ಶುಕ್ರವಾರ, ಡಿಸೆಂಬರ್ 3, 2021
20 °C
ಕಲಬುರ್ಗಿಯಲ್ಲಿ ಮಕ್ಕಳ ಜೊತೆ ಬಿಸಿಯೂಟ ಸೇವಿಸಿದ ಶಿಕ್ಷಣ ಸಚಿವ ನಾಗೇಶ್

'ಶಿಕ್ಷಕರ ನೇಮಕಕ್ಕೆ ವರ್ಷಕ್ಕೆ ಎರಡು ಬಾರಿ ಸಿಇಟಿ: ಸಚಿವ ನಾಗೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಶಿಕ್ಷಕರ ನೇಮಕಾತಿಗೆ ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಅಧಿಸೂಚನೆ ಹೊರಡಿಸಿದಷ್ಟು ಸಂಖ್ಯೆಯ ಶಿಕ್ಷಕರು ಪಾಸಾಗುತ್ತಿಲ್ಲ. ಹೀಗಾಗಿ ವರ್ಷಕ್ಕೆ ಎರಡು ಬಾರಿ ಸಿಇಟಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ‌ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ಇಲ್ಲಿನ ಆದರ್ಶ ನಗರ ಸರ್ಕಾರಿ ಪ್ರೌಢಶಾಲೆ ಹಾಗೂ ‌ಪಿ.ಯು. ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ‌ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಬಾರಿ ಸಿಇಟಿ ಪರೀಕ್ಷೆ ‌ನಡೆಸಿದಾಗ ಕೇವಲ 3 ಸಾವಿರ ಶಿಕ್ಷಕರು ಮಾತ್ರ ಪಾಸಾದರು. ಇನ್ನೂ ಹೆಚ್ಚಿನ ಸಂಖ್ಯೆಯ ಶಿಕ್ಷಕರ ಅಗತ್ಯವಿತ್ತು. ಇದನ್ನು ಗಮನದಲ್ಲಿರಿಸಿಕೊಂಡು ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ನಡೆಸಲಾಗುವುದು. ಸದ್ಯದಲ್ಲೇ 5 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. ಅಷ್ಟೂ ಹುದ್ದೆಗಳಿಗೆ ಅಗತ್ಯವಾದಷ್ಟು ಶಿಕ್ಷಕರು ಪಾಸಾಗುವವರೆಗೂ ಸಿಇಟಿ ನಡೆಯಲಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಶಿಕ್ಷಕರ ಹುದ್ದೆ ನೇಮಕ ಮಾಡಿಕೊಳ್ಳುವ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಅಲ್ಲದೇ, ಸರ್ಕಾರಿ ಶಾಲೆಯಲ್ಲಿ ‌ಮೂಲಸೌಕರ್ಯ ಕಲ್ಪಿಸಲೂ ಸೂಚನೆ ನೀಡಿದ್ದಾರೆ ‌ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಮಟ್ಟ ಕುಸಿಯುವ ಭೀತಿಯಿಂದ ಇಲ್ಲಿ ಕರ್ತವ್ಯ ‌ನಿರ್ವಹಿಸುತ್ತಿರುವ ಶಿಕ್ಷಕರನ್ನು ಬೇರೆ ವಿಭಾಗಕ್ಕೆ ‌ವರ್ಗಾವಣೆ‌ ಮಾಡಿಲ್ಲ. ಕಳೆದ ಮೂರು ತಿಂಗಳಲ್ಲಿ ಒಬ್ಬ ಶಿಕ್ಷಕರನ್ನೂ ಜನಪ್ರತಿನಿಧಿಗಳ ಶಿಫಾರಸು ಆಧರಿಸಿ ವರ್ಗಾವಣೆ ಮಾಡಿಲ್ಲ. ಮಾಡಿದ್ದರೆ ದಾಖಲೆ ತೋರಿಸಿ ಎಂದು ಸವಾಲು ಹಾಕಿದರು.

ಉತ್ತಮ ಸ್ಪಂದನೆ: 1ರಿಂದ 5ನೇ ತರಗತಿವರೆಗಿನ ಶಾಲೆಗಳನ್ನು ಸೋಮವಾರದಿಂದ ರಾಜ್ಯದಾದ್ಯಂತ ಆರಂಭಿಸಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕ್ರಮೇಣ ಮಕ್ಕಳ‌ ಹಾಜರಾತಿ ಹೆಚ್ಚಾಗಲಿದೆ ಎಂದು ಸಚಿವ ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಂಬರುವ ವರ್ಷದಿಂದ ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ನಲಿನ್ ಅತುಲ್, ನಿರ್ದೇಶಕ ಬಿ.ಕೆ.ಎಸ್. ವರ್ಧನ್,‌ ಡಿಡಿಪಿಯು ಶಿವಶರಣಪ್ಪ‌ ಮೂಳೆಗಾಂವ, ಡಿಡಿಪಿಐ ಅಶೋಕ ಭಜಂತ್ರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು