ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಸೌಕರ್ಯ ವಂಚಿತ ಪೋಲಕಪಳ್ಳಿ

Last Updated 10 ಆಗಸ್ಟ್ 2021, 2:59 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕು ಕೇಂದ್ರದಿಂದ 2 ಕಿ.ಮೀ. ದೂರದಲ್ಲಿರುವ ಪೋಲಕಪಳ್ಳಿ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ಮುಲ್ಲಾಮಾರಿ ನದಿ ದಂಡೆ ಮೇಲೆ ಹಳೆ ಗ್ರಾಮ ಮತ್ತು ರಾಷ್ಟ್ರೀಯ ಹೆದ್ದಾರಿ 167 (ಎನ್) ಬದಿಯ ಹೊಸ ಗ್ರಾಮ ಸೇರಿ 750 ಮನೆಗಳಿವೆ. ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರಿನಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಬಾಪೂರ ಮಹಿಬೂಬನಗರ ರಸ್ತೆ ಕಾಯಕಲ್ಪಕ್ಕಾಗಿ 10 ವರ್ಷಗಳಿಂದ ಕಾಯುತ್ತಿದೆ.

ದಶಕದ ಹಿಂದೆ ನಿರ್ಮಿಸಿದ್ದ ರಸ್ತೆ ಸಂಪೂರ್ಣ ಹಾಳಾಗಿದೆ. ತಗ್ಗು ಗುಂಡಿಗಳ ರಸ್ತೆಯಲ್ಲೇ ವಾಹನಗಳು ಓಡಾಡುತ್ತಿವೆ. ಮಳೆಗಾಲದಲ್ಲಿ ಅನೇಕ ಸವಾರರು ಬಿದ್ದು ಗಾಯ ಮಾಡಿಕೊಂಡ ಪ್ರಕರಣಗಳು ಸಾಕಷ್ಟು ಇವೆ ಎನ್ನುತ್ತಾರೆ ಗ್ರಾಮಸ್ಥರು.

ಶಾಲಾ ತರಗತಿಯ 7 ಕೊಠಡಿಗಳು ಶಿಥಿಲವಾಗಿದ್ದು, ಅಪಾಯಕ್ಕೆ ಆಹ್ವಾನಿಸುವಂತಿವೆ. ಕುಡಿವ ನೀರಿನ ಕೊಳವೆಗೆ ರಂಧ್ರ ಬಿದ್ದಿದ್ದು ಸಾಕಷ್ಟು ನೀರು ಪೋಲಾಗುತ್ತಿದೆ. ಪಂಚಾಯಿತಿಯಲ್ಲಿ ಒಬ್ಬ ಸ್ವಚ್ಛತಾ ಕಾರ್ಮಿಕ ಇದ್ದಾರೆ. ಗ್ರಾಮದ ಸ್ವಚ್ಛತೆಗೆ ಕನಿಷ್ಠ ನಾಲ್ವರು ಕಾರ್ಮಿಕರು ಬೇಕು ಎನ್ನುತ್ತಾರೆ ಹೋರಾಟಗಾರ ನಂದಿಕುಮಾರ ಪಾಟೀಲ.

ಶಾಲೆಗೆ ಗೇಟ್, ಹೊಸ ಊರಿನ ಬಸ್ ನಿಲ್ದಾಣದ ಬಳಿ ವಿದ್ಯುತ್ ದೀಪ ಹಾಗೂ ಅಣವಾರವರೆಗೆ ರಸ್ತೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

’ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಿದ್ದೇವೆ. ಆದರೆ ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ‘ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಯ್ಯದ್ ಜಾಕೀರ್ ಹೇಳಿದರು.

ರಸ್ತೆ ದುರಸ್ಥೆಯ ಬಗ್ಗೆ ಪಂಚಾಯತ್ ರಾಜ್ ಉಪ ವಿಭಾಗ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ರಸ್ತೆ ನಿರ್ಮಿಸುವ ಭರವಸೆ ನೀಡಿದ್ದಾರೆ ಎಂದು ಪಿಡಿಒ ರಮೇಶ ತುಮಕುಂಟಾ ‘ಪ್ರಜಾವಾಣಿ‘ಗೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿಯಿಂದ ಪೋಲಕಪಳ್ಳಿ ಮಾರ್ಗವಾಗಿ ಅಣವಾರವರೆಗಿನ ರಸ್ತೆ ನಿರ್ಮಾಣಕ್ಕೆ ₹90 ಲಕ್ಷ ಮಂಜೂರಾತಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಅನುದಾನ ಮಂಜೂರಾಗಲಿದೆ ಎಂದು ಪಂಚಾಯತ ರಾಜ್ ತಾಂತ್ರಿಕ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಹಮ್ಮದ್ ಹುಸೇನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT