ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಹುಮುಖ ಪ್ರತಿಭೆಯ ಸಂಗೀತ ಗುರು

ರಾಜ್ಯದಾದ್ಯಂತ ನೂರಾರು ಕಾರ್ಯಕ್ರಮ ನೀಡಿ ಕಲಾವಿದ ಕನ್ನಡ ಶಿಕ್ಷಕ
Published 12 ಜೂನ್ 2024, 6:38 IST
Last Updated 12 ಜೂನ್ 2024, 6:38 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸುಗಮ ಮತ್ತು ಶಾಸ್ತ್ರೀಯ ಸಂಗೀತಗಾರ, ಪೌರಾಣಿಕ ನಾಟಕಗಳ ನಟ, ನಿರ್ದೇಶಕ, ಹಾರ್ಮೋನಿಯಂ ಮೇಷ್ಟ್ರು... ಹೀಗೆ ಬಹುಮುಖ ಪ್ರತಿಭೆಯ ಚಂದ್ರಶೇಖರ್ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಅಧ್ಯಾಪಕರು.

ಹಾಸನ ಜಿಲ್ಲೆಯ ಅರಸೀಕೆರೆ ಬಳಿಯ ಕೋಡಿಹಳ್ಳಿಯವರಾದ ಮೇಷ್ಟರು ತರಗತಿಗೆ ಪ್ರವೇಶಿಸಿದರೆ ಸಾಕು, ವಿದ್ಯಾರ್ಥಿಗಳಿಗೆ ಆನಂದವೋ ಆನಂದ. ಅವರು ಪದ್ಯವನ್ನು ರಾಗವಾಗಿ ಹಾಡುತ್ತಾ, ಹಾಡಿಸುತ್ತಾ ವಿದ್ಯಾರ್ಥಿಗಳನ್ನು ಉಲ್ಲಾಸಮಯಗೊಳಿಸುತ್ತಾರೆ. ಕನ್ನಡದ ತರಗತಿಯನ್ನು ಸಂಗೀತದ ತರಗತಿಯಾಗಿ ಪರಿವರ್ತಿಸುತ್ತಾರೆ. ತರಗತಿಗಳಲ್ಲಿ ಕನ್ನಡದ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ಬಳಿಕ ಅವುಗಳ ಬಗ್ಗೆ ವಿವರಣೆ ನೀಡುತ್ತಾರೆ. ವಚನಗಳನ್ನು ಸಂಗೀತಮಯವಾಗಿ ಹಾಡಿ ಮಕ್ಕಳಿಗೆ ಅವುಗಳ ಬಗ್ಗೆ ಅಭಿರುಚಿ ಮೂಡಿಸುತ್ತಾರೆ. ಕಥೆ ಮತ್ತು ನಾಟಕಗಳನ್ನು ಅಭಿನಯಿಸಿ ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಬೋಧಿಸುತ್ತಾರೆ.

ಶಾಲೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ ಇವರ ಪ್ರಾರ್ಥನಾ ನುಡಿಯಿಂದಲೇ ಆರಂಭವಾಗಬೇಕು. ಹಾರ್ಮೋನಿಯಂ ನುಡಿಸುತ್ತಾ ವಿದ್ಯಾರ್ಥಿಗಳಿಗೆ ನಾಡಗೀತೆ, ದೇಶಭಕ್ತಿಗೀತೆಗಳನ್ನು ಕಲಿಸಿ, ಹಾಡಿಸುತ್ತಾ ಕಾರ್ಯಕ್ರಮಕ್ಕೆ ಶೋಭೆ ತರುತ್ತಾರೆ. ಇವರ ಹಾಡುಗಳನ್ನು ಕೇಳಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ತಲೆದೂಗಿ ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸದೆ ಇರರು.

ಕರ್ನಾಟಕ ಸಂಗೀತದ ವಿದ್ವಾಂಸರಾದ ಎಲ್‌ಒಜಿ ರಾವ್ ಅವರಿಂದ ಜೂನಿಯರ್ ಮತ್ತು ನಂಜುಂಡಯ್ಯ ಅವರಿಂದ ಸೀನಿಯರ್ ವಿಭಾಗದಲ್ಲಿ ಸಂಗೀತ ಪದವಿ ಪಡೆದಿರುವ ಚಂದ್ರಶೇಖರ್ ಕೇವಲ ಶಾಸ್ತ್ರೀಯ ಸಂಗೀತಗಾರರು ಮಾತ್ರವಲ್ಲ, ಅವರೊಬ್ಬ ಉತ್ತಮ ಜಾನಪದ ಗಾಯಕರೂ ಕೂಡ. ‘ಚಿನ್ನದ ತೇರ ಏರಿ ಚೆನ್ನಿಗ ಬಂದನೊ, ಚೆಲುವಾರ ಚೆಲುವ ಸ್ವಾಮಿ ರಂಗಯ್ಯ ಬಂದನೋ...’ ಇದನ್ನು ಅವರ ಧ್ವನಿಯಲ್ಲಿಯೇ ಕೇಳಬೇಕು. 10 ನಿಮಿಷಕ್ಕೂ ಹೆಚ್ಚು ಸಮಯ ಅವರ ಕಂಚಿನ ಕಂಠದ ಹಾಡು ಕೇಳುಗರ  ಮನಸ್ಸನ್ನು ರೋಮಾಂಚನಗೊಳಿಸುತ್ತದೆ.

ಚಂದ್ರಶೇಖರ್ ಶಾಸ್ತ್ರೀಯ ಸಂಗೀತದಷ್ಟೇ ಸುಗಮ ಸಂಗೀತದಲ್ಲಿಯೂ ಪ್ರಖ್ಯಾತರಾಗಿದ್ದಾರೆ. ಗಂಗಾವತಿಯಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ಮತ್ತು ಮಡಿಕೇರಿ ದಸರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕಾರ್ಯಕ್ರಮ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ.

ಇವರು ಉತ್ತಮ ಹಾರ್ಮೋನಿಯಂ ಮೇಸ್ಟರು ಕೂಡ. ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ತಾವೇ ಹಾರ್ಮೋನಿಯಂ ನುಡಿಸಿಕೊಂಡು ಹಾಡುತ್ತಾರೆ. ಇತರರಿಗೂ ನುಡಿಸಿದ್ದಾರೆ. ಪ್ರಸಿದ್ಧ ಹರಿಕಥೆ ದಾಸರಾದ ಲಕ್ಷ್ಮಣದಾಸ್, ಎಂ.ಡಿ.ನಿಂಗಪ್ಪ, ಡಾ.ಮಾಲಿನಿ ಮೊದಲಾದವ ಕಾರ್ಯಕ್ರಮದಲ್ಲಿ ಸೊಗಸಾಗಿ ಹಾರ್ಮೋನಿಯಂ ನುಡಿಸಿದ್ದಾರೆ.

ಪ್ರಖ್ಯಾತ ಮಾಂಡಲಿನ್ ವಾದಕ ಮೈಸೂರು ಆನಂದ್ ಸೇರಿದಂತೆ ನಾಡಿನ ಪ್ರಖ್ಯಾತ ಪಕ್ಕವಾದ್ಯ ಕಲಾವಿದರೆಲ್ಲ ಚಂದ್ರಶೇಖರ್ ಅವರ ಸಂಗೀತ ಗೋಷ್ಠಿಗೆ ಸಾಥ್ ನೀಡಿದ್ದಾರೆ.

ರಂಗಭೂಮಿ ನಟ, ಗುರು: ಚಂದ್ರಶೇಖರ್ ಉತ್ತಮ ರಂಗಭೂಮಿ ನಟರು. ಪೌರಾಣಿಕ ನಾಟಕಗಳಾದ ಸತ್ಯಹರಿಶ್ಚಂದ್ರ, ಕುರುಕ್ಷೇತ್ರ ಮೊದಲಾದ ನಾಟಕಗಳಲ್ಲಿ ನಟರಾಗಿಯೂ ಅಭಿನಯಿಸಿದ್ದಾರೆ. ಜತೆಗೆ ಕುರುಕ್ಷೇತ್ರ, ರಾಜ ಸತ್ಯವ್ರತ, ಸತ್ಯ ಹರಿಶ್ಚಂದ್ರ ನಾಟಕಗಳನ್ನು ಕಲಿಸಿ ತುಮಕೂರು, ತಿಪಟೂರು, ಮೊದಲಾದ ಭಾಗಗಳಲ್ಲಿ ನಾಟಕ ಮಾಡಿಸಿದ್ದಾರೆ. ಅಲ್ಲದೆ ಚಿನ್ನದಗೊಂಬೆ, ತಳಲುದೊರೆ, ಬಿದಿರುಗೋಡೆ ಎಂಬ ಸಾಮಾಜಿಕ ನಾಟಕವನ್ನು ಕಲಿಸಿ ತಿಪಟೂರಿನಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ 4 ಬಾರಿ ಪ್ರದರ್ಶಿಸಿದ್ದಾರೆ. ಇವರ ಈ ಎಲ್ಲ ಪ್ರತಿಭೆಗಳನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಹತ್ತಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಹರೀಕಥೆ ದಾಸರಿಗೆ ಹಾರ್ಮೋನಿಯಂ ನುಡಿಸುತ್ತಿರುವ ಚಂದ್ರಶೇಖರ್

ಹರೀಕಥೆ ದಾಸರಿಗೆ ಹಾರ್ಮೋನಿಯಂ ನುಡಿಸುತ್ತಿರುವ ಚಂದ್ರಶೇಖರ್

ಹರ್ಮೋನಿಯಂ ನುಡಿಸಿಕೊಂಡು ಹಾಡುತ್ತಿರುವ ಚಂದ್ರಶೇಖರ್.
ಹರ್ಮೋನಿಯಂ ನುಡಿಸಿಕೊಂಡು ಹಾಡುತ್ತಿರುವ ಚಂದ್ರಶೇಖರ್.
ಹರ್ಮೋನಿಯಂ ನುಡಿಸಿಕೊಂಡು ಹಾಡುತ್ತಿರುವ ಚಂದ್ರಶೇಖರ್.
ಹರ್ಮೋನಿಯಂ ನುಡಿಸಿಕೊಂಡು ಹಾಡುತ್ತಿರುವ ಚಂದ್ರಶೇಖರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT