ಭಾನುವಾರ, ಏಪ್ರಿಲ್ 2, 2023
33 °C
ಕಣ್ಣಿಗೆ ಹಬ್ಬವಾದ ಫಲಪುಷ್ಪ ಪ್ರದರ್ಶನ, ದ್ರಾಕ್ಷಾರಸ ಮೇಳ; ಫೆ.6ವರೆಗೂ ಮೇಳ ಆಯೋಜನೆ

ಮಡಿಕೇರಿ: ರಾಜಾಸೀಟ್‌ನಲ್ಲಿ ಅರಳಿದ ಹೂಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕಂಗೊಳಿಸುವ ಪಡುವಣದ ಕೆಂಪು ಹಿಂದೆ, ಕಣ್ಮನ ಸೆಳೆಯುವ ಹೂವಿನ ಕಂಪು ಮುಂದೆ, ಎತ್ತ ನೋಡಿದರತ್ತ ಹೂನಗೆಗಳ ತೋರಣವೇ ಇಲ್ಲಿನ ರಾಜಾಸೀಟ್‌ ಉದ್ಯಾನದಲ್ಲಿ ಕಾಣ ಸಿಗುತ್ತಿದೆ. ಇಲ್ಲಿಂದ ಕೂಗಳತೆ ದೂರದಲ್ಲಿನ ಗಾಂಧಿ ಮೈದಾನದಲ್ಲಿ ವಿವಿಧ ಬಗೆಯ ವೈನ್‌ಗಳು, ತರಹೇವಾರಿ ಮಳಿಗೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಈ ಎಲ್ಲ ದೃಶ್ಯಗಳು ಶುಕ್ರವಾರ ಉದ್ಘಾಟನೆಗೊಂಡ ಫಲಪುಷ್ಪ ಪ್ರದರ್ಶನ ಹಾಗೂ ವೈನ್‌ ಮೇಳದಲ್ಲಿ ಕಂಡು ಬಂತು. ಫೆ. 6ರವರೆಗೂ ಈ ಮೇಳ ನಡೆಯಲಿದೆ.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ದ್ರಾಕ್ಷರಸ ಮಂಡಳಿಯಿಂದ ಆಯೋಜನೆಗೊಂಡಿರುವ ಈ ಮೇಳವನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಉದ್ಘಾಟಿಸಿದರು.

ಇಲ್ಲಿರುವ 20 ಜಾತಿಯ 12 ಸಾವಿರ ಹೂವುಗಳು, 18 ಅಡಿ ಎತ್ತರ, 13 ಅಡಿ ಉದ್ದ, 35 ಅಡಿ ಅಗಲದಲ್ಲಿ ನಿರ್ಮಿಸಿರುವ ಹೂವಿನ ನಾಲ್ಕುನಾಡು ಅರಮನೆಯ ಕಲಾಕೃತಿ, ದಪ್ಪಮೆಣಸಿನಕಾಯಿ ಹಾಗೂ ವೈನ್‌ ಗ್ಲಾಸಿನ ಸೆಲ್ಫೀ ಜೋನ್‌ಗಳು, ಹೂವಿನ ಸಿಂಡ್ರೆಲ್‌ ಕಲಾಕೃತಿ, ಹೆಸರುಕಾಳು ಮತ್ತು ಬಿಳಿ ಎಳ್ಳು ಮೂಲಕ ಕ್ರೀಯಾಶೀಲವಾಗಿ ನಿರ್ಮಾಣ ಮಾಡಿರುವ ಸೈನಿಕ, ಮಿಕ್ಕಿಮೌಸ್, ಚಿಟ್ಟೆಗಳ ಹೂವಿನ ಕಲಾಕೃತಿಗಳು ಗಮನ ಸೆಳೆಯುತ್ತಿವೆ.

ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆ ಹಾಗೂ ಅಂಥೋರಿಯಂ ಹೂವಿನ ಪ್ರದರ್ಶನಗಳು ವಿಸ್ಮಿತಗೊಳಿಸುತ್ತಿವೆ.

ಮತದಾನದ ಕುರಿತು ಅರಿವು ಮೂಡಿಸಲು ಎಲೆಕ್ಟ್ರಾನಿಕ್ ಮತಯಂತ್ರದ ಮಾದರಿಯನ್ನು ಹೂವಿನಿಂದ ರೂಪಿಸಿರುವುದು ನೋಡುಗರ ಮನಸ್ಸಿನಲ್ಲಿ ಮತದಾನ ಮಾಡಬೇಕು ಎನ್ನುವ ಭಾವ ಸುಳಿಯುವಂತೆ ಮಾಡುತ್ತದೆ.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕಾಫಿ ಮಂಡಳಿ ನಿರ್ದೇಶಕರಾದ ತಳೂರು ಕಿಶೋರ್ ಕುಮಾರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಸಿ.ಎಂ.ಪ್ರಮೋದ್, ಕರ್ನಾಟಕ ದ್ರಾಕ್ಷರಸ ಮಂಡಳಿ ಅಧ್ಯಕ್ಷ ನಾರಾಯಣ ರೆಡ್ಡಿ, ನಿರ್ದೇಶಕ ಅಭಿಲಾಷ್, ವ್ಯವಸ್ಥಾಪಕ ನಿರ್ದೇಶಕ ಸೋಮು, ವ್ಯವಸ್ಥಾಪಕ  ಸರ್ವೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು