ಗುರುವಾರ , ಆಗಸ್ಟ್ 11, 2022
23 °C
ಎನ್‌ಇಕೆಆರ್‌ಟಿಸಿ: ಒಂದೇ ದಿನಕ್ಕೆ ₹ 4.15 ಕೋಟಿ ಹಾನಿ

ಮುಷ್ಕರ ಇನ್ನಷ್ಟು ಬಿಗಿ; ರಸ್ತೆಗಿಳಿಯದ 3,800 ಬಸ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಸಾರಿಗೆ ಸಂಸ್ಥೆ  ಸಿಬ್ಬಂದಿಯನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರ ಶನಿವಾರ ಇನ್ನಷ್ಟು ಬಿಗಿ ಪಡೆದಿದೆ. ಇದರಿಂದ ಎರಡನೇ ದಿನವೂ ಯಾವುದೇ ಬಸ್‌ ನಿಲ್ದಾಣದ ಹೊರಗೆ ಕಾಲಿಡಲಿಲ್ಲ. ಪ್ರಯಾಣಿಕರಿಗೆ ಮತ್ತೂ ಪರದಾಟ ತಪ್ಪಲಿಲ್ಲ.

ಶನಿವಾರ ನಸುಕಿನಲ್ಲೇ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಯಾವೊಬ್ಬ ಚಾಲಕ, ನಿರ್ವಾಹ ಹಾಗೂ ಇತರ ವಿಭಾಗಗಳ ಸಿಬ್ಬಂದಿಯೂ ಸುಳಿಯಲಿಲ್ಲ. ಶುಕ್ರವಾರ ನಡೆಸಿದ ಮುಷ್ಕರದ ಕಾರಣ, ಶನಿವಾರ ಬಹಳಷ್ಟು ಪ್ರಯಾಣಿಕರು ನಿಲ್ದಾಣಗಳತ್ತ ಬಂದಿರಲಿಲ್ಲ. ಆದರೂ ಪ್ರಯಾಣ ಅನಿವಾರ್ಯ ಇದ್ದ ನೂರಾರು ಮಂದಿ ರಾತ್ರಿಯಿಡೀ ಬಸ್‌ ಬಲ್ದಾಣದಲ್ಲೇ ಕಾದು ಕುಳಿತುಕೊಂಡರು. 

₹ 4.15 ಕೋಟಿ ಹಾನಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 19,000 ನೌಕರರು ಇದ್ದು, 4,600 ಬಸ್‌ಗಳಿವೆ. ಈಗ 3,800 ಬಸ್‌ ನಿಲ್ಲಿಸಲಾಗಿದೆ. ಎಲ್ಲ ನೌಕರರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಶನಿವಾರ ಬಸ್ ಓಡಾಟ ಸಂಪೂರ್ಣ ನಿಂತಿದ್ದರಿಂದ ಒಂದೇ ದಿನಕ್ಕೆ ₹ 4.15 ಕೋಟಿ ಹಾನಿ ಅಂದಾಜಿಸಲಾಗಿದೆ ಎಂದು ಸಂಸ್ಥೆಯ ಲೆಕ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

ಅನಿವಾರ್ಯ ಹಾಗೂ ತುರ್ತು ಸಂದರ್ಭಗಳ ನಿರ್ವಹಣೆಗಾಗಿ ಶುಕ್ರವಾರ 410ಕ್ಕೂ ಹೆಚ್ಚು ಬಸ್‌ಗಳನ್ನು ಓಡಿಸಲಾಗಿತ್ತು. ಇದರಿಂದ ₹ 1.5 ಕೋಟಿ ಹಾನಿ ಸಂಭವಿಸಿದೆ. ಆದರೆ, ಶನಿವಾರ ಎಲ್ಲವನ್ನೂ ನಿಲ್ಲಿಸಲಾಗಿದೆ. ಮಹಾರಾಷ್ಟ್ರಕ್ಕೆ ಹೋಗುವ ಪ್ರಯಾಣಿಕರಿಗೆ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ, ಬೀದರ್‌ ಮಾರ್ಗದ 49 ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತಿದೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಕರು ತಿಳಿಸಿದರು.

ಸಿಬ್ಬಂದಿ ಪ್ರತಿಭಟನೆ: ತಮ್ಮ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಯಾವುದೇ ಕಾರಣಕ್ಕೂ ಮುಷ್ಕರ ಹಿಂದೆ ಪಡೆಯುವುದಿಲ್ಲ ಎಂದು ಎನ್‌ಇಕೆಎಸ್‌ಆರ್‌ಟಿಸಿ ಸಿಬ್ಬಂದಿ ಶನಿವಾರ ಪ್ರತಿಭಟನೆ ನಡೆಸಿದರು.

ಬಸ್‌ ನಿಲ್ದಾಣದಲ್ಲಿ ಜಮಾವಣೆಗೊಂಡ ನೂರಕ್ಕೂ ಹೆಚ್ಚು ಚಾಲಕ ಹಾಗೂ ನಿರ್ವಾಹಕರು ‘ಬೇಕೇ ಬೇಕು ನ್ಯಾಯ ಬೇಕು. ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೂ ಮುಷ್ಕರ ನಿಲ್ಲದು’ ಎಂದು ಘೋಷಣೆ ಕೂಗಿದರು.

ಶವ ಸಂಸ್ಕಾರಕ್ಕೂ ಹೋಗಲಾಗಲಿಲ್ಲ:‌ ‘ನಾನು ಯಡ್ರಾಮಿಗೆ ಹೋಗಬೇಕಿದೆ. ಊರಲ್ಲಿ ಸಂಬಂಧಿಯೊಬ್ಬರು ತೀರಿಕೊಂಡಿದ್ದಾರೆ. ಶುಕ್ರವಾರ ಅವರ ಶವ ಸಂಸ್ಕಾರಕ್ಕೂ ಹೋಗಲಾಗಲಿಲ್ಲ. ಇವತ್ತಾದರೂ ಹೋಗೋಣವೆಂದರೂ ಇವತ್ತೂ ಬಸ್‌ಗಳಿಲ್ಲ. ಕಾರ್‌ ಮಾಡಿಕೊಂಡು ಹೋಗುವಷ್ಟು ಶಕ್ತಿ ನನ್ನ ಬಳಿ ಇಲ್ಲ. ಏನು ಮಾಡಲಿ ತಿಳಿಯುತ್ತಿಲ್ಲ’ ಎಂದು ಬಸ್‌ಗಾಗಿ ಶುಕ್ರವಾರ ರಾತ್ರಿಯಿಂದ ಕಾಯುತ್ತ ಕುಳಿತಿದ್ದ ಸೋನಾಬಾಯಿ ಜಾಧವ ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು