ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಮರೆಯಾಗುತ್ತಿರುವ ಕಾಡುಹಣ್ಣುಗಳು

Published 17 ಜುಲೈ 2023, 6:01 IST
Last Updated 17 ಜುಲೈ 2023, 6:01 IST
ಅಕ್ಷರ ಗಾತ್ರ

ಸಿ.ಎಸ್.ಸುರೇಶ್

ನಾಪೋಕ್ಲು: ಕೊಡಗಿನಲ್ಲಿ ಮುಂಗಾರು ಮಳೆ ನಿಧಾನವಾಗಿ ಲಯಕಂಡುಕೊಳ್ಳುತ್ತಿದ್ದಂತೆ ಕಾಡುಗಳಲ್ಲಿ ಕಾಡುಹಣ್ಣುಗಳು ಲಭಿಸುತ್ತವೆ. ಒಂದೇ, ಎರಡೇ..ಎಲ್ಲವೂ ಸ್ವಾದಭರಿತ ಹಣ್ಣುಗಳು. ಕೆಲವು ಹುಳಿಯಾದರೂ ಔಷಧೀಯ ಗುಣಗಳನ್ನು ಹೊಂದಿವೆ. ಕಾಡುಗಳೆಲ್ಲಾ ತೋಟಗಳಾಗಿ ಪರಿವರ್ತನೆ ಆದಂತೆ ಕಾಡುಹಣ್ಣುಗಳೂ ನಶಿಸತೊಡಗಿವೆ. ರಸ್ತೆ ಬದಿಗಳಲ್ಲಿ ಮಾರಾಟವಾಗುವ ರಾಂಬುಟನ್, ಲಿಚಿ ಅಂತಹ ಹಣ್ಣುಗಳ ನಡುವೆ ಕಾಡುಹಣ್ಣುಗಳು ಕಣ್ಮರೆಯಾಗುತ್ತಿವೆ. ಮುಂಗಾರಿನ ಚಿತ್ರಗಳಲ್ಲಿ ನೆನಪಾಗಿ ಉಳಿದಿವೆ. ಅಪರೂಪಕ್ಕೆ ಎಂಬಂತೆ ಅಲ್ಲಲ್ಲಿ ಕೆಲವೇ ಕೆಲವು ಕಾಡುಹಣ್ಣುಗಳಷ್ಟೇ ಈಗ ಸಿಗುತ್ತಿವೆ.

ಕೊಡಗಿನ ಕಾಡು ಹಣ್ಣುಗಳ ಪೈಕಿ ಅತ್ಯಂತ ಸ್ವಾದಭರಿತ ಹಣ್ಣು ಕರ್ಮಂಜಿ. ಜಿಲ್ಲೆಯ ಕಾಡುಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಈ ಹಣ್ಣು ಈಗ ಕಾಣದಾಗಿದೆ. ಅಪರೂಪಕ್ಕೆ ಎಂಬಂತೆ ಕೆಲವು ಕಾಡುಗಳಲ್ಲಿ ಈ ಹಣ್ಣಿನ ಬಳ್ಳಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಮರಗಳನ್ನು ಆಧರಿಸಿ ಎರಡು ಮೀಟರ್‌ಗಳಷ್ಟು ಎತ್ತರ ಬೆಳೆಯಬಲ್ಲದು. ಇದರ ಸಸ್ಯಶಾಸ್ತ್ರೀಯ ಹೆಸರು ‘ಕಾರಿಸ್ಸಾ ಕರಂಡಸ್’. ನಿತ್ಯ ಹಸಿರಾಗಿರುವ ಈ ಸಸ್ಯ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಹೂಗಳನ್ನು ಬಿಡುತ್ತದೆ. ಜುಲೈ- ಆಗಸ್ಟ್ ತಿಂಗಳು ಹಣ್ಣು ದೊರೆಯುವ ಕಾಲ.

ಗೋಲಿಯಾಕಾರದ ಎಳೆ ಕಾಯಿ ಹಸಿರು ಬಣ್ಣ ಹೊಂದಿದ್ದರೆ ಹಣ್ಣು ಆದಾಗ ಕಪ್ಪು ನೇರಳೆ ಬಣ್ಣಕ್ಕೆ ತಿರುಗುತ್ತದೆ. ಅತಿ ಕಡಿಮೆ ಬೀಜ ಹೊಂದಿರುವುದು ಇದರ ವಿಶೇಷತೆ. ಎಲೆ ಕಾಯಿ ಚಿಗುರು ಚಿವುಟಿದಾಗ ಬಿಳಿ ಬಣ್ಣದ ಮೇಣ ಸ್ರವಿಸುತ್ತದೆ. ಆರೋಗ್ಯಕ್ಕೆ ಉತ್ತಮವಾದ ಕಬ್ಬಿಣ ಅಂಶ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಕಾಯಿಯನ್ನು ಉಪ್ಪಿನಕಾಯಿಗೆ ಬಳಸುವರು. ಅಪರೂಪದ ಈ ಕಾಡು ಹಣ್ಣಿನ ರಕ್ಷಣೆಗೆ ಜಿಲ್ಲೆಯ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಮರೆಯಾದ ಕಾಡು ಹಣ್ಣುಗಳ ಪೈಕಿ ಮಡಿಕೆ ಹಣ್ಣು ಸಹ ಒಂದು. ಮಳೆಗಾಲದಲ್ಲಿ ಕಾಡಿನ ವೃಕ್ಷಗಳಲ್ಲಿ ಹಬ್ಬಿ ಬೆಳೆಯುತ್ತಿದ್ದ ಹಣ್ಣು ಈಗ ಕಾಣ ಸಿಗುವುದೇ ಅಪರೂಪ. ಇನ್ನು ಮಜ್ಜಿಗೆ ಹಣ್ಣಿನ ಸೀಸನ್ ಬಂತೆಂದರೆ ಮರದ ತುಂಬಾ ಹಣ್ಣುಗಳು. ಈ ಹಣ್ಣು ತಿನ್ನುವಾಗ ಸ್ವಲ್ಪ ಹುಳಿ ಮಿಶ್ರಿತ ಸಿಹಿಯಾಗಿ ಮಜ್ಜಿಗೆ ರುಚಿಯನ್ನು ಹೋಲುವುದರಿಂದ ಇದು ಆಡುಭಾಷೆಯಲ್ಲಿ ಮಜ್ಜಿಗೆ ಹಣ್ಣು ಎಂದೇ ಪ್ರಚಲಿತವಾಗಿದೆ. ಮಜ್ಜಿಗೆ ಹಣ್ಣನ್ನು ಸವಿಯಬೇಕೆಂದರೆ ಕಾಡು ಮೇಡುಗಳಲ್ಲಿ ಸುತ್ತಾಡಬೇಕು. ಮಳೆಗಾಲದಲ್ಲಿ ಬಿಳಿಯಾಗಿ ಮಾಗುತ್ತಲೇ ಮಜ್ಜಿಗೆ ಹಣ್ಣು ಸವಿಯಲು ಸಿದ್ಧ. ಮಳೆ ಬಿರುಸುಗೊಂಡಂತೆ ಹಣ್ಣುಗಳೆಲ್ಲ ಉದುರಿ ಹೋಗುತ್ತವೆ.

ಗುಪ್ಪಟೆ ಹಣ್ಣು, ಚೂರಿ ಹಣ್ಣು, ಬೀಂಪುಳಿ..ಹೀಗೆ ಸ್ಥಳೀಯ ಹೆಸರಿನಿಂದ ಕರೆಯಲಾಗುವ ಅವೆಷ್ಟೋ ಹಣ್ಣುಗಳನ್ನು ಹಿರಿಯರು ಬಲ್ಲರು. ಇಲ್ಲಿನ ಹವಾಗುಣಕ್ಕೆ ಸರಿಯಾಗಿ ಹಣ್ಣು ಬಿಡುವ ಇಂಥ ಕಾಡಿನ ಹಣ್ಣುಗಳನ್ನು ಎಲ್ಲಾ ಔಷಧಿಯ ಗುಣ ವಿಶೇಷತೆಗಳಿವೆ. ಹಿರಿಯರು ಅವುಗಳನ್ನು ಪೋಷಿಸುತ್ತಿದ್ದರು. ಈಗ ಬಹುತೇಕ ಕಾಡು ಹಣ್ಣುಗಳು ಗ್ರಾಮೀಣ ಜನರ ಅಸಡ್ಡೆಗೆ ಒಳಗಾಗಿ ಕಣ್ಮರೆಯಾಗುತ್ತಿವೆ. ಆಸಕ್ತರಿಗೆ ಸಿಗುವುದು ಅಪರೂಪವಾಗುತ್ತಿದೆ.

ಮಡಿಕೆ ಹಣ್ಣು
ಮಡಿಕೆ ಹಣ್ಣು
ಮಜ್ಜಿಗೆ ಹಣ್ಣು
ಮಜ್ಜಿಗೆ ಹಣ್ಣು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT