ಬುಧವಾರ, ಆಗಸ್ಟ್ 10, 2022
20 °C
ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿ; ವಿದ್ಯುತ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಕಾಂಗ್ರೆಸ್ ವಿರೋಧ

ಸರ್ಕಾರ ನೀತಿ ಖಂಡಿಸಿ ವಿವಿಧೆಡೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಪೆಟ್ರೋಲ್‌, ಡೀಸೆಲ್‌ ಹಾಗೂ ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಸೋಮವಾರ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿ.ಪಂ. ಮಾಜಿ ಸದಸ್ಯ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಇಲ್ಲಿನ ಬ್ಲೂ ಮೂನ್ ಪೆಟ್ರೋಲ್ ಬಂಕ್ ಮುಂಭಾಗ ಜಮಾಯಿಸಿ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿ.ಪಿ.ಶಶಿಧರ್ ಮಾತನಾಡಿ, ‘ಲಾಕ್‌ಡೌನ್‌ದಿಂದ ಈಗಾಗಲೇ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ನಿತ್ಯ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಸುತ್ತ ಜನರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ಅತೀ ಹೆಚ್ಚು ಆಮದು ಸುಂಕ, ವ್ಯಾಟ್‌ ವಿಧಿಸಿ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ತೈಲೆ ಬೆಲೆ ಏರಿಕೆಯಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಕೂಡಲೇ ಸರ್ಕಾರ ತೈಲ ಬೆಲೆ ಇಳಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ, ‘ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ. ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕ ಅಬ್ದುಲ್ ಖಾದರ್, ಪ.ಪಂ. ಸದಸ್ಯ ಎಂ.ಕೆ. ದಿನೇಶ್, ಡಿಸಿಸಿ ಉಪಾಧ್ಯಕ್ಷ ಮೈಸಿ ಕತ್ತಾಣೀರಾ, ಮುಖಂಡರಾದ ಜೋಸೆಫ್ ವಿಕ್ಟರ್ ಸೋನ್ಸ್, ಅಬ್ದುಲ್ ಖಾದರ್, ಶಾಜಿ ಇದ್ದರು.

ಬೆಲೆ ಏರಿಕೆಗೆ ವಿರೋಧ

ಶನಿವಾರಸಂತೆ: ಪಟ್ಟಣದ ಭಾರತ್ ಪೆಟ್ರೋಲಿಯಂ ಬಂಕ್ ಬಳಿ ಹೋಬಳಿ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತೈಲ ದರ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮುಖಂಡ ಪಿ.ಕೆ.ಗಂಗಾಧರ್ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎ.ಆದಿತ್ಯಗೌಡ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಮುಖಂಡ ಎಸ್.ಸಿ.ಶರತ್ ಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ, ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಜೆ.ಗಿರೀಶ್, ಕಾರ್ಯಕರ್ತರಾದ ಸಿ.ಡಿ.ರಾಜು ಮಹಮ್ಮದ್ ಪಾಶ, ಅಕ್ಮಲ್ ಪಾಶ, ಮಲ್ಲೇಶ್, ಶಿವರಾಜ್, ಇಬ್ರಾಹಿಂ, ಎಸ್.ಎಸ್.ಶಿವಾನಂದ್, ಮಂಜುನಾಥ್, ಧನುಶೇಖರ್ ಪಾಲ್ಗೊಂಡಿದ್ದರು.

ಕುಟ್ಟದಲ್ಲಿ ಕಾರ್ಯಕರ್ತರ ಧರಣಿ

ಗೋಣಿಕೊಪ್ಪಲು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿ ವಿರೋಧಿಸಿ ಕುಟ್ಟ ಕಾಂಗ್ರೆಸ್ ವತಿಯಿಂದ ಅಲ್ಲಿನ ಎಚ್.ಪಿ ಪೆಟ್ರೋಲ್ ಬಂಕ್ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ₹ 100 ರ ಗಡಿ ದಾಟಿರುವ ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಕೃಷ್ಣ, ‘ಇಂಧನ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿದೆ. ಇದರಿಂದ ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಒಂದು ಕಡೆ ಕೋವಿಡ್ ಹೊಡೆತ ಮತ್ತೊಂದು ಕಡೆ ಬೆಲೆ ಏರಿಕೆ ಬಿಸಿಯಿಂದ ಬಡವರು ತೀವ್ರ ಸಂಕಷ್ಟ ಅನುಭಿವಿಸುವಂತಾಗಿದೆ. ನಿತ್ಯ ದುಡಿದು ತಿನ್ನುವ ಕೂಲಿ ಕಾರ್ಮಿಕರು, ಆಟೊ ಚಾಲಕರು ಕಂಗಾಲಾಗಿದ್ದಾರೆ. ಹಿಂದೆಂದೂ ಕಂಡರಿಯದ ಸ್ಥಿತಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಇದೆ’ ಎಂದು ದೂರಿದರು.

‘ಅಧಿಕಾರಕ್ಕೆ ಬಂದರೆ ಎಲ್ಲ ವಸ್ತುಗಳ ಬೆಲೆಯನ್ನು ಇಳಿವುದಾಗಿ ಹೇಳಿದ ಪ್ರಧಾನಿ ನರೇಂದ್ರ ಮಾತಿಗೆ ಬದ್ಧರಾಗಿಲ್ಲ. ಖಾಸಗೀಕರಣ, ಜಿಎಸ್‌ಟಿ ಹೊರೆ, ಇಂಧನ ಬೆಲೆ ಏರಿಕೆಯಿಂದ ದೇಶದ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ’ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಅರುಣ್ ಕುಮಾರ್ ಮಾತನಾಡಿ, ‘ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ತೆರಿಗೆಯನ್ನು ಕಡಿತ ಗೊಳಿಸಿದರೆ ಬೆಲೆ ಏರಿಕೆ ಕಡಿತ ಗೊಳಿಸಬಹುದು. ಆದರೆ ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರ ಹಿತಕಾಯುವುದು ಬೇಕಿಲ್ಲ’ ಎಂದು ಟೀಕಿಸಿದರು.

ಮುಖಂಡರಾದ ಎಂ.ಎನ್.ರಾಘವನ್, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಸಿ.ಸುಬ್ಬ, ಪಿ.ಯು.ರಮ್ಯಾ, ಜೆ.ಕೆ.ಪ್ರೇಮ, ಯುವ ಕಾಂಗ್ರೆಸ್ ಮುಖಂಡ ಸುರೇಶ್ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು