ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸುನಾಮಿ ಎಲ್ಲಿದೆ ತೋರಿಸಿ.. ಸಚಿವ ಪ್ರಿಯಾಂಕ್ ಖರ್ಗೆ ಸವಾಲು

ಶಕ್ತಿಯುತವಾದ ಪಕ್ಷಕ್ಕೆ ಸ್ವಂತ ಬಲದ ಮೇಲೆ ಗೆಲ್ಲುವ ವಿಶ್ವಾಸ ಇಲ್ಲವೇ?
Published 27 ಮಾರ್ಚ್ 2024, 10:02 IST
Last Updated 27 ಮಾರ್ಚ್ 2024, 10:02 IST
ಅಕ್ಷರ ಗಾತ್ರ

ಕಲಬುರಗಿ: ‘ದಕ್ಷಿಣ ಭಾರತದಲ್ಲಿ ಮೋದಿ ಸುನಾಮಿ, ಬಿಜೆಪಿ ಪರವಾದ ಗಾಳಿ ಇದ್ದಿದ್ದರೇ ಬಿಜೆಪಿಯವರು ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿನ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿದ್ದು ಏಕೆ? ಶಕ್ತಿಯುತವಾದ ಪಕ್ಷಕ್ಕೆ ಸ್ವಂತ ಬಲದ ಮೇಲೆ ಗೆಲ್ಲುವ ವಿಶ್ವಾಸ ಇಲ್ಲವೇ? ಮೋದಿ ಸುನಾಮಿ ಇದೆ ಎನ್ನುವವರು ದಕ್ಷಿಣ ಭಾರತದಲ್ಲಿ ಎಲ್ಲಿದೆ ತೋರಿಸಲಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಇಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಅವರವರ ಅಸ್ತಿತ್ವಕ್ಕಾಗಿ ಚುನಾವಣೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ– ಜೆಡಿಎಸ್ ಹೊಂದಾಣಿಕೆಯ ಮೂಲಕ ಇಬ್ಬರೂ ಹರಕೆಯ ಕುರಿಗಳಾಗಿದ್ದಾರೆ. ಕೇಳಿದಷ್ಟು ಸೀಟು ಸಿಗಲಿಲ್ಲವೆಂದು ಬಿಜೆಪಿಯ ಪಾಲುದಾರ ಎಚ್‌ಡಿ ಕುಮಾರಸ್ವಾಮಿ ಅವರು ಅತೃಪ್ತರಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಮಲ್ಲಿಕಾರ್ಜುನ ಖರ್ಗೆ ಅವರು ಸೋಲಿನ ಭಯದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ’ ಎಂದಿದ್ದ ವಿಧಾನ ಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಬಿ.ವೈ. ವಿಜಯೇಂದ್ರ. ಆರ್. ಅಶೋಕ, ಅರವಿಂದ ಬೆಲ್ಲದ ಅವರ ನಾಯಕತ್ವ ಬಿಜೆಪಿಯವರೇ ಒಪ್ಪಿಕೊಳ್ಳುತ್ತಿಲ್ಲ. ಅವರೆಲ್ಲರೂ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತೆ ಆಗಿದೆ. ಮತ್ತೊಂದು ಕಡೆ ಬಿಎಲ್‌ ಸಂತೋಷ ಹಾಗೂ ಬಿಎಸ್‌ ಯಡಿಯೂರಪ್ಪ ಅವರ ಬಡಿದಾಟ ನಡೆಯುತ್ತಿದೆ. ಡಾ.ಸುಧಾಕರ್‌, ಶೋಭಾ ಕರಂದ್ಲಾಜೆ ವಿರುದ್ಧ ‘ಗೋಬ್ಯಾಕ್‌’ ಅಭಿಯಾನ ಬಿಜೆಪಿ ಕಾರ್ಯಕರ್ತರೇ ಮಾಡುತ್ತಿದ್ದಾರೆ. ಬಿಜೆಪಿಗರು ಕಾಂಗ್ರೆಸ್‌ನತ್ತ ಗಮನಕೊಡುವುದು ಬಿಟ್ಟು ಮೊದಲು ತಮ್ಮ ಪಕ್ಷದ ಒಳಗಿನ ಬೆಂಕಿಯನ್ನು ಆರಿಸಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.

‘ಸದಾನಂದ ಗೌಡ, ಕೆ.ಎಸ್‌.ಈಶ್ವರಪ್ಪ, ಅನಂತಕುಮಾರ ಹೆಗಡೆ ಅವರು ಬಿಜೆಪಿ ಒಂದು ಕುಟುಂಬ ಹಿಡಿತದಲ್ಲಿದೆ. ಪಕ್ಷದ ಶುದ್ಧೀಕರಣಕ್ಕಾಗಿ ಹೊರಬಂದು ಹೋರಾಟ ಮಾಡಬೇಕಿದೆ ಎನ್ನುತ್ತಿದ್ದಾರೆ. ಸಿಟಿ ರವಿ, ಬಸನಗೌಡ ಪಾಟೀಲ ಯತ್ನಾಳ, ಪ್ರತಾಪ ಸಿಂಹ ಅವರು ಹಿಂದುತ್ವದ ಪರ ಹೋರಾಟ ಮಾಡುವವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುತ್ತಿದ್ದಾರೆ. ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ರಾಜ್ಯ ನಾಯಕರು ಕಾಂಗ್ರೆಸಿನ ಆಂತರಿಕ ವಿಷಯಗಳಿಗೆ ತಲೆ ಹಾಕುತ್ತಿದ್ದಾರೆ' ಎಂದು ಕಿಚಾಯಿಸಿದರು.

‘ನಿಮ್ಮ ಸಂಸಾರದಲ್ಲಿನ ಬಿರುಕುಗಳನ್ನು ನೋಡಿಕೊಳ್ಳಿ. ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ವಿಚಾರಗಳನ್ನು ತೆಗೆದುಕೊಂಡು ನೀವು ಏನು ಮಾಡುತ್ತೀರಾ? ನಿಮ್ಮ ಸಂಸಾರ (ಪಕ್ಷ) ಕಟ್ಟುವುದನ್ನು ಕಲಿಯಿರಿ. ಬೇರೆಯವರ ಸಂಸಾರದಲ್ಲಿ (ಪಕ್ಷ) ಹುಳಿ ಹಿಂಡುವುದೇ ನಿಮ್ಮ ಕೆಲಸ ಆಗಿದೆ’ ಎಂದು ವ್ಯಂಗ್ಯವಾಡಿದರು.

‘ಚುನಾವಣೆಯ ಕಾವು ಏರುತ್ತಿದ್ದಂತೆ ಬಿಜೆಪಿ ನಾಯಕರು ವೈಯಕ್ತಿಕ ದಾಳಿ ಮಾಡುತ್ತಾರೆ. ವೈಯಕ್ತಿಕ ದಾಳಿ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಅಧಿಕಾರಕ್ಕೆ ಬಂದು ಹತ್ತು ವರ್ಷಗಳು ಕಳೆದರೂ ದೇವರು, ಧರ್ಮದ ಹೆಸರಿನಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಸ್ವಂತ ಸಾಧನೆಯೇ ಅವರ ಬಳಿ ಇಲ್ಲ. ಆದರೆ, ನಾವು 'ಗ್ಯಾಂರಟಿ' ಯೋಜನೆಗಳ ದೀಪವನ್ನು ಇರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಜೋಡಿತ್ತಿನ ಮುಂದಾಳುತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ’ ಎಂದು ಪ್ರಿಯಾಂಕ್ ಹೇಳಿದರು.

'ಮೋದಿಯ ಗ್ಯಾರಂಟಿ ಯೋಜನೆಗಳು ಟಿವಿಯಲ್ಲಿವೆ. ನಮ್ಮ ಗ್ಯಾರಂಟಿ ಯೋಜನೆಗಳು ಕೈಯಲ್ಲಿವೆ. ಲೋಕಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದ ಕಾಂಗ್ರೆಸ್‌ಗೆ ಸಿಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT