ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

15 ದಿನಗಳಲ್ಲಿ ದೋಷ ರಹಿತ ಪಹಣಿ ವಿತರಣೆ: ಚಿತ್ತಾಪುರ ತಹಶೀಲ್ದಾರ್

Published 19 ಜೂನ್ 2024, 7:08 IST
Last Updated 19 ಜೂನ್ 2024, 7:08 IST
ಅಕ್ಷರ ಗಾತ್ರ

ವಾಡಿ: ‘ಕಳೆದ ಹಲವು ವರ್ಷಗಳಿಂದ ಹಲಕರ್ಟಿ ಗ್ರಾಮದ ರೈತರ ಜಮೀನಿನ ದಾಖಲೆಗಳಲ್ಲಿನ ದೋಷ ತಿದ್ದುವ ಕಾರ್ಯ ಒಂದು ಹಂತಕ್ಕೆ ಬಂದಿದ್ದು ಮುಂದಿನ 15 ದಿನಗಳಲ್ಲಿ ಎಲ್ಲಾ ದೋಷ ರಹಿತ ಪಹಣಿ ಪತ್ರಗಳನ್ನು ವಿತರಿಸಲಾಗುವುದು’ ಎಂದು ಚಿತ್ತಾಪುರ ತಹಶೀಲ್ದಾರ್ ಅಂಬರೀಶ ಬಿರಾದಾರ ಹೇಳಿದರು.

ಹಲಕರ್ಟಿ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ರೈತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಒಟ್ಟು 450 ರೈತರ ಪಹಣಿಗಳ ದೋಷ ತಿದ್ದುವ ಕಾರ್ಯ ಅಂತಿಮ ಹಂತದಲ್ಲಿದೆ. ವೇದಿಕೆ ಕಾರ್ಯಕ್ರಮ ಆಯೋಜಿಸಿ ಪಹಣಿ ಪತ್ರ ವಿತರಿಸಲಾಗುವುದು’ ಎಂದರು.

‘ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ಮಾಲೀಕತ್ವವನ್ನು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಮಾಡಲು ಜೂನ್ 20 ರಂದು ತಾಲ್ಲೂಕಿನ ಕರದಾಳ, ಗುಂಡಗುರ್ತಿ, ‌ ನಾಲವಾರ ಹೋಬಳಿ ವ್ಯಾಪ್ತಿಯಲ್ಲಿ ಪೌತಿಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಕರದಾಳ ಗ್ರಾಮದಲ್ಲಿನ ಬಸವೇಶ್ವರ ಭವನದಲ್ಲಿ, ಗುಂಡಗುರ್ತಿ ಹೋಬಳಿಯ ಕೇಂದ್ರ ನಾಡ ಕಚೇರಿಯಲ್ಲಿ, ನಾಲವಾರ ಗ್ರಾಮದಲ್ಲಿನ ನಾಡ ಕಚೇರಿಯಲ್ಲಿ ಪೌತಿಖಾತೆ ಆಂದೋಲನ ನಡೆಯಲಿದೆ. ಖಾತೆ ಬದಲಾವಣೆಗೆ ಅವಶ್ಯವಿರುವ ದಾಖಲೆಗಳಾದ ವಂಶಾವಳಿ, ಮರಣ ಪ್ರಮಾಣಪತ್ರ, ಹಕ್ಕುಪತ್ರ, ಅರ್ಜಿ, ಪಹಣಿ ಪತ್ರಿಕೆ ಗುರುತಿನ ‌ ಚೀಟಿಗಳೊಂದಿಗೆ (ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ) ಅರ್ಜಿ ಸಲ್ಲಿಸಿ ‌ ರೈತರು ಸದುಪಯೋಗ ಪಡೆದುಕೊಳ್ಳಬೇಕು. ಜಮೀನು ಕುರಿತು ಅಸಂಗತಗಳನ್ನು ತೊಡೆದುಹಾಕಿ, ರೈತಾಪಿ ವರ್ಗದವರ 5 ಸಮಸ್ಯೆಗಳನ್ನು ಪರಿಹರಿಸಲಾಗುವುದು’ ಎಂದರು.

ಎಐಕೆಕೆಎಂಎಸ್ ಸಂಘಟನೆ ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ ಆಂದೋಲ ಮಾತನಾಡಿ, ‘ಹಲಕರ್ಟಿ ಗ್ರಾಮದಲ್ಲಿನ ಪಹಣಿ ಸರ್ವೆ ನಂಬರ್ ದೋಷವನ್ನು ಸರಿಪಡಿಸಲು ಒತ್ತಾಯಿಸಿ ನಮ್ಮ ರೈತ ಸಂಘಟನೆ ವತಿಯಿಂದ ಹೋರಾಟ ಮಾಡಲಾಗುತ್ತು. ಇದು ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು’ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಚೌಡಪ್ಪ ಗಂಜಿ, ಡಾ.ಚಂದ್ರೆಡ್ಡಿ ನಾಯ್ಕೋಡಿ, ಮಲ್ಲಣ್ಣ ಪೂಜಾರಿ ಭಾವಿಕಟ್ಟಿ, ಬಸವರಾಜ ಮೇಲಿನಮನಿ, ನೀಲಕಂಠ ಸಂಗಶೆಟ್ಟಿ, ಗೌತಮ ಪರತೂರಕರ, ಕರಣಪ್ಪ ಇಸಬಾ, ಶರಣಪ್ಪ ಹಿಟ್ಟಿನ, ಮಶಾಖ್ ಗಂವ್ಹಾರ ಶರಣಪ್ಪ ಹಿಟ್ಟಿನ್, ಕಾಂತಪ್ಪ ನಾಲಡಿಗಿ ಗ್ರಾಮ ಲೆಕ್ಕಾಧಿಕಾರಿ ಮಾರುತಿ.ಎನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT