ಬುಧವಾರ, ಆಗಸ್ಟ್ 4, 2021
28 °C
ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ

ಲಸಿಕೆಯುಕ್ತ, ಕೊರೊನಾ ಮುಕ್ತ ಅಭಿಯಾನ: ರಾಜಕುಮಾರ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಈ ವಾರಪೂರ್ತಿ ಬಿಜೆಪಿ ವತಿಯಿಂದ ಪ್ರತಿ ಬೂತ್‌ ಮಟ್ಟದಲ್ಲಿ ಲಸಿಯುಕೆಯುಕ್ತ, ಕೊರೊನಾ ಮುಕ್ತ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಪಕ್ಷದ ರಾಜ್ಯ ವಕ್ತಾರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊರೊನಾ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಸೇವಾ ಹಿ ಸಂಘಟನ್ ಅಭಿಯಾನದ ಮೂಲಕ ಕಷ್ಟದಲ್ಲಿದ್ದವರ ನೆರವಿಗೆ ಪಕ್ಷದ ಕಾರ್ಯಕರ್ತರು ನಿಂತಿದ್ದರು. ಈಗ ಲಸಿಕೆ ಅಭಿಯಾನವನ್ನು ಹೆಚ್ಚಾಗಿ ನಡೆಸಬೇಕಿದೆ. ಅದಕ್ಕಾಗಿ ಜಿಲ್ಲೆಯ ಪ್ರತಿ ಬೂತ್‌ಗೆ ಒಟ್ಟು ಮೂವರು ಪಕ್ಷದ ಸದಸ್ಯರನ್ನು ನಿಯೋಜಿಸಲಾಗುತ್ತದೆ. ಮೂವರ ಪೈಕಿ ಒಬ್ಬರು ವೈದ್ಯಕೀಯ ಜ್ಞಾನ ಇದ್ದವರು, ಇನ್ನೊಬ್ಬರು ಹಿರಿಯರು, ಮತ್ತೊಬ್ಬರು ಮಹಿಳೆ ಇರುತ್ತಾರೆ. ಇದೇ ರೀತಿ ರಾಜ್ಯದ ಎಲ್ಲ ಬೂತ್‌ಗಳಲ್ಲಿಯೂ ತಲಾ ಮೂವರು ಸದಸ್ಯರು ಇರುತ್ತಾರೆ’ ಎಂದರು.

ಜೂನ್ 25ರಂದು ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಕರಾಳ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದು ಅಂದಿನ ಕಾಂಗ್ರೆಸ್ ಸರ್ಕಾರ ಹೇಗೆ ಡಾ.ಬಾಬಸಾಹೇಬ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಮೌಲ್ಯಗಳನ್ನು ಹೇಗೆ ಗಾಳಿಗೆ ತೂರಿದರು ಎಂಬ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

ಜೂ 25, 26ರಂದು ಎರಡು ದಿನಗಳವರೆಗೆ ಪಕ್ಷದ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ನಡೆಯಲಿದೆ. ಮೊದಲ ದಿನ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಲಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದ ರೈತರ ಮಕ್ಕಳಿಗೆ ಇನ್ನಷ್ಟು ಶೈಕ್ಷಣಿಕ ಅವಕಾಶವನ್ನು ನೀಡುವ ಉದ್ದೇಶದಿಂದ ಕೃಷಿ ಕಾಲೇಜುಗಳಲ್ಲಿನ ವಿವಿಧ ಕೋರ್ಸ್‌ಗಳಿಗೆ ರೈತರ ಮಕ್ಕಳಿಗೆ ಶೇ 50ರಷ್ಟು ಮೀಸಲಾತಿಯನ್ನು ನೀಡಿ ಆದೇಶ ಹೊರಡಿಸಿದ್ದಾರೆ. ಇದೊಂದು ಶ್ಲಾಘನೀಯ ಕ್ರಮ ಎಂದರು.

ಪಕ್ಷದ ಜಿಲ್ಲಾ ವಕ್ತಾರ ಅರುಣ ಕುಲಕರ್ಣಿ ಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು