ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವೃತ್ತಿಪರ ಆಗುವುದಕ್ಕಿಂತ ವೃತ್ತಿ ನೈಪುಣ್ಯ ಸಾಧಿಸಿ’

‘ದ್ವಿತೀಯ ಪಿಯುಸಿ ನಂತರ ಮುಂದೇನು?’ ಕುರಿತ ಮಾರ್ಗದರ್ಶನ ಕಾರ್ಯಾಗಾರ
Published 19 ಜೂನ್ 2024, 16:20 IST
Last Updated 19 ಜೂನ್ 2024, 16:20 IST
ಅಕ್ಷರ ಗಾತ್ರ

ಕಲಬುರಗಿ: ‘ಜೀವನದಲ್ಲಿ ವೃತ್ತಿಪರ (ಪ್ರೊಫೆಷನಲಿಸ್ಟ್‌) ಆಗುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ವೃತ್ತಿ ನೈಪುಣ್ಯ ಸಾಧಿಸಿದರೆ(ಕರಿಯರಿಸ್ಟ್‌) ಜೀವನ ಸಾರ್ಥಕವಾಗುತ್ತದೆ’ ಎಂದು ಪ್ರೊ. ನರೇಂದ್ರ ಬಡಶೇಷಿ ಪ್ರತಿಪಾದಿಸಿದರು.

ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ ಸನ್ಯಾಸತ್ವ ಸ್ವೀಕಾರದ ಸುವರ್ಣ ಮಹೋತ್ಸವ ಆಚರಣೆ ಅಂಗವಾಗಿ ಕಲಬುರಗಿಯ ಶೃಂಗೇರಿ ಶಾರದಾ ಪೀಠ ಹಾಗೂ ಪ್ರಫುಲ್ಲತಾ ಫೌಂಡೇಷನ್ ಸಹಯೋಗದಲ್ಲಿ ನಗರದ‌ ಸಂಗಮೇಶ್ವರ ಕಾಲೊನಿಯ ಶೃಂಗೇರಿ ಶಂಕರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ದ್ವಿತೀಯ ಪಿಯುಸಿ ನಂತರ ಮುಂದೇನು?’ ಕುರಿತ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ದ್ವಿತೀಯ ಪಿಯುಸಿ ನಂತರ ಉದ್ಯೋಗ ಹಾಗೂ ಕಲಿಕೆ ಎಂಬ ದಾರಿಗಳಿವೆ. ಯಾವ ಕೋರ್ಸ್‌ಗಳು, ವೃತ್ತಿಗಳೂ ಶ್ರೇಷ್ಠ–ಕನಿಷ್ಠವಲ್ಲ. ವಿದ್ಯಾರ್ಥಿಗಳು ಸಾಂಪ್ರದಾಯಕತೆ ಮೀರಿ ಭಿನ್ನ ಯೋಚನೆ, ಸ್ವಂತ ಆಸಕ್ತಿ ಹಾಗೂ ಹೊಸತನದೊಂದಿಗೆ ಮುನ್ನಡೆದರೆ ಜೀವನದಲ್ಲಿ ಯಶಸ್ವಿಯಾಗಬಹುದು’ ಎಂದರು.

ವಿಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶ:

ಡಾ. ಮೇಘಾ ಕಮಲಾಪುರಕರ ಮಾತನಾಡಿ, ಪಿಸಿಬಿ ಸಂಯೋಜನೆಯೊಂದಿಗೆ ವಿಜ್ಞಾನ ಓದಿದವರಿಗೆ ಇರುವ ಅವಕಾಶಗಳ ಮೇಲೆ ಬೆಳಕು ಚೆಲ್ಲಿದರು.

‘ಬಿಎಸ್ಸಿಯಿಂದ ಹಿಡಿದು ಮೆಡಿಕಲ್, ಪ್ಯಾರಾ ಮೆಡಿಕಲ್, ಡಿಪ್ಲೊಮಾ ‌ಕೋರ್ಸ್‌ಗಳಿವೆ. ತರಹೇವಾರಿ ಬಿಎಸ್ಸಿ ಕೋರ್ಸ್‌ಗಳಿದ್ದು, ಅದಕ್ಕೆ ತಕ್ಕಂತೆ ಉದ್ಯೋಗಾವಕಾಶಗಳೂ ಇವೆ. ಅರ್ಥಪೂರ್ಣ ಜೀವನವೇ ಬದುಕಿನ ಅಂತಿಮ ಗುರಿ. ಅದಕ್ಕೆ ಆರ್ಥಿಕ ಸಂತೋಷ, ಭಾವನಾತ್ಮಕ ಖುಷಿ, ಸಾಮಾಜಿಕ ಸಂತೋಷ ಪೂರಕ ಅಂಶಗಳು. ಇದೆಲ್ಲಕ್ಕೂ ಆಧಾತ್ಮವೇ ತಳಹದಿಯಾಗಿದೆ’ ಎಂದರು.

ಕ್ರಿಯಾಶೀಲತೆ ಅಗತ್ಯ:

ಪಿಯುಸಿ ವಿಜ್ಞಾನ ಮುಗಿಸಿದವರಿಗೆ ಇರುವ ಕೋರ್ಸ್‌ಗಳ ಮಾಹಿತಿಯನ್ನು ಪ್ರಾಂಶುಪಾಲ ಪ್ರೊ. ಪ್ರಲ್ಹಾದ ಭುರ್ಲಿ ನೀಡಿದರು.

‘ವೃತ್ತಿಪರ ಕೋರ್ಸ್‌ಗಳ ಆಯ್ಕೆಯ ವೇಳೆ ಪ್ರತಿಷ್ಠೆಯ ಬದಲು ಆಸಕ್ತಿಗೆ ಒತ್ತು ನೀಡಬೇಕು. ಪಿಯುಸಿ ವಿಜ್ಞಾನ ಮುಗಿಸಿದವರು ‘ನೀಟ್‌’ ಬರೆದು ವೈದ್ಯಕೀಯ ಕೋರ್ಸ್ ಸೇರಬಹುದು. ಗಣಿತ ಜ್ಞಾನ ಚೆನ್ನಾಗಿದ್ದರೆ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು. ಇಲ್ಲದೇ ಹತ್ತಾರು ವೃತ್ತಿಪರ ಬಿಎಸ್ಸಿ ಕೋರ್ಸ್‌ ಆಯ್ದುಕೊಳ್ಳಬಹುದು. ಯಾವುದನ್ನೇ ಆಯ್ಕೆ ಮಾಡಿಕೊಂಡರೂ, ಕ್ರಿಯಾಶೀಲತೆ ಹಾಗೂ ಯೋಜನೆಯೊಂದಿಗೆ ಕೆಲಸ ಮಾಡಿದರಷ್ಟೇ ಯಶಸ್ಸು ಸಾಧ್ಯ’ ಎಂದರು.

ವಾಣಿಜ್ಯ ವಿಭಾಗದಲ್ಲಿ ಓದಿದವರಿಗೆ ಇರುವ ಅವಕಾಶಗಳ ಕುರಿತು ತಿಳಿಸಿದ ಪ್ರೊ.ನಚಿಕೇತ ವಳಸಂಗಕರ, ‘ವಾಣಿಜ್ಯ ಕ್ಷೇತ್ರ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಈ ಕ್ಷೇತ್ರದಲ್ಲಿ ಸಾಗರದಷ್ಟು ಉದ್ಯೋಗಾವಕಾಶಗಳು, ಹತ್ತಾರೂ ಕೋರ್ಸ್‌ಗಳಿವೆ. ಬಿ.ಕಾಂ.,ಸಿ.ಎ., ಸಿ.ಎಸ್‌ನಂಥ ಕೋರ್ಸ್‌ಗಳ ಹೊರತಾಗಿ ಐಸಿಡಬ್ಲ್ಯುಎ, ಬಿಸಿಎ, ಬಿಬಿಎಂ, ಬಿಎಚ್‌ಎಂ, ಬಿಡಿಎಸ್‌, ಏವಿಯೇಷನ್‌ ಮ್ಯಾನೇಜ್‌ಮೆಂಟ್‌, ಬಿಟಿಎನಂತಹ ಕೋರ್ಸ್‌ಗಳಿವೆ’ ಎಂದರು.

ಕಲಬುರಗಿಯ ಶೃಂಗೇರಿ ಶಾರದಾ ಪೀಠದ ವಿಶೇಷ ಪ್ರತಿನಿಧಿ ಪಿ.ಎಚ್‌.ಕಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾರದಾ ಸ್ಮರಣೆ ‌ಮಾಡಲಾಯಿತು. ಉಮಾ ಮಹೇಶ್ವರ ಭಜನಾ‌ ಮಂಡಳಿಯ ಸದಸ್ಯರು ಶಂಕರ ಸ್ತೋತ್ರ ಪಠಿಸಿದರು.

‘ನಿರ್ಲಕ್ಷ್ಯ ಬಿಟ್ಟರೆ ಸಾಧನೆಗೆ ಅವಕಾಶ’

ದ್ವಿತೀಯ ‍ಪಿಯುಸಿಯಲ್ಲಿ ಕಲಾ ವಿಭಾಗ ಓದಿದವರಿಗೆ ಇರುವ ಅವಕಾಶಗಳ ಕುರಿತು ಬೆಳಕು ಚೆಲ್ಲಿದ ಪ್ರೊ. ಜಯಪ್ರಕಾಶ ಎ.ಕೆ. ‘ಬಹುತೇಕರು ಆರ್ಟ್ಸ್‌ ಎಂದರೆ ಸುಲಭ ಎಂದುಕೊಂಡು ಸೋಮಾರಿತನ ಮಾಡುತ್ತಾರೆ. ಅದನ್ನು ವಿಜ್ಞಾನ ವಿಭಾಗದ ಕೋರ್ಸ್‌ಗೆ ಹಾಕುವ ಅರ್ಧದಷ್ಟು ಶ್ರಮ–ಶ್ರದ್ಧೆ ಹಾಕಿದರೂ ಉತ್ತಮ ಸಾಧನೆ ತೋರಬಹುದು. ಬಿ.ಎ. ಓದಿಯೂ ಐಎಎಸ್ ಆದವರೂ ಇದ್ದಾರೆ’ ಎಂದರು. ‘ವರ್ಷದ 52 ಭಾನುವಾರಗಳಲ್ಲಿ ಅರ್ಧದಷ್ಟು ದಿನಗಳಲ್ಲಿ ಒಂದಿಲ್ಲೊಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಲೇ ಇರುತ್ತವೆ. ಅದಕ್ಕೆ ಸಣ್ಣ ತಯಾರಿ ಮಾಡಿಕೊಂಡು ಪರೀಕ್ಷೆ ಎದುರಿಸಿದರೆ ಇತರರು ವೃತ್ತಿಪರ ಕೋರ್ಸ್‌ಗಳು ಮುಗಿಸುವಷ್ಟರಲ್ಲೇ ಕಲಾ ವಿಭಾಗದವರು ಉದ್ಯೋಗವನ್ನೇ ಗಿಟ್ಟಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT