ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ: ಮೈನವಿರೇಳಿಸಿದ ಎತ್ತಿನ ಗಾಡಿ ಓಟ

ಹೆಬ್ಬಾಲೆ ಬನಶಂಕರಿ ಅಮ್ಮನ ಜಾತ್ರೆ; ರಾಜ್ಯಮಟ್ಟದ ಸ್ಪರ್ಧೆ
Published 13 ಡಿಸೆಂಬರ್ 2023, 14:16 IST
Last Updated 13 ಡಿಸೆಂಬರ್ 2023, 14:16 IST
ಅಕ್ಷರ ಗಾತ್ರ

ಕುಶಾಲನಗರ: ಉತ್ತರ ಕೊಡಗಿನ ಅರೆ ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶವಾದ ಹೆಬ್ಬಾಲೆಯಲ್ಲಿ ಗ್ರಾಮದೇವತೆ  ಬನಶಂಕರಿ ಅಮ್ಮನ ಜಾತ್ರೋತ್ಸವ ಅಂಗವಾಗಿ ಬುಧವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಜಾನಪದ ಕ್ರೀಡೆ ಎತ್ತಿನ ಗಾಡಿ ಓಟ ಸ್ಪರ್ಧೆ ನೆರೆದಿದ್ದ ಜನರನ್ನು ರೋಮಾಂಚನಗೊಳಿಸಿತು.

ಸ್ಥಳೀಯ ಮಾದರಿ ಯುವಕ ಸಂಘದ ಆಶ್ರಯದಲ್ಲಿ ಬಸವೇಶ್ವರ ಯುವಕರ ಬಳಗದಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಚಕ್ರ ಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ 100 ಮೀಟರ್ ದೂರ ನಿಗದಿಪಡಿಸಲಾಗಿತ್ತು. ಸ್ಪರ್ಧೆಯನ್ನು ಕಳೆದ 24 ವರ್ಷಗಳಿಂದ ಮಾದರಿ ಯುವಕ‌ ಸಂಘವು ನಡೆಸಿಕೊಂಡು ಬರುತ್ತಿದ್ದು, ಸುಗ್ಗಿಗೆ ಮುನ್ನ ಹಬ್ಬದ ಅಂಗವಾಗಿ ನಡೆಯುವ ಈ ಸ್ಪರ್ಧೆಯಲ್ಲಿ ರೈತರು ಗಾಡಿ ಓಟಕ್ಕೆ ಎತ್ತುಗಳು ಹಾಗೂ ಗಾಡಿಗಳನ್ನು ಅಣಿಗೊಳಿಸುವುದು ಈ ಹಬ್ಬದ ವಿಶೇಷತೆಯಾಗಿದೆ.

ಮಧ್ಯಾಹ್ನ 12 ಗಂಟೆಗೆ ಎತ್ತಿನ ಗಾಡಿ ಸ್ಪರ್ಧೆ ಆರಂಭಗೊಂಡ ಸಂದರ್ಭ ಮೈದಾನ ಎರಡು ಕಡೆ ನಿಂತಿದ್ದ ಜನರು ಸಿಳ್ಳೆ ಹೊಡೆಯುತ್ತ ಜೋರಾಗಿ ಕೂಗುವ ಮೂಲಕ ಎತ್ತುಗಳಿಗೆ ಹುರಿದುಂಬಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.

ಎತ್ತಿನ ಗಾಡಿ ಚಕ್ರಕಟ್ಟಿ ಓಡಿಸುವ ಸ್ಪರ್ಧೆಗೆ 26ಕ್ಕೂ ಹೆಚ್ಚಿನ ಎತ್ತಿನ ಗಾಡಿ ಮಾಲೀಕರು ಪಾಲ್ಗೊಂಡಿದ್ದರು. ರೋಮಾಂಚನಕಾರಿ ಹಾಗೂ ಸಾಹಸಮಯ ಸ್ಪರ್ಧೆ ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು.

ಕೆಲವು ಎತ್ತುಗಳು ಓಡುತ್ತ ಜನರತ್ತ ನುಗ್ಗಿದವು. ಅದೃಷ್ಟವಶಾತ್ ಯಾವುದೇ ಅಪಾಯವಾಗಲಿಲ್ಲ. ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಎತ್ತಿನ ಗಾಡಿ ಮಾಲೀಕರಿಗೆ ಕ್ರಮವಾಗಿ 8 ಗ್ರಾಂ ಚಿನ್ನ, 6 ಗ್ರಾಂ ಹಾಗೂ 4 ಗ್ರಾಂ. ಚಿನ್ನ ಹಾಗೂ ನಾಲ್ಕು, ಐದು, ಆರು, ಏಳನೇ ಸ್ಥಾನಗಳಿಸಿದ ಮಾಲೀಕರಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ದಿನವಿಡೀ ನಡೆದ ಜಾನಪದ ಕ್ರೀಡೆ ಹಾಗೂ ಗ್ರಾಮೀಣ ಕ್ರೀಡೆಗಳಲ್ಲಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಸಾಮೂಹಿಕವಾಗಿ ಪಾಲ್ಗೊಂಡಿದ್ದು ಕಂಡು ಬಂದಿತು. ಉತ್ಸಾಹಿ ಯುವಕರು, ಯುವತಿಯರು ಹಾಗೂ ಮಹಿಳೆ ಮತ್ತು ಪುರುಷರು ವಿವಿಧ ಕ್ರೀಡಾ ಸ್ಪರ್ಧೆ ಭಾಗವಹಿಸಿ ಸಂಭ್ರಮಿಸಿದರು.

ಸ್ಪರ್ಧೆಗೆ ಉದ್ಯಮಿ ಮೋಹನ್ ಲಾಲ್ ಚೌದರಿ, ಉದ್ಯಮಿ ಲಕ್ಷ್ಮೀ ರಾಜಶೇಖರ್, ಶುಂಠಿ ವ್ಯಾಪಾರಿ ಪುಟ್ಟು  ಚಾಲನೆ ನೀಡಿದರು.

ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಬೋಜೇಗೌಡ, ಪ್ರವೀಣ್, ಎಚ್.ಡಿ.ಲೋಹಿತ್ ಕುಮಾರ್ ಕಾರ್ಯನಿರ್ವಹಿಸಿದರು.

ಈ ಸಂದರ್ಭ ಬಸವೇಶ್ವರ ಯುವಕರ ಬಳಗದ ಗೌರವಾಧ್ಯಕ್ಷ ಎಚ್.ಎನ್.ರಾಜಶೇಖರ್, ಅಧ್ಯಕ್ಷ ಪಟೇಲ್ ಜಗದೀಶ್, ಕಾರ್ಯದರ್ಶಿ ಅಭಿ, ಖಜಾಂಚಿ ಶಿವು, ಪದಾಧಿಕಾರಿಯಾದ ನವೀನ್, ರಘು, ಪುನೀತ್ ಕೆಂಪ, ನಂದನ್, ಮಾಹೇಶ್, ಸುದರ್ಶನ್, ಸಚಿನ್, ರವೀಂದ್ರ, ಅಕ್ಷಯ ಸಲಹೆಗಾರ ಎಚ್.ಜಿ.ಕುಮಾರ್, ಎಚ್.ಟಿ.ದಿನೇಶ್, ಎಚ್.ಆರ್.ಶ್ರೀನಿವಾಸ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಎಸ್.ರಘು ಪಾಲ್ಗೊಂಡಿದ್ದರು.

ಗಾಡಿ ಓಟ ಸ್ಪರ್ಧೆ ನೋಡಲು ಗ್ರಾಮದ ಜನರು ಸೇರಿದಂತೆ ಕೆ.ಆರ್.‌ನಗರ, ಸರಗೂರು, ಸಾಲಿಗ್ರಾಮ, ಹಂಪಾಪುರ, ರಾಮನಾಥಪುರ, ಮಲ್ಲಿನಾಥಪುರ ಸೇರಿದಂತೆ ಕೊಡಗು, ಮೈಸೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಗಡಿಗ್ರಾಮಗಳ ಜನರು ಸೇರಿದ್ದರು.

26ಕ್ಕೂ ಹೆಚ್ಚಿನ ಎತ್ತಿನ ಗಾಡಿಗಳು ಭಾಗಿ ಪ್ರಥಮ ಬಹುಮಾನ 8 ಗ್ರಾಂ ಚಿನ್ನ ರೋಮಾಂಚನಗೊಂಡ ಪ್ರೇಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT