ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆ ಮೀರಿಸುವಂತಿದೆ ಗೋಣಿಕೊಪ್ಪಲು ಬಳಿಯ ಬೆಕ್ಕೆಸೊಡ್ಲೂರು ಸರ್ಕಾರಿ ಶಾಲೆ

ದಾನಿಗಳ ನೆರವಿನಿಂದ ಕಂಗೊಳಿಸುತ್ತಿರುವ ಪಾಠಶಾಲೆ
Last Updated 1 ಏಪ್ರಿಲ್ 2023, 5:46 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕಂಪ್ಯೂಟರ್, ಇಂಟರ್‌ನೆಟ್, ಪ್ರೊಜೆಕ್ಟರ್, ಸ್ಮಾರ್ಟ್‌ಕ್ಲಾಸ್, ಜನರೇಟರ್, ಇನ್‌ವರ್ಟರ್, ಅಕ್ವಾಗಾರ್ಡ್, ಅತ್ಯಾಧುನಿಕ ಪೀಠೋಪಕರಣ, ಉತ್ತಮ ಗ್ರಂಥಾಲಯ... ಇವೆಲ್ಲಾ ಯಾವುದೇ ಖಾಸಗಿ ಶಾಲೆಯಲ್ಲಿರುವ ಸೌಲಭ್ಯಗಳಲ್ಲ. ಬೆಕ್ಕೊಸೊಡ್ಲೂರು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಹೊಂದಿರುವ ಸೌಕರ್ಯಗಳು.

ಈ ಎಲ್ಲ ಸೌಲಭ್ಯಗಳನ್ನು ದಾನಿಗಳು ನೀಡಿದ್ದಾರೆ. ಬೆಕ್ಕೆಸೊಡ್ಲೂರಿನ ಸ್ವಾಸ್ಥ್ಯ ಪೌಂಡೇಷನ್‌ನವರು ₹ 1.20 ಲಕ್ಷ ಮೌಲ್ಯದ 2 ಎಚ್.ಪಿ ಜನರೇಟರ್, ಸ್ಮಾರ್ಟ್ ಕ್ಲಾಸ್‌ಗೆ ಪ್ರೊಜೆಕ್ಟರ್ ಮತ್ತು ಸ್ಕ್ರೀನ್, ಕಂಪ್ಯೂಟರ್‌ಗೆ ಇಂಟರ್‌ನೆಟ್ ಸೌಲಭ್ಯ, ಶಿಕ್ಷಕರಿಗೆ ಅಗತ್ಯವಿದ್ದ ಟೇಬಲ್ ಮತ್ತು ಕುರ್ಚಿ ನೀಡಿದ್ದಾರೆ.

ಈ ಎಲ್ಲ ಸೌಲಭ್ಯಗಳನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿರುವ ಶಿಕ್ಷಕರು ಮಕ್ಕಳಿಗೆ ಅಕ್ಕರೆಯಿಂದ ಪಾಠ ಮಾಡುತ್ತಿದ್ದಾರೆ. ಹೀಗಾಗಿ, ಶೇಕಡ ನೂರರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ. ಈ ಮೂಲಕ ಪೊನ್ನಂಪೇಟೆ ಕ್ಲಸ್ಟರ್‌ನಲ್ಲಿ ಅತ್ಯುತ್ತಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪೊನ್ನಂಪೇಟೆಯ ಚೆಪ್ಪುಡೀರ ಮೋಹನ್ ಧ್ವನಿವರ್ಧಕ, ಗೋಣಿಕೊಪ್ಪಲಿನ ಲಲಿತಾ ಸ್ಟೇಷನರಿ ಅವರು ₹ 23 ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಅಕ್ವಾಗಾರ್ಡ್, ಗೋಣಿಕೊಪ್ಪಲು ಲಯನ್ಸ್ ಕ್ಲಬ್‌ನವರು 50 ಕುರ್ಚಿ ಮತ್ತು ಮೇಜು ನೀಡಿದ್ದಾರೆ. ಸ್ವಾಸ್ಥ್ಯ ಫೌಂಡೇಷನ್‌ಗೆ ಆಗಾಗ್ಗೆ ಬರುವ ರಷ್ಯದ ದಾನಿಯೊಬ್ಬರು ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿಕೊಟ್ಟಿದ್ದರೆ, ಕೆನಡಾದವರಿಂದ ಲೇಖನಿ ಸಾಮಗ್ರಿ, ಸ್ವಿಡ್ಜರ್‌ಲೆಂಡ್‌ನ ಅಮೃತಾ ಅವರು 3 ಕಂಪ್ಯೂಟರ್, ಬೆಂಗಳೂರಿನ ರಾಮ್‌ಪ್ರಸಾದ್ ಅವರು ಇನ್‌ವರ್ಟರ್‌ಗಳನ್ನು ನೀಡಿದ್ದಾರೆ.

1952ರಲ್ಲಿ ಆರಂಭವಾದ ಶಾಲೆಯಲ್ಲಿ 13 ಕೊಠಡಿಗಳಿವೆ. ಕಟ್ಟಡ ನಿರ್ಮಾಣಗೊಂಡು 70 ವರ್ಷಗಳು ಕಳೆದರೂ ಕೂಡ ಈಗಲೂ ಕಟ್ಟಡ ಅತ್ಯಂತ ಸುಸ್ಥಿರವಾಗಿದೆ. ಒಟ್ಟು 5 ಎಕರೆ ಜಾಗದಲ್ಲಿ 2 ಎಕರೆಯಷ್ಟು ವಿಶಾಲವಾದ ಆಟದ ಮೈದಾನ, ಉತ್ತಮ ಶೌಚಾಲಯವಿದೆ. 102 ವಿದ್ಯಾರ್ಥಿಗಳಿಗೆ 4 ಜನ ಶಿಕ್ಷಕರಿದ್ದಾರೆ. 2 ಹುದ್ದೆಗಳು ಖಾಲಿ ಉಳಿದಿವೆ.

ಪರಿಶಿಷ್ಟಜಾತಿ ಮತ್ತು ಪಂಗಡದ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ಶಿಕ್ಷಕರಾದ ಡೈನಿ, ಪಿ.ಕೆ.ಶ್ರೀಜಾ, ಶ್ರೀಕೃಷ್ಣ, ಬಿ.ಎಸ್.ಅಶ್ವಿನಿ ಮಕ್ಕಳಿಗೆ ಪಾಠ ಪ್ರವಚನದ ಜತೆಗೆ ಗ್ರಂಥಾಲಯ ಬಳಕೆ, ಕಂಪ್ಯೂಟರ್ ಶಿಕ್ಷಣ, ಕ್ರೀಡಾ ಚಟುವಟಿಕೆ, ಚಿತ್ರಕಲೆ ಮತ್ತಿತರ ಕರಕುಶಲ ಕಲೆಗಳನ್ನು ಕಲಿಸುತ್ತಿದ್ದಾರೆ. ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಜತೆಗೆ ಪರಿಸರ ಜಾಗೃತಿ ದಿನಾಚರಣೆ, ವನಮಹೋತ್ಸವ, ಆರೋಗ್ಯದ ಅರಿವು, ಪೋಷಕರ ದಿನಾಚರಣೆ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದಾರೆ.

ಶಾಲೆಯ ಮುಂಭಾಗದಲ್ಲಿ ಸುಂದರವಾದ ಉದ್ಯಾನವಿದೆ. ಕೋತೂರಿನ ದಾನಿ ಕೊಳ್ಳಿಮಾಡ ವಿವೇಕ್ ಎಂಬುವವರು ಶಾಲೆಯ ಹೆಬ್ಬಾಗಿಲಿಗೆ ಸುಂದರವಾದ ನಾಮಫಲಕವನ್ನು ಹಾಕಿಸಿಕೊಟ್ಟಿದ್ದಾರೆ. ಶಾಲೆಯ ಕಟ್ಟಡ ಮತ್ತು ಕಾಂಪೌಂಡ್ ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತದೆ. ಪೊನ್ನಂಪೇಟೆ ಕಾನೂರು ನಡುವಿನ ಹೆದ್ದಾರಿಯಲ್ಲಿರುವ ಈ ಶಾಲೆಯನ್ನು ನೋಡುವುದೇ ಆನಂದ. ಈ ಮಾರ್ಗದಲ್ಲಿ ಪ್ರಯಾಣಿಸುವವರು ಒಮ್ಮೆ ಶಾಲೆಯ ಒಳಗೆ ನುಸುಳಿ ಬರೋಣ ಎಂಬ ಮನಸ್ಸಾಗುವುದು ನಿಶ್ಚಿತ.

‘ಸ್ಥಳೀಯ ಗ್ರಾಮ ಪಂಚಾಯಿತಿ ₹ 3 ಲಕ್ಷ ವೆಚ್ಚದಲ್ಲಿ ಉದ್ಯಾನ, ₹ 2 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಿಕೊಡಲಿದೆ. ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸುವ ಶಾಲಾ ವಾರ್ಷಿಕೋತ್ಸವಕ್ಕೆ ಸಾವಿರಾರು ರೂಪಾಯಿ ವೆಚ್ಚದಲ್ಲಿ ಹೆಸರು ಹೇಳಲು ಇಚ್ಛಿಸದ ಸ್ಥಳೀಯ ದಾನಿಯೊಬ್ಬರು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಪುಷ್ಕಳ ಭೋಜನ ನೀಡುತ್ತಾ ಬರುತ್ತಿದ್ದಾರೆ’ ಎಂದು ಶಿಕ್ಷಕ ಶ್ರೀಕೃಷ್ಣ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT