ಗುರುವಾರ , ಮಾರ್ಚ್ 4, 2021
24 °C
ವಿಶ್ವಾರಾಧ್ಯ ಕಾಲೊನಿ: ಒಡೆದ ನೀರಿನ ಪೈಪ್‌, ವ್ಯರ್ಥವಾಗಿ ಹರಿಯುತ್ತಿರುವ ನೀರು

ಕಲಬುರ್ಗಿ: ನಡುರಸ್ತೆಯಲ್ಲೊಂದು ‘ನೀರಿನ ಬುಗ್ಗೆ’

ಕಲ್ಮೇಶ ಹ. ತೋಟದ Updated:

ಅಕ್ಷರ ಗಾತ್ರ : | |

Deccan Herald

ಕಲಬುರ್ಗಿ: ಇಲ್ಲಿಯ 19ನೇ ವಾರ್ಡ್‌ ವ್ಯಾಪ್ತಿಯ ವಿಶ್ವಾರಾಧ್ಯ ಕಾಲೊನಿ ಮುಖ್ಯರಸ್ತೆಯಲ್ಲಿ ಎರಡು ವರ್ಷಗಳಿಂದ ನೀರು ಪೋಲಾಗುತ್ತಿದೆ.

ನಡುರಸ್ತೆಯಲ್ಲಿಯೇ ನೀರಿನ ಪೈಪ್‌ ಒಡೆದಿದ್ದು, ಹೊಂಡ ಬಿದ್ದಿದೆ. ಇದರಿಂದ ಅಲ್ಲಿ ನಿತ್ಯವೂ ಸಣ್ಣಪುಟ್ಟ ಅಪಘಾತ ಸಾಮಾನ್ಯ ಎಂಬಂತಾಗಿದೆ. 

ಕುಡಿಯುವ ನೀರಿನ ಅಭಾವದಿಂದ ನಗರದೆಲ್ಲೆಡೆ ಜನ ವಿಪರೀತ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಬಡಾವಣೆ
ಗಳಲ್ಲಿ ಚರಂಡಿ ಮಿಶ್ರಿತ ನೀರನ್ನೇ ಜನ ಅನಿವಾರ್ಯವಾಗಿ ಬಳಸುತ್ತಾರೆ. ಆದರೆ, ಇಲ್ಲಿ ಮಾತ್ರ ನಿತ್ಯ ನೀರು ಪೋಲಾಗುತ್ತಿದೆ.

ಆಳಂದ ನಾಕಾ ಸಂಪರ್ಕಿಸುವ ರಸ್ತೆ ಮಧ್ಯದಲ್ಲಿ ಪೈಪ್‌ ಒಡೆದಿದ್ದು, ರಸ್ತೆಯಲ್ಲಿಯೂ ಹಲವು ಗುಂಡಿಗಳು ಬಿದ್ದು ಅದರಲ್ಲಿ ನೀರು ನಿಲ್ಲುತ್ತಿದೆ.

‘ರಸ್ತೆ ನಿರ್ಮಿಸಿ ವರ್ಷವೂ ಆಗಿಲ್ಲ. ಅದಾಗಲೇ ಗುಂಡಿ ಬಿದ್ದಿವೆ. ದಿನವೊಂದಕ್ಕೆ ಕಡಿಮೆ ಎಂದರೂ ನಾಲ್ಕರಿಂದ ಐದು ದ್ವಿಚಕ್ರವಾಹನ ಸವಾರರು ಇಲ್ಲಿನ ಗುಂಡಿಗೆ ಬಿದ್ದು ಗಾಯ ಗೊಳ್ಳುವುದು  ಸಾಮಾನ್ಯ. ಬೀದಿ ದೀಪಗಳು ಸುಟ್ಟು 6 ತಿಂಗಳಾದರೂ ಸಂಬಂಧಪಟ್ಟವರು ದೀಪಗಳನ್ನು ಬದಲಿಸುವ ವ್ಯವಸ್ಥೆ ಮಾಡಿಲ್ಲ. ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಇದರಿಂದ ತೊಂದರೆ ಉಂಟಾಗುತ್ತಿದೆ’ ಎನ್ನುತ್ತಾರೆ ನಿವಾಸಿ ಮಹಾದೇವ ಕುಷ್ಟಗಿ.

‘ನಗರಕ್ಕೆ ಬರುವ ಎಲ್ಲ ಜನಪ್ರತಿನಿಧಿಗಳು ಇದೆ ಮಾರ್ಗವಾಗಿ ಸಂಚರಿಸುತ್ತಾರೆ. ಆದರೆ, ಎಲ್ಲರೂ ಕಂಡು ಕಾಣದಂತೆ ಹೋಗುತ್ತಾರೆ. ಯಾರೊ
ಬ್ಬರೂ ಇದರ ಕುರಿತು ಗಂಭೀರವಾಗಿ ಚಿಂತಿಸುತ್ತಿಲ್ಲ’ ಎಂದು ಜೀತೇಂದ್ರ ಮಠಪತಿ ಬೇಸರ ವ್ಯಕ್ತಪಡಿಸಿದರು.

‘ಈ ಕುರಿತು ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ವರದಿ ಸಹ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಹಲವಾರು ಬಾರಿ ಮನವಿ ಸಲ್ಲಿಸಿ ಬೇಸತ್ತು ಹೋಗಿದ್ದೇವೆ’ ಎನ್ನುತ್ತಾರೆ ನಿವಾಸಿ ಅಶೋಕ ಅಣಕಲ್‌.

ಈ ಕುರಿತು ಪಾಲಿಕೆ ಸದಸ್ಯ ಅಬ್ದುಲ್‌ ರಹಿಮ್‌ ಅವರನ್ನು ಮಾತನಾಡಿಸಿದಾಗ, ‘ವಿಶ್ವಾರಾಧ್ಯ ಕಾಲೊನಿಯಲ್ಲಿ ಪೈಪ್‌ ಒಡೆದು ನೀರು ಪೋಲಾಗುತ್ತಿರುವುದನ್ನು ತಡೆಯಲು ಹಲವಾರು ಬಾರಿ ಯೋಚಿಸಿದ್ದೇವೆ. ಆದರೆ, ಒಡೆದ ನೀರಿನ ಪೈಪ್‌ನ ಕಾಮಗಾರಿಗೆ ಕನಿಷ್ಠ 6– 7 ದಿನಗಳ ಸಮಯ ಬೇಕು. ಆ ಸಮಯದಲ್ಲಿ ನೀರು ಬರದಂತೆ ತಡೆಹಿಡಿಯಬೇಕು. ವಾರಗಟ್ಟಲೇ ನೀರು ಬಂದ್‌ ಮಾಡಿದರೆ ಅಕ್ಕಪಕ್ಕದ ನಾಲ್ಕೈದು ಬಡಾವಣೆಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಕಾಮಗಾರಿ ಆರಂಭ ಮಾಡಿಲ್ಲ. ಶೀಘ್ರದಲ್ಲೆ ದುರಸ್ತಿ ಮಾಡುತ್ತೇವೆ’ ಎನ್ನುತ್ತಾರೆ.

*
ನೀರು ಬರುತ್ತಿಲ್ಲ ಎಂದು ಎಲ್ಲ ಬಡಾವಣೆ ನಿವಾಸಿಗಳು ಬೇಸರಿಸಿಕೊಂಡರೆ, ನಮ್ಮಲ್ಲಿ ನೀರು ನಿಲ್ಲದೇ ಹರಿಯುತ್ತಿದೆ ಎಂದು ಬೇಸರಪಡುವಂತಾಗಿದೆ.
-ಚಂದ್ರಪ್ರಕಾಶ ಗೌಳಿ, ಸ್ಥಳೀಯ ನಿವಾಸಿ

*
ನೀರು ಚರಂಡಿ ಸೇರುತ್ತಿದ್ದು, ಶೀಘ್ರವೇ ಪೈಪ್‌ನ್ನು ದುರಸ್ತಿಗೊಳಿಸಬೇಕು. ಗುಂಡಿ ಬಿದ್ದ ರಸ್ತೆಯನ್ನು ಸರಿಪಡಿಸಿ ಅಪಘಾತಗಳನ್ನು ತಪ್ಪಿಸಬೇಕು.
-ಈರಣ್ಣ ಪಾಟೀಲ,ಸ್ಥಳೀಯ ನಿವಾಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು