ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಪ್ಪಾರ ಸಮಾಜ ಸಂಘಟಿತವಾಗಬೇಕು’-ಪುಟ್ಟರಂಗಶೆಟ್ಟಿ

ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅಭಿಮತ
Last Updated 24 ಅಕ್ಟೋಬರ್ 2021, 16:43 IST
ಅಕ್ಷರ ಗಾತ್ರ

ಕಲಬುರಗಿ: ‘ರಾಜ್ಯದಲ್ಲಿ ಹಿಂದುಳಿದ ಉಪ್ಪಾರ ಸಮುದಾಯದ ಎಲ್ಲರೂ ಒಂದೇ ಸಂಘದಡಿ ಸಂಘಟಿತರಾಗಿ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಬೇಕು. ಇದಕ್ಕೆ ಸಮುದಾಯದ ಜನರ ಸಹಕಾರ ಕೂಡ ಅಗತ್ಯವಾಗಿದೆ’ ಎಂದು ಉಪ್ಪಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷರೂ ಆದ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಮಕ್ತಂಪುರದ ಉಪ್ಪಾರಗಲ್ಲಿಯ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ನಡೆದ ಉಪ್ಪಾರ ಸಮಾಜದ ವಿಭಾಗದ ‌ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯ ಸಂಘಕ್ಕೆ 50 ವರ್ಷದ ತುಂಬಿದ ಪ್ರಯುಕ್ತ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಮಾವೇಶ ಸಂಘಟಿಸಲು ಉದ್ದೇಶಿಸಲಾಗಿದೆ. ಇದರ ಪೂರ್ವ ಸಿದ್ಧತೆ ಭಾಗವಾಗಿ ರಾಜ್ಯದಾದ್ಯಂತ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಲಾಗುತ್ತದೆ’ ಎಂದರು‌.

‘2013ರಲ್ಲಿ ಸಮುದಾಯದ ಬೃಹತ್ ಸಮ್ಮೇಳನದ ನಡೆಸಲಾಗಿತ್ತು. ಸಂಘದ ಹಕ್ಕೊತ್ತಾಯದ ಪರಿಣಾಮ ಭಗೀರಥ ಜಯಂತಿ ಆಚರಣೆಗೆ ಚಾಲನೆ, ಅಭಿವೃದ್ಧಿ ನಿಗಮ ಸ್ಥಾಪನೆ ಆಗಿದ್ದು, ಸಮುದಾಯ ಒಗ್ಗಟ್ಟಾಗಿ ಇದ್ದರೆ ಸಂಘಕ್ಕೆ ಮತ್ತಷ್ಟು ಬಲ ಬರಲಿದೆ.ಉಪ್ಪಾರ ಸಮಾಜವನ್ನು ಎಸ್ಟಿಗೆ ಸೇರಿಸುವ ನಿಟ್ಟಿನಲ್ಲಿ ಈಗಾಗಲೇ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗಿದೆ. ಎಸ್ಟಿಗೆ ಸೇರಿಸುವ ಮಾನದಂಡಗಳ ಚರ್ಚೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಕಲಬುರಗಿ ಮತ್ತು ರಾಯಚೂರು ಭಾಗದಲ್ಲಿ ಉಪ್ಪಾರ ಸಮುದಾಯ ಜನರು ಹೆಚ್ಚಾಗಿದ್ದಾರೆ. ಆದರೆ, ಅವರು ಶಿಕ್ಷಣದಲ್ಲಿ ಹಿಂದೆ ಉಳಿದಿದ್ದಾರೆ. ಹೀಗಾಗಿ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು’ ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಸರಸ್ವತಿ ಚಿಮ್ಮಲಗಿ ಮಾತನಾಡಿ, ‘ವಿಜಯಪುರ ಜಿಲ್ಲೆಯಲ್ಲಿ ಒಂದು ಎಕರೆ ಜಾಗದಲ್ಲಿ ಮಹಿಳಾ ವಸತಿ ನಿಲಯದ ನಿರ್ಮಾಣಕ್ಕೆ ದೇಣಿಗೆ ನೀಡಲಾಗುವುದು’ ಎಂದರು.

ರಾಯಚೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪಿ.‌ ಸುರೇಖಾ ಮಾತನಾಡಿ, ರಾಯಚೂರು ಸಮೀಪದ ಯರಮರಸ್ ನಲ್ಲಿ ತಮಗೆ ಸೇರಿದ ಸ್ವಂತ ಜಮೀನಿನಲ್ಲಿ ಸಮುದಾಯದ ಮಕ್ಕಳಿಗೆ ವಸತಿ ನಿಲಯ ನಿರ್ಮಾಣಕ್ಕೆ ನೀಡಲಾಗುತ್ತದೆ ಎಂದು ಘೋಷಿಸಿದರು.

ಉಪ್ಪಾರ ಸಮಾಜದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು.ವೆಂಕೋಬ ವಕೀಲ, ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ, ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ವೆಂಕೋಬ ಉಪ್ಪಾರ, ಬನ್ನಪ್ಪ ಹುಲಿಬೆಟ್ಟ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

‘ಜಾತಿ ಗಣತಿ ವರದಿ ಸ್ವೀಕಾರಕ್ಕೆ ಬಿಡದ ಎಚ್‌ಡಿಕೆ’

‘ರಾಜ್ಯದಲ್ಲಿ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ವರದಿ ಸ್ವೀಕಾರಕ್ಕೆ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ‌‌.ಕುಮಾರಸ್ವಾಮಿ ಬಿಡಲಿಲ್ಲ’ ಎಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಬೇಸರ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಾತಿಗಣತಿ ಸಮೀಕ್ಷೆಗೆ ಆದೇಶಿಸಲಾಗಿತ್ತು‌. ಆದರೆ, ಅವರ ಅವಧಿಯಲ್ಲಿ ವರದಿ ಸಲ್ಲಿಕೆ ಆಗಲಿಲ್ಲ. ನಂತರ ಮೈತ್ರಿ ಸರ್ಕಾರದಲ್ಲಿ ನಾನು ಹಿಂದುಳಿದ ವರ್ಗದ ಸಚಿವನಾಗಿದ್ದಾಗ ವರದಿ ಸ್ವೀಕಾರ ಮಾಡಲು ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಆಗ ಕುಮಾರಸ್ವಾಮಿ ಅವರು ನನಗೆ ಕರೆ ಮಾಡಿ ನನಗೆ ವರದಿ ತೆಗೆದುಕೊಳ್ಳುವಂತೆ ಯಾರು ಹೇಳಿದ್ದು, ವರದಿ ತೆಗೆದುಕೊಳ್ಳಬಾರದು ಎಂದು ತಾಕೀತು ಮಾಡಿದರು’ ಎಂದು ಅಸಮಾಧಾನ ಹೊರಹಾಕಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT