹೋಟೆಲ್, ಪಿಡಿಎ ಎಂಜಿನಿಯರಿಂಗ್ ಕಾಲೇಜು ಬಳಿಯ ರೈಲ್ವೆ ಕೆಳ ಸೇತುವೆ, ಕೆಕೆಆರ್‌ಟಿಸಿ ಕೇಂದ್ರ ಕಚೇರಿ ಹಿಂಭಾಗದ ರಸ್ತೆ, ಅಗ್ನಿಶಾಮಕ ದಳ ಕಚೇರಿ ಸೇರಿದಂತೆ ಹಲವೆಡೆಯ ತಗ್ಗು ರಸ್ತೆಗಳಲ್ಲಿ ನೀರು ನಿಂತಿತು. ಇದರಿಂದ ವಾಹನ ಸವಾರರಿಗೆ ಕೆಲ ಸಮಯದವರೆಗೆ ಅಡೆಚಣೆಯಾಯಿತು.

ರಾತ್ರಿ ಕಚೇರಿಯ ಕೆಲಸ ಮುಗಿಸಿಕೊಂಡು ತೆರಳಲು ಅಣಿಯಾಗಿದ್ದವರಿಗೆ ಮಳೆ ಕೆಲಹೊತ್ತು ತಡೆಯೊಡ್ಡಿತು. ಕೆಲವು ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿಯೇ ನೆನೆದುಕೊಂಡು ಹೋದದ್ದು ಕಂಡುಬಂತು. ಕೆಲವರು ರಸ್ತೆ ಬದಿ ಮರ, ಕಟ್ಟಡ, ಅಂಗಡಿಗಳ ಮುಂದೆ ನಿಂತು ಮಳೆಯಿಂದ ಆಸರೆಪಡೆದರು.

ಕಲಬುರಗಿ ತಾಲ್ಲೂಕಿನ ನಂದೂರು ಕೆ 47, ಕುಸನೂರು 33, ಔರಾದ 26, ಶ್ರೀನಿವಾಸ ಸರಡಗಿ 14 ಮಿ.ಮೀ, ಫಿರೋಜಬಾದ್, ವಿಮಾನ ನಿಲ್ದಾಣದ ರಸ್ತೆ, ಸಂಚಾರಿ ಹೈಕೋರ್ಟ್‌, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಮಳೆಯಾಯಿತು.

ಚಿತ್ತಾಪುರ ತಾಲ್ಲೂಕಿನ ರಾಂಪುರಹಳ್ಳಿ 26 ಮಿ.ಮೀ., ಚಿಂಚೋಳಿ ತಾಲ್ಲೂಕಿನ ಮೊಗಾ 13 ಮಿ.ಮೀ., ಸೇಡಂ ತಾಲ್ಲೂಕಿನ ಕುಲಕುಂದ 20 ಮಿ.ಮೀ., ಶಹಾಬಾದ್‌ ತಾಲ್ಲೂಕಿನ ತೊನಸನಹಳ್ಳಿ 10 ಮಿ.ಮೀಟರ್‌ನಷ್ಟು ಮಳೆ ಸುರಿಯಿತು.

ಜಿಲ್ಲೆಯ ಹಲವೆಡೆ ತೊಗರಿ ಬೆಳೆಯು ಮೊಗ್ಗು ಬಿಡುವ ಹಂತದಲ್ಲಿದ್ದು, ಬುಧವಾರದ ಮಳೆಗೆ ತಂಪು ಎರೆಯಿತು. ಹಿಂಗಾರಿನ ಬೆಳೆಗಳಾದ ಕಡಲೆ, ಜೋಳ, ಕುಸುಮೆ ಬಿತ್ತನೆ ಅನುಕೂಲವಾಗಲಿದೆ. ಬಿತ್ತನೆ ಆಗುವಷ್ಟು ತೇವಾಂಶ ಇನ್ನ ಆಗಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾದರೇ ಬಿತ್ತನೆ ಮಾಡಲಾಗುವುದು. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಔರದ ಗ್ರಾಮದ ರೈತ ಹೇಳಿದರು.

ಗುರುವಾರ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು