ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ: ಹದಗೆಟ್ಟ ರಾಜ್ಯ ಹೆದ್ದಾರಿ, ಕೇಳೋರು ಯಾರು?

Published 21 ಫೆಬ್ರುವರಿ 2024, 4:56 IST
Last Updated 21 ಫೆಬ್ರುವರಿ 2024, 4:56 IST
ಅಕ್ಷರ ಗಾತ್ರ

ಕಾಳಗಿ: ಕಲಬುರಗಿ ನಗರದಿಂದ ಪ್ರವೇಶಿಸಿ ನೆರೆ ರಾಜ್ಯ ಆಂಧ್ರಪ್ರದೇಶ ಸೇರಿಕೊಳ್ಳುವ ಮತ್ತು ಕಾಳಗಿ ತಾಲ್ಲೂಕು ಹಾದುಹೋಗುವ ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ-149 ಅಲ್ಲಲ್ಲಿ ಕಿತ್ತುಹೋಗಿದ್ದು ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ.

ಅದರಲ್ಲಿಯೂ ಹಳೆ ಹೆಬ್ಬಾಳ ಮರಗಮ್ಮ ಗುಡಿ ಮತ್ತು ಚಿಂಚೋಳಿ (ಎಚ್) ನಡುವಿನ 2 ಕಿ.ಮೀ ಹೆದ್ದಾರಿಯಂತೂ ತಗ್ಗು ಗುಂಡಿಗಳ ಸ್ವರ್ಗವಾಗಿದೆ ಎನ್ನುತ್ತಾರೆ ಪ್ರಯಾಣಿಕರು.

ಆಗಿನ ಚಿತ್ತಾಪುರ ಕ್ಷೇತ್ರದ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅಧಿಕಾರ ಅವಧಿಯ 2006ರಲ್ಲಿ ಈ ಹೆದ್ದಾರಿ ಕಾಮಗಾರಿ ನಡೆದಿದೆ. ಆ ಬಳಿಕ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಈ ಪ್ರದೇಶ ಚಿಂಚೋಳಿ ವಿಧಾನಸಭಾ ಕ್ಷೇತ್ರ, ಬೀದರ್ ಲೋಕಸಭಾ ಕ್ಷೇತ್ರಕ್ಕೆ ಹರಿದುಹಂಚಿ ಹೋದ ಬಳಿಕ ಯಾರೊಬ್ಬ ಜನಪ್ರತಿನಿಧಿಯೂ ಈಕಡೆ ಕ್ಯಾರೇ ಎಂದಿಲ್ಲ ಎನ್ನುತ್ತಾರೆ ಚಿಂಚೋಳಿ (ಎಚ್) ಗ್ರಾಮಸ್ಥರು.

ಪರಿಣಾಮ ರಾಜ್ಯಹೆದ್ದಾರಿಯು ಎಲ್ಲೆಂದರಲ್ಲಿ ತಗ್ಗುಬಿದ್ದು ಜಲ್ಲಿಕಲ್ಲು, ಧೂಳಿನ ರಾಶಿ ತೇಲಿ ಕೆಟ್ಟು ಹಾಳಾಗಿದೆ. ಈ ಹೆದ್ದಾರಿಯಲ್ಲಿ ಸಂಚರಿಸುವ ಕಲಬುರಗಿ, ಕಾಳಗಿ, ರಟಕಲ್, ಕಂದಗೂಳ, ಸೂಗೂರ, ಹೆಬ್ಬಾಳ, ಗೋಟೂರ, ಚಿಂಚೋಳಿ (ಎಚ್) ಮಾರ್ಗದ ಸರ್ಕಾರಿ, ಖಾಸಗಿ ವಾಹನ ಸವಾರರು ಪಡಬಾರದ ಕಷ್ಟ ಪಡುತ್ತಿದ್ದು ವಾಹನಗಳು ಬೇಗನೆ ದುರಸ್ತಿಗೆ ಬರುತ್ತಿವೆ ಎನ್ನುತ್ತಾರೆ ಚಾಲಕರು.

ಮೊದಲೇ ಈ ಮಾರ್ಗದಲ್ಲಿ ಬೆರಳೆಣಿಕೆ ಸಂಖ್ಯೆಯ ಬಸ್ಸುಗಳಿವೆ. ಅಂಥದರಲ್ಲೇ ನೂಕು ನುಗ್ಗಲಿನಲ್ಲಿ ಪ್ರಯಾಣಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳು, ನೌಕರರು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೆ ಮುಟ್ಟದೆ ಹೈರಾಣಾಗುತ್ತಿದ್ದಾರೆ.

ಕಾಯಿಲೆಯಿಂದ ನರಳಾಡುವ ತುರ್ತು ಸಂದರ್ಭದ ರೋಗಿಗಳು ಬೇಗನೆ ಆಸ್ಪತ್ರೆಗೆ ತಲುಪಲಾಗದೆ ಹಾದಿ ಹೆಣವಾಗುತ್ತಿದ್ದಾರೆ. ಗರ್ಭಿಣಿ ಮಹಿಳೆಯರು, ವೃದ್ಧರು ಹಿಡಿಶಾಪ ಹಾಕುತ್ತಿದ್ದಾರೆ. ದ್ವಿಚಕ್ರ, ತ್ರಿಚಕ್ರ, ಟ್ರ್ಯಾಕ್ಟರ್, ಕಾರು, ಜೀಪ್ ಚಾಲಕರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ನಡೆಸುವ ಸ್ಥಿತಿ ತಲೆದೋರಿದೆ. ರಾತ್ರಿ ವೇಳೆ ಈ ಮಾರ್ಗ ಅಯೋಮಯವಾಗಿದೆ ಎನ್ನುತ್ತಾರೆ ಅವರು.

ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಈಕಡೆ ಗಮನಹರಿಸಿ ರಾಜ್ಯಹೆದ್ದಾರಿ ದುರಸ್ತಿಗೊಳಿಸಿ ಜನತೆಗೆ ವ್ಯವಸ್ಥಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಒಂದುವೇಳೆ ಈಗಲೂ ನಿರ್ಲಕ್ಷ್ಯವಹಿಸಿದಲ್ಲಿ ಗ್ರಾಮಸ್ಥರು, ಪ್ರಯಾಣಿಕರು, ವಾಹನ ಸವಾರರು ರಸ್ತೆಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಚಿಂಚೋಳಿ (ಎಚ್) ಕಾಡಾ ಅಧ್ಯಕ್ಷ ಅಣ್ಣಾರಾವ ಸಲಗರ, ಅಂಬಣ್ಣಾ ಮೇಸ್ತ್ರಿ, ಮಂಜುನಾಥ ಭಂಡಿ, ಸೂರ್ಯಕಾಂತ ಕಂಚನಾಳ, ಮಲ್ಲು ತೇಲಿ, ಮಶಾಖಪಟೇಲ ದಂಡೋತಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ವಿಶ್ವನಾಥ ಪಾಟೀಲ ಹೆಬ್ಬಾಳ ಅಧಿಕಾರಾವಧಿಯಲ್ಲಿ ಈ ರಸ್ತೆಯಾಗಿದೆ. ಆಮೇಲೆ ನಾಲ್ಕು ಜನ ಶಾಸಕರಾಗಿದ್ದಾರೆ. ಇವರು ಯಾರೂ ಒಂದು ಬುಟ್ಟಿ ಕಂಕರ್ ಡಾಂಬರ್ ಹಾಕಿಲ್ಲ. ಭಗವಂತ ಖೂಬಾ ಅಂತೂ ಈಕಡೆ ಹೊರಳಿ ನೋಡಿಲ್ಲ.
ಪ್ರಕಾಶ ಗಂಜಿ ಗ್ರಾ.ಪಂ ಅಧ್ಯಕ್ಷ ಚಿಂಚೋಳಿ (ಎಚ್)
ನಮ್ಮ ಊರಿನಿಂದ ದಿನಾಲು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಕಲಬುರಗಿಗೆ ಹೋಗಿಬರುತ್ತಾರೆ. ಈ ಹದಗೆಟ್ಟ ಹೆದ್ದಾರಿಯಿಂದ ಅವರು ನಲುಗಿ ಹೋಗುತ್ತಿದ್ದಾರೆ. ಕೂಡಲೇ ಈ ಕಾಮಗಾರಿ ಕೈಗೊಳ್ಳಬೇಕು.
ಮಹಿಬೂಬ ಖುರೇಷಿ ಗ್ರಾ.ಪಂ ಸದಸ್ಯ ಚಿಂಚೋಳಿ (ಎಚ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT