ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಪ್ಪ ಕುಟುಂಬಕ್ಕೆ ಕೋಲಾರ ಟಿಕೆಟ್ ನೀಡಿದರೆ ರಾಜೀನಾಮೆ: ಐವರು ಶಾಸಕರ ಬೆದರಿಕೆ

Published 27 ಮಾರ್ಚ್ 2024, 7:53 IST
Last Updated 27 ಮಾರ್ಚ್ 2024, 7:53 IST
ಅಕ್ಷರ ಗಾತ್ರ

ಬೆಂಗಳೂರು: ಕೋಲಾರ ಟಿಕೆಟ್‌ ಹಂಚಿಕೆ ಕಗ್ಗಂಟು ಇನ್ನಷ್ಟು ಬಿಗಿಯಾಗಿದ್ದು, ಸಚಿವ ಕೆ.ಎಚ್‌. ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ (ಎಡಗೈ) ಅವರಿಗೆ ಟಿಕೆಟ್ ನೀಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಐವರು ಕಾಂಗ್ರೆಸ್‌ ಶಾಸಕರು ಬೆದರಿಕೆ ಒಡ್ಡಿದ್ದಾರೆ.

ಸಭಾಧ್ಯಕ್ಷ ಯು.ಟಿ. ಖಾದರ್‌ ಅವರ ಭೇಟಿಗೆ ಸಮಯಾವಕಾಶ ಪಡೆದಿರುವ ಸಚಿವ ಎಂ.ಸಿ ಸುಧಾಕರ್, ಶಾಸಕ ಕೊತ್ತನೂರು ಮಂಜುನಾಥ್ ಹಾಗೂ ಕೆ.ವೈ. ನಂಜೇಗೌಡ ಅವರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ. ಖಾದರ್ ಅವರು ಮಂಗಳೂರಿನಲ್ಲಿರುವ ಕಾರಣ ಸಂಜೆ 4.05 ಗಂಟೆಯ ವಿಮಾನದಲ್ಲಿ ಅಲ್ಲಿಗೆ ತೆರಳಲು ಶಾಸಕರು ನಿರ್ಧರಿಸಿದ್ದಾರೆ.

ಅಲ್ಲದೆ, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ನಜೀರ್ ಅಹಮ್ಮದ್ ಕೂಡಾ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮಯಾವಕಾಶ ಕೇಳಿದ್ದಾರೆ.

ಸಂಧಾನ ವಿಫಲ: ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್‌ ಅವರು ತಮ್ಮ ಮನೆಯಲ್ಲಿ ಶಾಸಕರ ಜೊತೆ ಸಂಧಾನ ಸಭೆ ನಡೆಸಿದ್ದಾರೆ. ಆದರೆ, ಆ ಸಭೆ ವಿಫಲವಾಗಿದೆ ಎಂದು ಗೊತ್ತಾಗಿದೆ. ಯಾವುದೇ ಕಾರಣಕ್ಕೂ ಮುನಿಯಪ್ಪ ಅವರ ಕುಟುಂಬದವರಿಗೆ ಟಿಕೆಟ್‌ ನಿಡಬಾರದು ಎಂದು ಎಲ್ಲ ಐದು ಶಾಸಕರು ಪಟ್ಟು ಹಿಡಿದಿದ್ದಾರೆ.

ಈ ಮಧ್ಯೆ ಮಾತನಾಡಿರುವ ಸಚಿವ ಕೆ. ಎಚ್. ಮುನಿಯಪ್ಪ, 'ಇಂದು ಸಂಜೆ ಟಿಕೆಟ್‌ ಘೋಷಣೆ ಆಗಬಹುದು. ರಮೇಶ್ ಕುಮಾರ್ ಆದಿಯಾಗಿ ಎಲ್ಲರ ಜೊತೆಗೆ ಚರ್ಚೆ ಮಾಡಿದ್ದೇವೆ. ಕೊತ್ತನೂರು ಮಂಜುನಾಥ, ನಂಜೇಗೌಡ, ಅನಿಲ್ ಕುಮಾರ್ ಸೇರಿ ಎಲ್ಲರ ಜೊತೆಗೆ ಚರ್ಚೆ ಮಾಡಿದ್ದೇನೆ' ಎಂದಿದ್ದಾರೆ.

'ನಾನು ಕೋಲಾರದಲ್ಲಿ ಏಳು ಬಾರಿ ಗೆದ್ದಿದ್ದೇನೆ, ಅನುಭವ ಇದೆ. ಎಲ್ಲರಿಗೂ ಮನವಿ ಮಾಡಿದ್ದೇನೆ ಅವಕಾಶ ಮಾಡಿಕೊಡಿ ಅಂತ. ಆಶಾ ಭಾವನೆ ಇದೆ ಟಿಕೆಟ್‌ ಆಗಬಹುದು ಅಂತ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಟಿಕೆಟ್‌ ಘೋಷಣೆ ತಡವಾದರೂ ಕೂಡ ಒಗ್ಗಟ್ಟಾಗಿದ್ದೇವೆ' ಎಂದರು.

ಕೆಲವು ಶಾಸಕರ ರಾಜೀನಾಮೆ ನೀಡುತ್ತೇವೆ ಎಂಬ ಬೆದರಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘ಅಭ್ಯರ್ಥಿ ಯಾರಾಗಬೇಕು ಎಂಬುದು ರಮೇಶ್ ಕುಮಾರ್ ಹಾಗೂ ಸಚಿವರ ಉಪಸ್ಥಿತಿಯಲ್ಲೇ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದವಾಗಿದ್ದೇವೆ. ರಮೇಶ್ ಕುಮಾರ್, ಮಾಲೂರು ನಂಜೇಗೌಡ ಎಲ್ಲರಿಗೂ ಮನವಿ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೇಟ್ ಕೊಟ್ಡರೂ ಗೆಲ್ಲಿಸುತ್ತೇವೆ ಎಂದಿದ್ದೇವೆ. ಇದಕ್ಕೆ ಮುಂದಾಳತ್ವ ರಮೇಶ್ ಕುಮಾರ್ ಅವರದೇ’ ಎಂದರು.

ನಾಲ್ಕು ಕ್ಷೇತ್ರಗಳ ಟಿಕೆಟ್‌ ಬಾಕಿ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ, 'ಅರೇ ಎಲ್ಲ ಆಗಿದೆಯಲ್ಲ, ಮುನಿಯಪ್ಪ ಇಲ್ಲೇ ಇದ್ದಾರೆ ನೋಡಿ. ಆಗಿದೆ. ಕೇಳಿ ಅವರನ್ನೇ' ಎಂದರು.

ಕೋಲಾರ ಟಿಕೆಟ್ ವಿಚಾರದ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸಚಿವ ಮುನಿಯಪ್ಪ ಕೆಲಹೊತ್ತು ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT