ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಉತ್ಸವದ ಉದ್ಘಾಟನೆಗೆ ಸಿ.ಎಂ ಒಪ್ಪಿಗೆ

Last Updated 6 ಡಿಸೆಂಬರ್ 2022, 12:22 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಅತ್ಯಂತ ಪ್ರತಿಷ್ಠಿತ ಹಾಕಿ ಉತ್ಸವ ಎಂದೆ ಪರಿಗಣಿತವಾದ ಕೊಡವ ಕೌಟುಂಬಿಕ ಹಾಕಿ ಉತ್ಸವ ಉದ್ಘಾಟನೆಗೆ ಹಾಗೂ ಉತ್ಸವಕ್ಕೆ ₹ 1 ಕೋಟಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿದ್ದಾರೆ.

‘ಈಚೆಗೆ ಬೆಂಗಳೂರಿನಲ್ಲಿ ಹಾಕಿ ಉತ್ಸವದ ಲೊಗೊ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ವರ್ಷ ಮಾರ್ಚ್ 20ರಿಂದ ಆರಂಭವಾಗುವ ಪಂದ್ಯಾವಳಿಯನ್ನು ಉದ್ಘಾಟಿಸುವುದಾಗಿ ತಿಳಿಸಿದ್ದಾರೆ. 2018ರ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಪ್ರತಿಷ್ಠಿತ ಪಂದ್ಯಾವಳಿಯ ಮೆರುಗು ಇದರಿಂದ ಮತ್ತಷ್ಟು ಹೆಚ್ಚಲಿದೆ’ ಎಂದು ಅಪ್ಪಚಟ್ಟೋಳಂಡ ಕುಟುಂಬದ ಕೌಟುಂಬಿಕ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಮನುಮುತ್ತಪ್ಪ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಾಕಿ ಉತ್ಸವಕ್ಕೆ ₹ 2 ಕೋಟಿ ಖರ್ಚಾಗಲಿದೆ. ಸರ್ಕಾರ ₹ 1 ಕೋಟಿ ನೀಡುತ್ತಿರುವುದು ಇದೇ ಮೊದಲು. ಕಳೆದ 4 ವರ್ಷಗಳಿಂದ ನಿಂತಿದ್ದ ಟೂರ್ನಿಯಿಂದ ಕ್ರೀಡಾರಂಗದಲ್ಲಿ ನಿರಾಸೆಯ ವಾತಾವರಣ ಕವಿದಿತ್ತು. ಈಗ ಮತ್ತೆ ಸಂಭ್ರಮ ಗರಿಗೆದರುತ್ತಿದೆ ಎಂದು ತಿಳಿಸಿದರು.

ಉತ್ಸವದ ಲೊಗೊ ಸ್ಪರ್ಧೆಯಲ್ಲಿ 108 ಮಂದಿ ಭಾಗವಹಿಸಿದ್ದರು. ಅವರಲ್ಲಿ ಬಾಳೆಲೆ ಗ್ರಾಮದ ಸುಳ್ಳಿಮಾಡ ದರ್ಶನ್ ಜೋಯಪ್ಪ ಅವರು ರಚಿಸಿದ ಲೊಗೊ ಆಯ್ಕೆಯಾಗಿದ್ದು, ಅವರಿಗೆ ₹ 10 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.

ಕೊಡಗಿನಿಂದ ರಾಷ್ಟ್ರಮಟ್ಟದ ಹಾಕಿ ತಂಡವನ್ನು ಪ್ರತಿನಿಧಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿರುವ ಪ್ರತಿಭೆಗಳು ಬೆಳಕಿಗೆ ಬರಲು ಇಂತಹ ಉತ್ಸವಗಳು ಕಾರಣವಾಗುತ್ತವೆ. ಇದು 23ನೇ ವರ್ಷದ ಉತ್ಸವವಾಗಿದ್ದು, ಸಿದ್ಧತೆಗಳು ಭರದಿಂದ ನಡೆದಿವೆ ಎಂದು ಹೇಳಿದರು.

2023ರ ಮಾರ್ಚ್ 20ರಿಂದ ಏಪ್ರಿಲ್ 10ರವರೆಗೆ ನಾಪೋಕ್ಲುವಿನ ಮೂರು ಕ್ರೀಡಾಂಗಣದಲ್ಲಿ ಏಕಕಾಲದಲ್ಲಿ ನಡೆಯುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ 350 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಮತ್ತೊಂದು ಕ್ರೀಡಾಂಗಣವನ್ನೂ ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಎಲ್ಲ ಪಂದ್ಯಗಳನ್ನು ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನೇರಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.

ಉತ್ಸವ ಸಮಿತಿಯ ಸದಸ್ಯರಾದ ಹರೀಶ್‌ ಸೋಮಯ್ಯ, ರವಿ ಮೊಣ್ಣಪ್ಪ, ವಸಂತ್ ಮುತ್ತಪ್ಪ, ಜನತ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT