ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ MLCಗಳ ರಾಜೀನಾಮೆ ಪ್ರಹಸನ: ಪುಟಗೋಸಿ ಮುನಿಯಪ್ಪ ಎಂದ ನಜೀರ್‌ ಅಹ್ಮದ್‌!

ಕೋಲಾರ ಲೋಕಸಭೆ ಚುನಾವಣೆ: ಕೆ.ಎಚ್. ಮುನಿಯಪ್ಪ ಅವರಿಗೆ ಟಿಕೆಟ್ ಕೊಡದಿರುವಂತೆ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯರಾದ ನಜೀರ್‌ ಅಹ್ಮದ್‌ ಮತ್ತು ಅನಿಲ್‌ ಕುಮಾರ್‌ ರಾಜೀನಾಮೆ ಪ್ರಹಸನ
Published 27 ಮಾರ್ಚ್ 2024, 9:21 IST
Last Updated 27 ಮಾರ್ಚ್ 2024, 9:21 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಲಾರ ಲೋಕಸಭಾ ಟಿಕೆಟ್‌ನ್ನು ಸಚಿವ ಕೆ.ಎಚ್‌. ಮುನಿಯಪ್ಪ ಕುಟುಂಬದವರಿಗೆ ನೀಡಬಾರದು. ಬಲಗೈ ಸಮುದಾಯಕ್ಕೆ ನೀಡಬೇಕು’ ಎಂದು ಪಟ್ಟು ಹಿಡಿದಿರುವ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯರಾದ ನಜೀರ್‌ ಅಹ್ಮದ್‌ ಮತ್ತು ಅನಿಲ್‌ ಕುಮಾರ್‌ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಸಭಾಪತಿ ಬಸವರಾಜ ಹೊರಟ್ಟಿ ಕಚೇರಿಗೆ ಬಂದರೂ ರಾಜೀನಾಮೆ ನೀಡದೆ ತೆರಳಿದರು.

ತಮ್ಮ ರಾಜೀನಾಮೆ ಪತ್ರವನ್ನು ಮಾಧ್ಯಮದವರಿಗೆ ಪ್ರದರ್ಶಿಸಿದ ಅವರು, ‘ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರ ಜೊತೆ ಸಂಜೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಅಂದರು. 

‘ಮುಖ್ಯಮಂತ್ರಿ ಒಂದು ದಿನದ ಕಾಲಾವಕಾಶ ಕೇಳಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ರಾಜೀನಾಮೆ ನೀಡದೆ ನಾವು ವಾಪಸ್‌ ಹೋಗುತ್ತೇವೆ’ ಎಂದು ಅನಿಲ್‌ಕುಮಾರ್ ಹೇಳಿದರು.

ಈ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ‘ಇನ್ನೂ ರಾಜೀನಾಮೆ ಕೊಟ್ಟಿಲ್ಲ. ಕೊಟ್ಟರೆ ರಾಜೀನಾಮೆ ಸ್ವೀಕರಿಸುವೆ. ಒತ್ತಾಯದಿಂದ ರಾಜೀನಾಮೆ ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಅವರು ರಾಜೀನಾಮೆ ಕೊಟ್ಟಿಲ್ಲ. ಬಲವಂತದಿಂದ ಕಸಿದು ಕೊಳ್ಳಲು ಆಗಲ್ಲ. ನಾನು ಅವರ ಜೊತೆ ಮಾತನಾಡಿಲ್ಲ. ಕೈಯಲ್ಲೇ ಬರೆದು ಕೊಡಿ ಎಂದು ಹೇಳಿದ್ದೇನೆ. ಅವರು ಕೊಟ್ಟರೆ ಪಡೆಯುತ್ತೇನೆ. ಅವರು ಕೊಡದಿದ್ದರೆ ನಾವೇನು ಮಾಡೋಣ. ಅವರು ಬೆಳಗ್ಗೆ ಸಮಯ ಕೇಳಿದ್ದರು. ಅವರು ಕೊಡಲಿಲ್ಲ ಅಂದ್ರೆ ನಾವೇನು ಮಾಡೋಣ’ ಎಂದೂ ಹೇಳಿದರು.

ಮಾಲೂರು ಶಾಸಕ ಕೆ.ವೈ.  ನಂಜೇಗೌಡ ಮಾತನಾಡಿ, ‘ಬಲಗೈ‌‌ ಸಮುದಾಯದ ಯಾರಿಗೇ ಕೊಟ್ಟರೂ ‌ನಮ್ಮ ಅಭ್ಯಂತರ ಇಲ್ಲ. ಮುನಿಯಪ್ಪ ಅವರು ‌ವಿಧಾನಸಭೆ ಚುನಾವಣೆಯಲ್ಲಿ ನಮ್ಮೆಲ್ಲರನ್ನು ಸೋಲಿಸಲು ಪ್ರಯತ್ನಪಟ್ಡಿದ್ದರು. ಈಗ ಅವರ ಪರ ಅಭ್ಯರ್ಥಿಗೆ ಟಿಕೆಟ್ ಕೊಡಬಾರದು‌. ಕೋಲಾರದಲ್ಲಿ ಪಕ್ಷ‌ ಕಟ್ಟಲು ತುಂಬಾ ಕಷ್ಟಪಟ್ಡಿದ್ದೇವೆ. ಬಲಗೈ ಸಮುದಾಯದ ಯಾರಿಗೇ‌ ಕೊಟ್ಟರೂ ನಾವು ಕೆಲಸ ಮಾಡ್ತೇವೆ’ ಎಂದರು.

‘ಕೋಲಾರ ಟಿಕೆಟ್ ವಿಚಾರದಲ್ಲಿ ನಜೀರ್‌ ಅಹ್ಮದ್‌ ಮತ್ತು ಅನಿಲ್ ಕುಮಾರ್‌ ಅಸಮಾಧಾನಗೊಂಡಿದ್ದಾರೆ. ಅವರನ್ನು ಸಮಾಧಾನ ಮಾಡುವಂತೆ ಎಐಸಿಸಿ ನಾಯಕರು ಹೇಳಿದ್ದಾರೆ. ಸಿಎಂ, ಡಿಸಿಎಂ ಇಬ್ಬರೂ ಹೇಳಿದ್ದಾರೆ. ಅವರಿಗೆ ಅಸಮಾಧಾನವಾಗದಂತೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ರಾತ್ರಿ ಸಿಎಂ, ಡಿಸಿಎಂ ಇಬ್ಬರೂ ಬೆಂಗಳೂರು ಬರುತ್ತಾರೆ. ಆಗ ಕುಳಿತು ಮಾತನಾಡಿ ಬಗೆಹರಿಸುತ್ತೇವೆ. ಇನ್ನೂ ಟಿಕೆಟ್ ಕೂಡ ತೀರ್ಮಾನ ಆಗಿಲ್ಲ’ ಎಂದು  ಸಚಿವ ಬೈರತಿ ಸುರೇಶ್ ಹೇಳಿದರು.

ಪುಟಗೋಸಿ ಮುನಿಯಪ್ಪ

‘ಕೋಲಾರದ ನಾಯಕರನ್ನೆಲ್ಲ ಕರೆದುಕೊಂಡು ಬಂದಿರುವುದು ನಾನು’ ಎಂದು ಕೆ.ಎಚ್‌. ಮುನಿಯಪ್ಪ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯಿಸಿದ ನಜೀರ್‌ ಅಹ್ಮದ್‌,  ‘1991ರಲ್ಲಿ ನಾನು ಸಚಿನಾಗಿದ್ದೆ. ಆಗ ಪುಟಗೋಸಿ ಮುನಿಯಪ್ಪ ಬ್ಯಾಗ್ ಹಿಡ್ಕೊಂಡು ಬರ್ತಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT