ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲೂ ಇಳಿಕೆಯತ್ತ ಕೋವಿಡ್‌ ಪ್ರಕರಣ

ಕೊಡಗಿನ ಜನರಿಗೆ ತುಸು ನೆಮ್ಮದಿ ವಿಚಾರ; ಇನ್ನಷ್ಟು ಎಚ್ಚರಿಕೆ ವಹಿಸಲು ವೈದ್ಯರ ಸಲಹೆ
Last Updated 28 ಅಕ್ಟೋಬರ್ 2020, 6:58 IST
ಅಕ್ಷರ ಗಾತ್ರ

ಮಡಿಕೇರಿ: ಇಡೀ ದೇಶವೇ ಕೋವಿಡ್‌ ವಿರುದ್ಧದ ಹೋರಾಟವು ನಿರ್ಣಾಯಕ ಘಟ್ಟದಲ್ಲಿದ್ದು ‘ಕಾಫಿ ಕಣಿವೆ’ ಕೊಡಗು ಜಿಲ್ಲೆಯಲ್ಲೂ ಸಕ್ರಿಯ ಪ್ರಕರಣಗಳು ಇಳಿಕೆ ಆಗುತ್ತಿವೆ. ಹೊಸದಾಗಿ ದೃಢ ಪಡುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದು ಜಿಲ್ಲೆಯ ಜನರಿಗೆ ತುಸು ನೆಮ್ಮದಿ ತಂದಿದೆ.

ಜನರು ಭಯಬಿಟ್ಟು ಓಡಾಟ ನಡೆಸಲು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ನಿಯಂತ್ರಣದಲ್ಲಿವೆ ಎಂದು ಜಿಲ್ಲಾಡಳಿತವೇ ಅಧಿಕೃತವಾಗಿ ತಿಳಿಸಿದೆ.

ಸೆಪ್ಟೆಂಬರ್‌ ಕೊನೆ ಹಾಗೂ ಅಕ್ಟೋಬರ್‌ ಮೊದಲ ವಾರದಲ್ಲಿ ಪ್ರತಿನಿತ್ಯ ದೃಢಪಡುತ್ತಿದ್ದ ಪ್ರಕರಣಗಳ ಸಂಖ್ಯೆ 150ರ ಗಡಿತಲುಪಿ, ಆತಂಕ ತಂದೊಡ್ಡಿತ್ತು. ಅದು ಅಕ್ಟೋಬರ್‌ 18ರ ವೇಳೆಗೆ 90ಕ್ಕೆ ಇಳಿಕೆ ಕಂಡಿತ್ತು. ಈಗ ಹೊಸದಾಗಿ ಪತ್ತೆಯಾಗುತ್ತಿರುವ ಪ್ರಕರಣಗಳು 20ರ ಆಸುಪಾಸಿನಲ್ಲಿದ್ದು, ನೆಮ್ಮದಿಗೆ ಕಾರಣವಾಗಿದೆ.

ಮಾರ್ಚ್‌ 19ರಂದು ಕೊಡಗಿನಲ್ಲಿ ಮೊದಲ ಪ್ರಕರಣ ದೃಢವಾಗಿತ್ತು. ದುಬೈನಿಂದ ಜಿಲ್ಲೆಗೆ ಮರಳಿದ್ದ ಕೊಂಡಂಗೇರಿಯ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು ಮೊದಲ ಬಾರಿಗೆ ಪರೀಕ್ಷೆಯಿಂದ ದೃಢವಾಗಿತ್ತು. ಆರಂಭಿಕ ದಿನಗಳಲ್ಲಿ ಒಂದೆರಡು ಪ್ರಕರಣ ಪತ್ತೆಯಾಗುವ ಮೂಲಕ ಹಸಿರು ವಲಯದಲ್ಲಿದ್ದ ಕೊಡಗು ಜಿಲ್ಲೆಯಲ್ಲಿ ಬಳಿಕ ಚಿತ್ರಣವೇ ಬದಲಾಯಿತು. ನಿತ್ಯ ದೃಢಪಡುತ್ತಿದ್ದ ಪ್ರಕರಣಗಳಲ್ಲಿ ಏರಿಕೆ ಕಾಣಿಸಿತು. ಎಲ್ಲರೂ ಭಯದ ವಾತಾವರಣವಿತ್ತು. ಜಿಲ್ಲಾಡಳಿತವು ಜಿಲ್ಲಾ ಆಸ್ಪತ್ರೆಯನ್ನೇ ಕೋವಿಡ್‌ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿತ್ತು. ವೆಂಟಿಲೇಟರ್‌ ಬೆಡ್‌ ಸಂಖ್ಯೆ ಏರಿಕೆ ಮಾಡಿತು. ಅಲ್ಲಲ್ಲಿ ಲಾಡ್ಜ್‌, ಹೋಂಸ್ಟೇ, ರೆಸಾರ್ಟ್‌ ಗುರುತಿಸಿ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಮಾಡಿತು.

ಅಕ್ಟೋಬರ್‌ 1ರ ವೇಳೆಗೆ 100 ಮಂದಿ ಗಂಟಲು ಮಾದರಿ ಪರೀಕ್ಷೆಗೆ ಒಳಪಡಿಸಿದರೆ ಅದರಲ್ಲಿ ಶೇ 12.1ರಷ್ಟು ಪ್ರಕರಣಗಳು ದೃಢಪಡುತ್ತಿದ್ದವು. ಅದೇ ಅ.25ರ ವೇಳೆಗೆ ಶೇ 6.1ಕ್ಕೆ ತಗ್ಗಿದೆ. ಅದೇ ಅ.28ರ ವೇಳೆಗೆ ಇನ್ನೂ ಇಳಿಕೆಯಾಗಿದೆ. ಮೃತಪ್ರಮಾಣವು ಇಳಿಕೆಯಾಗಿದೆ. ಸಕ್ರಿಯ ಪ್ರಕರಣಗಳು 263 ಮಾತ್ರ ಇವೆ ಎನ್ನುತ್ತಾರೆ ವೈದ್ಯರು.

ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ನಿಯಂತ್ರಣದಲ್ಲಿದ್ದು ಸಕ್ರಿಯ ಪ್ರಕರಣಗಳು ಇಳಿಕೆಯಾಗುತ್ತಿವೆ. ಗುಣಮುಖ ಪ್ರಮಾಣವು ಶೇ 93.5 ಆಗಿದೆ ಎಂದು ಜಿಲ್ಲಾಧಿಕಾರಿಅನೀಸ್‌ ಕಣ್ಮಣಿ ಜಾಯ್‌ ಹೇಳಿದರು.

ಗಂಟಲು, ಮೂಗಿನ ದ್ರವದ ಮಾದರಿಗಳ ಪರೀಕ್ಷೆಯ ಗುರಿಯನ್ನು ಹೆಚ್ಚಿಸಲಾಗಿದೆ. ಸಂಪರ್ಕಿತರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ತೀವ್ರ ಹಾಗೂ ಪರಿಣಾಮಕಾರಿಯಾಗಿ ಪತ್ತೆ ಮಾಡಲಾಗುತ್ತಿದೆ. ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಕಾಲಿಟ್ಟ ಚಳಿ,ಎಚ್ಚರಿಕೆ ಅಗತ್ಯ:ಕೊಡಗು ಜಿಲ್ಲೆಗೆ ಈಗ ಚಳಿ ಲಗ್ಗೆಯಿಟ್ಟಿದೆ. ಎರಡ್ಮೂರು ದಿನಗಳಿಂದ ‘ಥಂಡಿ’ ಗಾಳಿ ಬೀಸುತ್ತಿದ್ದು ಜನರಿಗೆ ಚಳಿಯ ಅನುಭವ ಉಂಟಾಗುತ್ತಿದೆ. ಜನರು ಹಗಲು ವೇಳೆ ಬಿಸಿಲಿಗೆ ಮೈಯೊಡ್ಡುತ್ತಿದ್ದಾರೆ. ಸಂಜೆಯಾದ ಮೇಲೆ ಜನರು ಬೆಂಕಿಯ ಮೊರೆ ಹೋಗುತ್ತಿದ್ದಾರೆ. ಮುಂದಿನ ಎರಡ್ಮೂರು ತಿಂಗಳು ಚಳಿ ವಾತಾವರಣ ಇರಲಿದ್ದು, ಈ ಸಂದರ್ಭದಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕು. ಕೊರೊನಾ ಸೋಂಕು ಚಳಿಯಲ್ಲಿ ಹೇಗೆ ವರ್ತಿಸಲಿದೆ ಎಂಬುದು ತಿಳಿದಿಲ್ಲ. ಆದಷ್ಟು ಓಡಾಟ ಕಡಿಮೆ ಮಾಡಬೇಕು ಎಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಯ ವೈದ್ಯರು ಸಲಹೆ ನೀಡುತ್ತಾರೆ.

ಕೋವಿಡ್‌ ಅಂಕಿಅಂಶಗಳು
* 4,824 – ಮಾರ್ಚ್‌ 19ರಿಂದ ಅ.28ರ ತನಕ ಪತ್ತೆಯಾದ ಪ್ರಕರಣಗಳ ಒಟ್ಟು ಸಂಖ್ಯೆ
* 4493 – ಗುಣಮುಖರಾದ ರೋಗಿಗಳ ಸಂಖ್ಯೆ
* 263 – ಸಕ್ರಿಯ ಪ್ರಕರಣಗಳು
* 68 – ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT