ಮಂಗಳವಾರ, ಫೆಬ್ರವರಿ 18, 2020
26 °C
ಸಿಯುಕೆ: ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯಲ್ಲಿ ಡಾ.ಗೊಳಸಂಗಿ ಬೇಸರ

ಇತಿಹಾಸದಲ್ಲಿ ಸೂಕ್ತ ಸ್ಥಾನ ಪಡೆಯದ ಫುಲೆ ದಂಪತಿ: ಡಾ.ಗೊಳಸಂಗಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇತಿಹಾಸದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಸರಿಪಡಿಸುವುದು ತುಂಬಾ ಕಷ್ಟ. ಜ್ಯೋತಿಬಾಪುಲೆ ಮತ್ತು ಸಾವಿತ್ರಿಬಾಯಿ ಪುಲೆ ಅವರನ್ನು ಇತಿಹಾಸದಲ್ಲಿ ಎಲ್ಲೂ ಸೇರಿಸಲಿಲ್ಲ. ಭಾರತದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಪುಲೆ ಅವರನ್ನು ಇತಿಹಾಸದಲ್ಲಿ ಸೇರಿಸದಿರುವುದಕ್ಕೆ ಅವರು ದಲಿತ ವರ್ಗಕ್ಕೆ ಸೇರಿದವರು ಎಂಬ ಕಾರಣವಿರಬಹುದು ಎಂದು ಹುಲಕೋಟಿಯ ಡಾ. ಅರ್ಜುನ್ ಗೊಳಸಂಗಿ ಹೇಳಿದರು.

ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮಾತಾ ಸಾವಿತ್ರಿಬಾಯಿ ಪುಲೆ ಅವರ ಜಯಂತ್ಯುತ್ಸವ ಕುರಿತು ಅವರು ಮಾತನಾಡಿದರು.

ಜ್ಯೋತಿಬಾ ಪುಲೆ ದಂಪತಿ ದೇಹ ಎರಡು ಆತ್ಮ ಒಂದೇ ಎಂಬಂತೆ ಬದುಕಿದರಲ್ಲದೆ ಸಾಮಾಜಿಕ ಬದಲಾವಣೆಗೆ ಒಟ್ಟಾಗಿ ದುಡಿದರು. ಪೇಶ್ವೆಗಳ ಆಳ್ವಿಕೆಯ ಕಾಲದಲ್ಲಿ ಸುಮಾರು 18 ಶಾಲೆಗಳನ್ನು ತೆರೆದು ಹಸಿವು ಹಾಗೂ ಬಡತನದಿಂದ ನೊಂದ ದಲಿತ ಜನಾಂಗಕ್ಕೆ ಅನ್ನ ದಾನ ಮತ್ತು ಶಿಕ್ಷಣ ದಾನ ಮಾಡಿದರು. ಅಂದಿನ ಸಾಮಾಜಿಕ ಪರಿಸ್ಥಿತಿ ಜಡ್ಡುಗಟ್ಟಿದಂತಿದ್ದು, ಕೇವಲ ಮೇಲ್ವರ್ಗದ ಗಂಡು ಮಕ್ಕಳು ಮಾತ್ರ ಶಿಕ್ಷಣದ ಹಕ್ಕನ್ನು ಪಡೆದಿದ್ದರು. ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ, ಸತಿ ಸಹಗಮನ, ಶಿಕ್ಷಣದಿಂದ ವಂಚನೆ ಹೀಗೆ ಅನೇಕ ರೀತಿಯ ತುಳಿತಕ್ಕೆ ಒಳಪಡಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಪ್ರತಿರೋಧಕ್ಕೆ ಎದೆಗುಂದದೇ ಹೆಣ್ಣು ಮಕ್ಕಳ ಶಿಕ್ಷಣ, ಬಾಲ್ಯ ವಿವಾಹ, ಅಸ್ಪೃಶ್ಯತೆ, ದೇವದಾಸಿ ಹಾಗೂ ಸತಿ ಸಹಗಮನ ಪದ್ಧತಿ ನಿರ್ಮೂಲನೆಗಾಗಿ ಅವಿರತರಾಗಿ ಶ್ರಮಿಸಿದರು. ಹೆಣ್ಣು ಮಕ್ಕಳಿಗೆ ವರದಕ್ಷಿಣೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿಕೊಡುವ ಬದಲು ಅದೇ ಹಣವನ್ನು ಅವರ ಶಿಕ್ಷಣಕ್ಕಾಗಿ ವ್ಯಯಿಸುವ ಮೂಲಕ ಅವರು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕುವಂತೆ ಮಾಡಬೇಕಾದ ಅವಶ್ಯಕತೆಯಿದೆ ಎಂದು ಗೊಳಸಂಗಿ ಹೇಳಿದರು.

ಸಹಕುಲಪತಿ ಪ್ರೊ.ಜಿ.ಆರ್.ನಾಯಕ್, ಕುಲಸಚಿವ ಪ್ರೊ. ಮುಸ್ತಾಕ್ ಅಹ್ಮದ್ ಐ. ಪಟೇಲ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ಬಿ.ಆರ್. ಕೆರೂರ್, ವಿತ್ತಾಧಿಕಾರಿ ಶಿವಾನಂದಂ, ಎಲ್ಲಾ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಸೀಮಾ ಶಾಸ್ತ್ರಿ ನಿರೂಪಿಸಿದರೆ, ರಕ್ಷಂದಾ ಸ್ವಾಗತಿಸಿದರು, ಭಾಗ್ಯಶ್ರೀ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು