ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಜಪೇಟೆ | ಸಂಸದ ಪ್ರತಾಪ ಸಿಂಹ ರಾಜೀನಾಮೆಗೆ ಆಗ್ರಹ: ಕಾಂಗ್ರೆಸ್ ಪ್ರತಿಭಟನೆ

Published 14 ಡಿಸೆಂಬರ್ 2023, 13:28 IST
Last Updated 14 ಡಿಸೆಂಬರ್ 2023, 13:28 IST
ಅಕ್ಷರ ಗಾತ್ರ

ವಿರಾಜಪೇಟೆ: ರಾಷ್ಟ್ರದ ಸಂಸತ್ ಭವನದಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಹಳದಿ ಹೊಗೆ ಹಾಕಿ ಆತಂಕ ಸೃಷ್ಟಿಸಿದ ಘಟನೆಯಲ್ಲಿನ ಭದ್ರತಾ ವೈಫಲ್ಯವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಮತ್ತು ಪಕ್ಷದ ನಗರ ಘಟಕದಿಂದ ಪಟ್ಟಣದ ಗಡಿಯಾರ ಕಂಬದ ಬಳಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಕೆ.ಪಿ.ಸಿ.ಸಿ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ, ‘ಸಂಸತ್ ಭವನದಲ್ಲಿ ಬುಧವಾರ ನಡೆದ ಘಟನೆಯು ದೇಶದ ರಕ್ಷಣಾ ವ್ಯವಸ್ಥೆಯ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ಸಂಸದರಿಗೆ ಭದ್ರತೆ ನೀಡದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿಗಳು ದೇಶದ ಜನತೆಗೆ ಯಾವ ರೀತಿ ರಕ್ಷಣೆ ಒದಗಿಸಲು ಸಾಧ್ಯ. ಸಂಸದ ಪ್ರತಾಪ್ ಸಿಂಹ ಅವರು ಕರ್ತವ್ಯ ಮರೆತು ಪಾಸ್ ನೀಡಿರುವುದು ಸಾಬೀತಾಗಿದೆ. ಸಂಸದರನ್ನು ಕೂಡಲೇ ಪದಚ್ಯುತಗೊಳಿಸಬೇಕು’ ಎಂದು ಒತ್ತಾಯಿಸಿದರು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ರಂಜಿ ಪೂಣಚ್ಚ ಮಾತನಾಡಿ, ‘ಲೋಕಸಭೆಯ ಅಧಿವೇಶನದ ಸಂದರ್ಭ ಸಂಸದರ ಪಾಸ್ ಪಡೆದ ಕೆಲ ಯುವಕರು ಹಳದಿ ಬಣ್ಣದ ಹೊಗೆ ಹಾಕಿ ಅಂತಕ ಸೃಷ್ಟಿ ಮಾಡಿರುವ ಘಟನೆಯಿಂದ ದೇಶದ ಭದ್ರತೆಗೆ ಕಳಂಕ ಬಂದಂತಾಗಿದೆ. ಸಂಸತ್ ಮೇಲೆ ಸುಮಾರು 22 ವರ್ಷಗಳ ಹಿಂದೆ ನಡೆದ ದಾಳಿಯ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ. ಯುವಕರಿಗೆ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ಅವರು ಘಟನೆಯ ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿ, ‘ಘಟನೆಗೆ ಕಾರಣವಾಗಿರುವ ಭದ್ರತಾ ಲೋಪವನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಮೈಸೂರು- ಕೊಡಗು ಲೋಕಸಭಾ ಸಂಸದರು ಕ್ಷೇತ್ರವನ್ನು ಮರೆತು ಅಭಿವೃದ್ಧಿ ಪರ ಆಲೋಚನೆ ಮಾಡದೆ, ಜನಸಾಮಾನ್ಯರ ಹಿತ ಕಾಪಾಡದೆ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಸಂಸದರಿಗೆ ಭದ್ರತೆ ಕಲ್ಪಿಸಲಾಗದ ಸರ್ಕಾರವು ಜನಸಾಮಾನ್ಯರಿಗೆ ಯಾವ ರೀತಿಯಾಗಿ ಭದ್ರತೆ ಕಲ್ಪಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಪಕ್ಷದ ಪ್ರಮುಖರಾದ ಚಿಲ್ಲವಂಡ ಕಾವೇರಪ್ಪ ಹಾಗೂ ಪುರಸಭೆಯ ಸದಸ್ಯ ಮೊಹಮ್ಮದ್ ರಾಫಿ ಮಾತನಾಡಿದರು.

ಪ್ರತಿಭಟನೆಯಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ರಫೀಕ್, ಪುರಸಭೆಯ ಸದಸ್ಯ ಡಿ.ಪಿ. ರಾಜೇಶ್, ಪ್ರಮುಖರಾದ ಸೈಯದ್ ಶಬೀರ್, ಕೆ.ಎಸ್. ಗೋಪಾಲಕೃಷ್ಣ, ಮೆಲ್ವೀನ್ ಲೋಬೋ, ಜೋಕಿಂ ರೋಡ್ರಿಗಸ್, ಶಶಿಧರನ್ ಕಾರ್ಯಕರ್ತರು ಇದ್ದರು.

ಪ್ರತಿಭಟನಕಾರರು ಸಂಸದ ಪ್ರತಾಪ್ ಸಿಂಹ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT