ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತರಾಗಿ ಬದುಕಿದರೆ ಜೀವನ ಪಾವನ: ಸಾಹಿತಿ ಕಾಳೇಗೌಡ ನಾಗವಾರ

ಮಡಿಕೇರಿ: ಸಾಹಿತಿ ಡಾ.ಜೆ.ಸೋಮಣ್ಣ ಅವರ ನಾಲ್ಕು ಕೃತಿಗಳ ಬಿಡುಗಡೆ
Last Updated 22 ಸೆಪ್ಟೆಂಬರ್ 2021, 13:18 IST
ಅಕ್ಷರ ಗಾತ್ರ

ಮಡಿಕೇರಿ: ‘ಆರೋಗ್ಯಕರ ಸಮಾಜ ನಿರ್ಮಿಸುವ ಕೆಲಸ ಆಗಬೇಕಿದ್ದು ಅದು ಎಲ್ಲರ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ’ ಎಂದು ಸಾಹಿತಿ ಕಾಳೇಗೌಡ ನಾಗವಾರ ಇಲ್ಲಿ ಅಭಿಪ್ರಾಯಪಟ್ಟರು.

ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ, ಬಾಳೆಲೆ ವಿಜಯಲಕ್ಷ್ಮಿ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಅವರ ‘ಮೌನ ಕಣಿವೆಯ ಸಂತ’, ‘ಅಶ್ವತ್ಥರ ಕಥಾ ಸಾಹಿತ್ಯ’, ‘ಗಿರಿಸೀಮೆಯ ಹಾಡು–ಪಾಡು’ ಹಾಗೂ ‘ಕನ್ನಡ ಸಾಹಿತ್ಯಕ್ಕೆ ಕೊಡಗಿನ ಕೊಡುಗೆ’ ಎಂಬ ನಾಲ್ಕು ಕೃತಿಗಳ ಬಿಡುಗಡೆಯ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಸಮಾಜ ಕಟ್ಟುವುದು ಸಾಮೂಹಿಕ ಜವಾಬ್ದಾರಿ. ಸಮಾಜ ಹಾಳಾಗಿದೆ ಎಂಬ ನಕಾರಾತ್ಮಕ ಧೋರಣೆ ಒಳ್ಳೆಯದ್ದಲ್ಲ. ಸಮಾಜದಲ್ಲಿ ಒಳಿತು, ಕೆಡುಕು ಇರುತ್ತದೆ. ಈ ನಡುವೆ ಜಾತ್ಯತೀತರಾಗಿ ಬದುಕಿದರೆ ಜೀವನ ಪಾವನವಾಗಲಿದೆ’ ಎಂದು ಆಶಿಸಿದರು.

‘ಕೊಡಗು, ಕ್ರೀಡೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದೆ. ದೇಶ ಹಾಗೂ ರಾಜ್ಯ ಆದರ್ಶ ಜಿಲ್ಲೆಯೂ ಹೌದು. ಮುಂದುವರಿದ ರಾಷ್ಟ್ರಗಳಲ್ಲಿಯೇ ಮಹಿಳೆಯರಿಗೆ ಸಮಾನ ಸ್ಥಾನಮಾನ ಇಲ್ಲ. ಆದರೆ, ಈ ಜಿಲ್ಲೆಯಲ್ಲಿ ಪುರುಷ ಹಾಗೂ ಮಹಿಳೆಗೆ ಸಮಾನವಾದ ಸ್ಥಾನಮಾನವಿದೆ. ಈ ನೆಲದ ಗುಣವೇ ಹಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಮಹಾತ್ಮ ಗಾಂಧೀಜಿ ಅವರು ಈ ಜಿಲ್ಲೆಗೆ ಭೇಟಿ ಕೊಟ್ಟಿದ್ದ ವೇಳೆ ಕೊಡಗಿನ ಗೌರಮ್ಮ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಚಿನ್ನಾಭರಣವನ್ನೇ ದೇಣಿಗೆಯಾಗಿ ನೀಡಿದ್ದರು. ಗಾಂಧೀಜಿ ಅವರು ಮಡಿಕೇರಿಯ ಗಾಂಧಿ ಮೈದಾನಕ್ಕೆ ಬಂದಾಗ ಕಣ್ಣೀರು ಸುರಿಸುತ್ತಲೇ ಈ ವಿಷಯ ಹೇಳಿದ್ದರು. ಬಳಿಕ ಪುತ್ತೂರು, ಸುಳ್ಯಕ್ಕೆ ತೆರಳಿದ್ದಾಗ ಅಲ್ಲಿಯೂ ಈ ನೈಜ ಘಟನೆ ಪ್ರಸ್ತಾಪಿಸಿದಾಗಲೂ ಅಲ್ಲಿನ ಮಹಿಳೆಯರೂ ಎಲ್ಲ ಚಿನ್ನಾಭರಣ ಕೊಡಲು ಮುಂದಾಗಿದ್ದರು’ ಎಂದು ಹಿಂದಿನ ಘಟನೆ ಮೆಲುಕಿ ಹಾಕಿದರು.

ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಜಿಲ್ಲಾ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ನಾರಾಯಣಗುರು, ದೇವರಾಜ ಅರಸು ಅವರ ತತ್ವಾದರ್ಶ ಮೈಗೂಡಿಸಿಕೊಂಡು ನಾನು ಸಾರ್ವಜನಿಕ ಜೀವನದಲ್ಲಿದ್ದೇನೆ. ಅವರ ಆದರ್ಶಗಳು ಪ್ರೇರಣೆ ನೀಡಿವೆ. ನಾರಾಯಣ ಗುರು, ಸಮಾಜ ಸುಧಾರಕ. ಧರ್ಮ ಸಾಮರಸ್ಯ ಮೂಡಿಸುವಲ್ಲಿ ಸಫಲರಾಗಿದ್ದರು. ಅಜ್ಞಾನದಲ್ಲಿ ಮುಳುಗಿದ್ದವರನ್ನು ಮೇಲಕ್ಕೆ ತರಲು ಪ್ರಯತ್ನಿಸಿದ್ದರು. ಶೋಷಿತ ಸಮಾಜ ಸುಧಾರಣೆಗೆ ಜನ್ಮತಾಳಿದ್ದ ಮಹಾಪುರುಷ ನಾರಾಯಣ ಗುರು’ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ವಿ.ಪಿ.ಶಶಿಧರ್ ಮಾತನಾಡಿ, ‘ಕೊಡಗು ವೈವಿಧ್ಯಮಯ ಜಿಲ್ಲೆ. ಸೋಮಣ್ಣ ಅವರು ತಮ್ಮ ಗಿರಿಸೀಮೆಯ ಹಾಡು–ಪಾಡು ಕೃತಿಯಲ್ಲಿ ಕಾಡಿನ ನಡುವೆ ಬದುಕಿರುವ ಜನರ ಸಾಹಿತ್ಯ, ಅವರ ಸಾಂಸ್ಕೃತಿಕ ಜೀವನ ಪರಿಚಯಿಸುವ ಕೆಲಸ ಮಾಡಿದ್ದಾರೆ. ಕಾಡಿನಲ್ಲಿ ನೆಲೆಸಿರುವ ಜನರಲ್ಲಿ ಶ್ರೀಮಂತಿಕೆ ಸಾಹಿತ್ಯವಿದೆ’ ಎಂದು ಹೇಳಿದರು.

ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳದ ಅಧ್ಯಕ್ಷ ಕೇಶವ ಕಾಮತ್‌ ಮಾತನಾಡಿ, ಬಳಗದ ವತಿಯಿಂದ ಪ್ರತಿ ತಿಂಗಳು ಒಂದೊಂದು ಕಾರ್ಯಕ್ರಮ ನಡೆಸಲಾಗುತ್ತಿದೆ. ಕೋವಿಡ್‌ ದುರಿತ ಕಾಲದಲ್ಲೂ ಗೂಗಲ್‌ ಮೀಟ್‌ನಲ್ಲಿ ಸಾಹಿತ್ಯಿಕ ಕಾರ್ಯಕ್ರಮ ನಡೆಸಲಾಗಿತ್ತು’ ಎಂದು ಹೇಳಿದರು.

ಸೋಮಣ್ಣ ಅವರು ಹಲವು ಕೃತಿ ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ವಕೀಲ ಕೆ.ಆರ್‌.ವಿದ್ಯಾಧರ್ ಮಾತನಾಡಿದರು‌, ಲೇಖಕ ಡಾ.ಜೆ.ಸೋಮಣ್ಣ, ಎಸ್‌ಎನ್‌ಡಿಪಿ ಕೊಡಗು ಯೂನಿಯನ್‌ ಅಧ್ಯಕ್ಷ ವಿ.ಕೆ.ಲೋಕೇಶ್‌ ಹಾಜರಿದ್ದರು. ವಿವಿಧ ಕಲಾವಿದರು ಭಾವಗೀತೆ ಗಾಯನ ನಡೆಸಿಕೊಟ್ಟರು. ಅಂಬೇಕಲ್‌ ನವೀನ್‌ ಕುಶಾಲಪ್ಪ ಅವರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT