ಕಲಬುರಗಿ: ಗ್ರಾಮೀಣ ವಿಕಲಚೇತನ ಪುನರ್ವಸತಿ ಕಾರ್ಯಕರ್ತನ ಗೌರವಧನ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ವೆಂಕಟೇಶ ದೇಶಪಾಂಡೆ ಸೇರಿದಂತೆ ಮೂವರನ್ನು ಶುಕ್ರವಾರ ಸಂಜೆ ಬಂಧಿಸಿದ್ದಾರೆ.
ಜೇವರ್ಗಿ ತಾಲ್ಲೂಕಿನ ವಿವಿಧೋದ್ದೇಶ ಪುನರ್ವಸತಿ ಅಧಿಕಾರಿ ನಾನಾಗೌಡ ಹೊನ್ನಳ್ಳಿ ಹಾಗೂ ಪ್ರಥಮ ದರ್ಜೆ ಸಹಾಯಕ ಅಮರೇಶ ನಾಯಕ ಬಂಧನಕ್ಕೊಳಗಾದ ಇತರ ಇಬ್ಬರು ಸಿಬ್ಬಂದಿ.
ಯಡ್ರಾಮಿ ತಾಲ್ಲೂಕಿನ ಕರಕಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿಕಲಚೇತನ ಪುನರ್ವಸತಿ ಕಾರ್ಯಕರ್ತರಾಗಿ ಗುರುರಾಜ ಹೇರೂರ ಕೆಲಸ ನಿರ್ವಹಿಸುತ್ತಿದ್ದು, ಮಾಸಿಕ ₹ 9 ಸಾವಿರದಂತೆ ಎಂಟು ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿತ್ತು. ಇದನ್ನು ಬಿಡುಗಡೆ ಮಾಡಬೇಕಾದರೆ ₹ 10 ಸಾವಿರ ಲಂಚ ನೀಡುವಂತೆ ವೆಂಕಟೇಶ ದೇಶಪಾಂಡೆ ಹಾಗೂ ಇತರರು ಗುರುರಾಜ ಅವರಿಗೆ ಸೂಚಿಸಿದ್ದರು.
ವಾರದ ಹಿಂದೆ ಗೌರವಧನವನ್ನು ಬಿಡುಗಡೆ ಮಾಡಲಾಗಿತ್ತು. ಮೊದಲೇ ಒಪ್ಪಿಕೊಂಡಂತೆ ₹ 10 ಸಾವಿರ ಲಂಚದ ಹಣವನ್ನು ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದ ಎದುರಿಗೆ ಇರುವ ಅಂಗವಿಕಲರ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ತಲುಪಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವೆಂಕಟೇಶ ದೇಶಪಾಂಡೆ, ನಾನಾಗೌಡ ಹೊನ್ನಳ್ಳಿ ಹಾಗು ಅಮರೇಶ ನಾಯಕ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಲೋಕಾಯುಕ್ತ ಎಸ್ಪಿ ಎ.ಆರ್. ಕರ್ನೂಲ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.