ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪನ ಸಮಸ್ಯೆ; ಸಿ.ಎಂ ಜತೆ ಚರ್ಚಿಸಿ ನಿರ್ಧಾರ- ಕಂದಾಯ ಸಚಿವ ಆರ್‌.ಅಶೋಕ ಭರವಸೆ

ಗಡಿಕೇಶ್ವಾರ, ಹೊಸಳ್ಳಿ (ಎಚ್), ಕೊರವಿ ತಾಂಡಾಗೆ ಭೇಟಿ
Last Updated 20 ಅಕ್ಟೋಬರ್ 2021, 3:55 IST
ಅಕ್ಷರ ಗಾತ್ರ

ಗಡಿಕೇಶ್ವಾರ: ‘ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ಸಂಭವಿಸಿದ ಭೂಕಂಪನದಿಂದ ಯಾವುದೇ ಸಮಸ್ಯೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೂ ಈ ಭಾಗದಲ್ಲಿ ಕಲ್ಲಿನ ಮನೆಗಳೇ ಹೆಚ್ಚಾಗಿರುವ ಕಾರಣ
ಜನರು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಸಲುವಾಗಿ ಸರ್ಕಾರ ಕೂಡ ಎಚ್ಚರಿಕೆ ವಹಿಸುತ್ತದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಭರವಸೆ ನೀಡಿದರು.

ಪದೇ ಪದೇ ಭೂಕಂಪನ ಸಂಭವಿಸಿದ ಗಡಿಕೇಶ್ವಾರ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಗ್ರಾಮಸ್ಥರ ಸಮಸ್ಯೆ ಆಲಿಸಿ ಮಾತನಾಡಿದರು.

‘ದೇಶದ ಅತ್ಯುನ್ನತ ಭೂ ವಿಜ್ಞಾನಿಗಳ ತಂಡ ಇಲ್ಲಿ ಅಧ್ಯಯನ ಮಾಡುತ್ತಿದೆ. ಮೊದಲ ದಿನ ಭೂಕಂಪನ ಆದಾಗಲೇ ಸರ್ಕಾರ ಜಾಗೃತವಾಗಿದೆ. ಖುದ್ದಾಗಿ ನಾನು ಹೈದರಾಬಾದ್‌ನ ರಾಷ್ಟ್ರೀಯ ಭೂ ಭೌಗೋಳಿಕ ಸಂಶೋಧನಾ ಸಂಸ್ಥೆ (ಐಜಿಆರ್‌ಎಸ್‌)ಯ ವಿಜ್ಞಾನಿಗಳನ್ನು ಇಲ್ಲಿಗೆ ಕರೆಸಿದ್ದೇನೆ. ಕಾಳಜಿ ಕೇಂದ್ರಗಳಲ್ಲಿ ಗುಣಮಟ್ಟದ ಊಟ ನೀಡುವಂತೆ ತಾಕೀತು ಮಾಡಿದ್ದೇನೆ. ಅಡುಗೆ ಸಿದ್ಧವಾದ
ಮೇಲೆ ಅದನ್ನು ಪರಿಶೀಲಿಸಲು ವೈದ್ಯರನ್ನೂ ನೇಮಿಸಲಾಗಿದೆ’
ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಅಶೋಕ ಹೇಳಿದರು.

‘ಪದೇ ಪದೇ ಪ್ರಕೃತಿ ವಿಕೋಪ ಎದುರಾಗುತ್ತಿದೆ. ಇದರ ಶಾಶ್ವತ ಪರಿಹಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸುತ್ತೇನೆ. ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದು ನಮ್ಮ ಜವಾಬ್ದಾರಿ’ ಎಂದರು.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‌ ರಾಜನ್‌ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್‌ ಶಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಉಪ ವಿಭಾಗಾಧಿಕಾರಿಗಳಾದ ಮೋನಾ ರೂಟ್,ಅಶ್ವಿಜಾ ಬಿ. ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಮಲ್ಲಿಕಾರ್ಜುನ ಜೇರಟಗಿ, ಕೃಷ್ಣ ಅಗ್ನಿಹೋತ್ರಿ, ಚಿಂಚೋಳಿ ತಹಶೀಲ್ದಾರ್‌ ಅಂಜುಮ್ ತಬಸ್ಸುಮ್, ಕಾಳಗಿ ತಹಶೀಲ್ದಾರ್‌ ನಾಗನಾಥ ತರಗೆ ಇದ್ದರು.

ನಂತರ ಸಚಿವರು ಭೂಕಂಪನ ಪೀಡಿತ ಕಾಳಗಿ ತಾಲ್ಲೂಕಿನ ಹೊಸಳ್ಳಿ (ಎಚ್) ಮತ್ತು ಕೊರವಿ (ರಾಮನಗರ ತಾಂಡಾ)ಗೆ ಭೇಟಿ ನೀಡಿ ಗ್ರಾಮಸ್ಥರ ಕುಂದುಕೊರತೆ ಆಲಿಸಿದರು.

ಅಪಾಯದ ಮುನ್ಸೂಚನೆ ಅಲ್ಲ: ವಿಜ್ಞಾನಿಗಳ ಸ್ಪ‍ಷ್ವನೆ

‘ಗಡಿಕೇಶ್ವಾರ ಸುತ್ತ ಸಂಭವಿಸಿದ ಭೂಕಂಪನ ಅಪಾಯಕಾರಿ ಅಲ್ಲ. ಮುಂದೆ ಸಂಭವಿಸಬಹುದಾದ ದೊಡ್ಡ ಅಪಾಯದ ಸೂಚನೆಯೂ ಇದಲ್ಲ. ಪ‍್ರಕೃತಿಯಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆ ಅಷ್ಟೇ. ಮೈಕ್ರೊ ಸೆಕೆಂಡ್‌ಗಳ ಅಳತೆಯಲ್ಲೇ ಕಂಪನವಾಗಿದೆ’ ಎಂದು ಹೈದರಾಬಾದ್‌ನ ರಾಷ್ಟ್ರೀಯ ಭೂ ಭೌತವಿಜ್ಞಾನ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಶಶಿಧರ ಸ್ಪಷ್ಟಪಡಿಸಿದರು.

‘ಈ ರೀತಿಯ ಮೈಕ್ರೊ ಕಂಪನಗಳು ವಿಶ್ವದಾದ್ಯಂತ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಸಂಭವಿಸುತ್ತವೆ. ಎಲ್ಲಿಯೂ ಅಪಾಯ ಆಗಿಲ್ಲ. ಅತಿಹೆಚ್ಚು ಮಳೆಯಾದಾಗ ನೀರಿನ ಒತ್ತಡ ಹೆಚ್ಚಾಗಿ, ಭೂಮಿಯ 4ರಿಂದ 5 ಕಿ.ಮೀ ಅಳದಲ್ಲಿ ಪದರುಗಳ ಘರ್ಷಣೆ ಏರ್ಪಡುತ್ತದೆ. ಅದರಿಂದ ಅಪಾಯ ಏನೂ ಇಲ್ಲ. ಇನ್ನೂ ಒಂದು ತಿಂಗಳು ನಿರಂತರ ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸುತ್ತೇವೆ’ ಎಂದರು. ಎನ್‌ಜಿಆರ್‌ಐನ ಹಿರಿಯ ವಿಜ್ಞಾನಿ ಡಾ.ಕೃಷ್ಣಮೋಹನ್‌ ಸೇರಿ 12 ವಿಜ್ಞಾನಿಗಳ ತಂಡ ಈ ಸಂಶೋಧನೆ ನಡೆಸಿದೆ.

‘ಸಿದ್ದರಾಮಯ್ಯ ಸಿ.ಎಂ ಇದ್ದಾಗ ಏನು ಮಾಡಿದರು?’

‘ಗಡಿಕೇಶ್ವಾರಕ್ಕೆ ಬಂದು ಸಿದ್ದರಾಮಯ್ಯ ಅವರು ವಿನಾಕಾರಣ ಗುಡುಗಿ, ಚಪ್ಪಾಳೆ ಗಿಟ್ಟಿಸಿಕೊಂಡು ಹೋಗಿದ್ದಾರೆ. ಇಲ್ಲಿ 10 ವರ್ಷಗಳಿಂದಲೂ ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಏಕೆ ಇಲ್ಲಿಗೆ ಬಂದು ಸಮಸ್ಯೆ ಬಗೆಹರಿಸಲಿಲ್ಲ’ ಎಂದು ಸಚಿವ ಆರ್.ಅಶೋಕ ಪ್ರಶ್ನಿಸಿದರು.

‘ಸರ್ಕಾರದ ಬಳಿ ಹಣವಿಲ್ಲದಿದ್ದರೆ ನಾವು ಚಂದಾ ಎತ್ತಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈಗ ಚಂದಾ ಎತ್ತುವ ಬದಲು ಅವರು ಸಿ.ಎಂ ಆಗಿದ್ದಾಗ ಜವಾಬ್ದಾರಿಯಿಂದ ಕೆಲಸ ಮಾಡಿದ್ದರೆ ಸಾಕಿತ್ತು. ಈ ಸಮಸ್ಯೆ ಬಗೆಹರಿಯುತ್ತಿತ್ತು’ ಎಂದು ತಿರುಗೇಟು ನೀಡಿದರು.

‘ನಮಗೆ ಪಾಠ ಕಲಿಸುವುದಾಗಿ ಡಾ.ಶರಣಪ್ರಕಾಶ ಪಾಟೀಲ ಅವರು ಪದೇ ಪದೇ ಹೇಳುತ್ತಲೇ ಇದ್ದಾರೆ. ಇವರಿಗೆ, ಇವರ ಪಕ್ಷಕ್ಕೆ ಇಡೀ ದೇಶದಾದ್ಯಂತ ಜನ ಪಾಠ ಕಲಿಸಿದ್ದಾರೆ. ಕಾಂಗ್ರೆಸ್‌ ಪಕ್ಷ ಈಗ ಪ್ರಾದೇಶಿಕ ಪಕ್ಷಕ್ಕಿಂತಲೂ ಚಿಲ್ಲರೆಯಾಗಿ ಹೋಗಿದೆ. ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳಲ್ಲಿ ವಿಲೀನಗೊಂಡು ಕಾಂಗ್ರೆಸ್‌ ನಿರ್ಣಾಮ ಎಂದು ಘೋಷಿಸಿಕೊಳ್ಳುವುದು ಒಳ್ಳೆಯದು’ ಎಂದೂ ಮೂದಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT