ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಲಾಕ್‌ಡೌನ್ ಪರಿಣಾಮ ಜಿಲ್ಲೆಯಲ್ಲಿ ಕಸಮುಕ್ತವಾದ ಪಟ್ಟಣಗಳು

Last Updated 19 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಪೊನ್ನಂಪೇಟೆ: ಲಾಕ್‍ಡೌನ್ ನಂತರ ಪಟ್ಟಣದ ವಿವಿಧ ಸ್ಥಳಗಳಲ್ಲಿ ಕಾಣುತ್ತಿದ್ದ ಕಸದ ರಾಶಿ ಕಾಣಿಸುತ್ತಿಲ್ಲ. ಎಲ್ಲೆಡೆ ಕಸ ಸುರಿದು ಶುಚ್ಚಿತ್ವಕ್ಕೆ ಧಕ್ಕೆ ಉಂಟಾಗುತ್ತಿದ್ದ ಪರಿಸ್ಥಿತಿಗೆ ಪ್ರಕೃತಿಯೇ ಪರಿಹಾರ ಕಂಡಿಕೊಂಡಿದೆ ಎಂಬ ಅಭಿಪ್ರಾಯ ಪ್ರಕೃತಿ ಪ್ರಿಯರಲ್ಲಿ ಮೂಡಿದೆ.

ಲಾಕ್‍ಡೌನ್‍ಗೆ ಮುಂಚಿತವಾಗಿ ಪಟ್ಟಣಗಳ ಹಲವಾರು ಕಡೆಗಳಲ್ಲಿ ಅಲ್ಲಲ್ಲಿ ಕಸವನ್ನು ಸುರಿಯುವ ಅಭ್ಯಾಸದಿಂದಾಗಿ ಸಮರ್ಪಕವಾಗಿ ವಿಲೇವಾರಿ ಆಗದೆ ಮೂಗುಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇಲ್ಲವಾಗಿದೆ.

ರಸ್ತೆಗಳು ಸ್ವಚ್ಛ: ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ಪಟ್ಟಣಗಳಲ್ಲಿ ಅಲ್ಲಲ್ಲಿ ಕಸ ಶೇಖರಣೆಯಾಗಿ ಜೋರಾಗಿ ಗಾಳಿ ಬೀಸಿದರೆ ಪ್ಲಾಸ್ಟಿಕ್ ಕೈಚೀಲಗಳು ಹಾರಡುವ ದೃಶ್ಯ ಕಂಡುಬರುತ್ತಿತ್ತು. ಮಳೆಬಂದಾಗ ತ್ಯಾಜ್ಯ ಕೊಳೆತು ಕೆಟ್ಟ ವಾಸನೆಯಿಂದ ರಸ್ತೆಯಲ್ಲಿ ಓಡಾಡುವವರಿಗೆ ಕಿರಿಕಿರಿಯ ಅನುಭವ ಉಂಟಾಗುತ್ತಿದ್ದ ದೃಶ್ಯ ಈಗ ಕಂಡುಬರುತ್ತಿಲ್ಲ. ಜೊತೆಗೆ ಪಟ್ಟಣದ ಚರಂಡಿಗಳು ಪ್ಲಾಸ್ಟಿಕ್ ಚೀಲ ಹಾಗೂ ಬಾಟಲಿಗಳಿಂದ ಮುಕ್ತಿ ಪಡೆದು ಮಳೆ ಬಂದಾಗ ನೀರು ಸರಾಗವಾಗಿ ಹರಿಯುವಂತಾಗಿದೆ.

ಕಾಣುತ್ತಿಲ್ಲ ಮದ್ಯದ ಟೆಟ್ರಾಪ್ಯಾಕ್: ಪಟ್ಟಣದ ಬಸ್ಸು ನಿಲ್ದಾಣ, ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶ ಹಾಗೂ ಮುಖ್ಯ ರಸ್ತೆಯ ಮಳಿಗೆಗಳ ಸುತ್ತಲೂ ರಾತ್ರಿ ವೇಳೆಯಲ್ಲಿ ಮದ್ಯ ಸೇವಿಸಿ ಟೆಟ್ರಾಪ್ಯಾಕ್‍ಗಳನ್ನು ಹಾಗೂ ಪಾಸ್ಟಿಕ್ ಲೋಟಗಳನ್ನು ಎಸೆದು ಹೋಗುತ್ತಿದ್ದವರಿಗೂ ಲಾಕ್‍ಡೌನ್ ಪಾಠ ಕಲಿಸಿದೆ.

ಅಂತರಾಜ್ಯದ ಕಸ ಈಗ ಇಲ್ಲ: ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ಭಾಗದ ಪಟ್ಟಣದ ಹೊರಭಾಗದಲ್ಲಿ ಕೇರಳ ರಾಜ್ಯದಿಂದ ಬರುತ್ತಿದ್ದ ವಾಹನಗಳು ಕೋಳಿ ಮಾಂಸ, ಮೀನು, ಹಣ್ಣು ಹಾಗೂ ತರಕಾರಿ ತ್ಯಾಜ್ಯಗಳನ್ನು ಮುಖ್ಯರಸ್ತೆ ಬದಿಯಲ್ಲಿ ಸುರಿದು ಹೋಗುವುದು ಸಾಮಾನ್ಯವಾಗಿತ್ತು. ಇದೀಗ ಕೇರಳ ರಾಜ್ಯದ ಸರಕು ಸಾಗಣಿಕೆ ವಾಹನಗಳು ಬರುತ್ತಿಲ್ಲ. ಇದರಿಂದ ಹೊರರಾಜ್ಯದ ಕಸ ಜಿಲ್ಲೆಯಲ್ಲಿ ಶೇಖರಣೆಯಾಗುತ್ತಿರುವುದು ತಪ್ಪಿದಂತಾಗಿದೆ.

ಕೀರೆಹೊಳೆಯಲ್ಲಿ ಕಸ ಇಲ್ಲ: ಗೋಣಿಕೊಪ್ಪ ಪಟ್ಟಣದಲ್ಲಿ ಕಸದ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುತ್ತಿದ್ದ ಕೀರೆಹೊಳೆಯ ಕಸದ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿಲ್ಲ. ಮಾರ್ಕೆಟ್ ಸಮೀಪ ಹಾಗೂ ಗೋಣಿಕೊಪ್ಪ ಎರಡನೇ ವಿಭಾಗಕ್ಕೆ ಹೋಗುವ ರಸ್ತೆಯಲ್ಲಿ ಪಟ್ಟಣ ಬಹಳಷ್ಟು ಕಸ ಕೀರೆಹೊಳೆಯಲ್ಲಿ ವಿಲೇವಾರಿಯಾಗುತ್ತಿತ್ತು. ಇದೀಗ ಪಟ್ಟಣದಲ್ಲಿ ವಾಣಿಜ್ಯೋದ್ಯಮಕ್ಕೆ ಕಡಿವಾಣ ಬಿದ್ದಿರುವ ಹಿನ್ನೆಲೆ ಕೀರೆ ಸ್ವಚ್ಚವಾಗಿದೆ.

ಮಳೆಗಾಲದಲ್ಲಿ ಕೀರೆಹೊಳೆಯ ತ್ಯಾಜ್ಯಗಳು ಸುಮಾರು 10 ಕಿ.ಮೀ ವರೆಗೂ ಸಾಗಿ ಕಿರುಗೂರು ನಲ್ಲೂರು ಮೂಲಕ ಬಾಳೆಲೆ ಲಕ್ಷ್ಮಣ ತೀರ್ಥ ನದಿಯಲ್ಲಿ ಕಂಡುಬಂದಿತ್ತು.ಈ ಭಾಗದ ರೈತರ ಗದ್ದೆಗಳಲ್ಲಿ ಶೇಖರಣೆಯಾಗಿ ರೈತರ ಕೃಷಿ ಚಟುವಟಿಕೆಗೆ ತೊಂದರೆಯಾಗಿ ಚರ್ಚೆಗೆ ಗ್ರಾಸವಾಗಿತ್ತು.

ಎಚ್ಚೆತ್ತು ಕೊಳ್ಳಬೇಕಾಗಿದೆ ಗ್ರಾಮ ಪಂಚಾಯಿತಿಗಳು : ಸಣ್ಣ ಪ್ರಮಾಣದಲ್ಲಿ ಈಗಾಗಲೇ ಸಾರ್ವಜನಿಕರು ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಲಾಕ್ ಡೌನ್ ನಂತರ ಕೆಲವರು ಸ್ವಯಂ ವಿಲೇವಾರಿಗೆ ಸಾಧ್ಯವಾಗದಂತಹಾ ತ್ಯಾಜ್ಯಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ತಂದು ಸುರಿಯುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಗ್ರಾಮ ಪಂಚಾಯಿಗಳು ಕೂಡ ಪರಿಸ್ಥಿತಿ ಎದುರಿಸಲು ಸಿದ್ದವಾಗಬೇಕಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT