ಭಾನುವಾರ, ಜನವರಿ 26, 2020
28 °C

ಪ್ರವಾಸಿಗರ ಲಗ್ಗೆ: ಕೊಡಗಿನ ಹೋಮ್‌ ಸ್ಟೇ, ರೆಸಾರ್ಟ್‌ನಲ್ಲಿ ಭರ್ಜರಿ ‘ಪಾರ್ಟಿ’

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಹೊಸ ವರ್ಷಾಚರಣೆಗೆ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದುಬಂದಿತ್ತು. ಮಂಗಳವಾರ ಮಧ್ಯರಾತ್ರಿ 12 ಗಂಟೆ ಕಳೆಯುತ್ತಿದ್ದಂತೆಯೇ ಜಿಲ್ಲೆಯ ಜನರು ಹಾಗೂ ದೂರದ ಊರುಗಳಿಂದ ಬಂದಿದ್ದ ಪ್ರವಾಸಿಗರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು. ನೃತ್ಯ, ಕೇಕೆ ಹಾಕುತ್ತಲೇ ಹೊಸ ವರ್ಷವನ್ನು ಬರಮಾಡಿಕೊಂಡರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

‘ಕೊಡಗಿನಲ್ಲೇ ಹೊಸ ವರ್ಷವನ್ನು ಬರ ಮಾಡಿಕೊಳ್ಳಬೇಕು ಎಂಬುದು ಕನಸಾಗಿತ್ತು. ಅದಕ್ಕೇ ಮಡಿಕೇರಿಗೆ ಬಂದಿದ್ದೇವೆ’ ಎಂದು ಹಲವು ಪ್ರವಾಸಿಗರು ಹೇಳಿದರು.

ಪ್ರವಾಸಿ ತಾಣಗಳೂ ಫುಲ್‌: ಕೊಡಗಿನಲ್ಲಿ ಪ್ರವಾಸೋದ್ಯಮ ಚೇತರಿಕೆಯತ್ತ ಹೆಜ್ಜೆ ಇರಿಸಿದೆ. ಅದಕ್ಕೆ ಸಾಕ್ಷಿ ಡಿಸೆಂಬರ್‌ ತಿಂಗಳಾದ್ಯಂತ ಕಂಡುಬಂದ ಪ್ರವಾಸಿಗರ ದಟ್ಟಣೆ. ಇನ್ನು ಕ್ರಿಸ್‌ಮಸ್ ನಂತರ ಕೊಡಗಿನಲ್ಲಿ ಪ್ರವಾಸಿಗರ ಕಲರವ ಕೇಳಿಬರುತ್ತಿದೆ. ಇನ್ನು ಡಿಸೆಂಬರ್‌ 30 ಹಾಗೂ 31ರಂದು ಜಿಲ್ಲೆಯ ಪ್ರವಾಸಿ ತಾಣಗಳು ಗಿಜಿಗುಡುತ್ತಿದ್ದವು.

ಕುಶಾಲನಗರ ಸಮೀಪದ ಗೋಲ್ಡನ್‌ ಟೆಂಪಲ್‌, ಕಾವೇರಿ ನಿಸರ್ಗಧಾಮ, ದುಬಾರೆ, ಇರ್ಫು ಜಲಪಾತ, ಅಬ್ಬಿ, ರಾಜಾಸೀಟ್‌, ಟೀ ಎಸ್ಟೇಟ್‌, ತಲಕಾವೇರಿ, ಭಾಗಮಂಡಲ, ಚೇಲಾವರ... ಹೀಗೆ ಎಲ್ಲೆಡೆ ಪ್ರವಾಸಿಗರ ದಂಡೆ ನೆರೆದಿತ್ತು.

ಜಿಲ್ಲೆಯ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರು ಆಸ್ವಾದಿಸಿದರು. ಮಂಗಳವಾರ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಅದರ ನಡುವೆ ಪ್ರಕೃತಿಯ ಸೊಬಗು, ಹಕ್ಕಿಗಳ ಚಿಲಿಪಿಲಿಗೆ ಪ್ರವಾಸಿಗರು ಕಿವಿಯಾದರು.

ಹೋಮ್‌ ಸ್ಟೇ, ರೆಸಾರ್ಟ್ ಭರ್ತಿ‌: ಒಮ್ಮೆಲೇ ಪ್ರವಾಸಿಗರು ಮಡಿಕೇರಿ ಬಂದ ಪರಿಣಾಮ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು. ಇನ್ನು ಹೋಮ್‌ ಸ್ಟೇ, ರೆಸಾರ್ಟ್‌, ಹೋಟೆಲ್‌ ಹಾಗೂ ಲಾಡ್ಜ್‌ಗಳು ತುಂಬಿದ್ದವು. ಹೊಸ ವರ್ಷದ ಸಂಭ್ರಮದಲ್ಲಿ ಅವುಗಳ ಮಾಲೀಕರೂ ಜೇಬಿ ತುಂಬಿಸಿಕೊಂಡರು. ಸಮಯ ಮೀರಿ ಬಂದವರಿಗೆ ತಮ್ಮ ಆಯ್ಕೆಯ ರೂಂಗಳು ಸಿಗಲಿಲ್ಲ.

ಮದ್ಯದಂಗಡಿಗೆ ಭರ್ಜರಿ ವ್ಯಾಪಾರ: ಮಂಜಿನ ನಗರಿ ಮಡಿಕೇರಿಯೂ ಸೇರಿದಂತೆ ಜಿಲ್ಲೆಯಾದ್ಯಂತ ವೈನ್ಸ್‌ ಶಾಪ್‌ಗಳಲ್ಲಿ ಮಂಗಳವಾರ ಸಂಜೆ ದೊಡ್ಡ ಸರದಿ ಸಾಲು ಕಂಡುಬಂತು. ಕೆಲವರು ಬಾಕ್ಸ್‌ಗಟ್ಟಲೆ ಮದ್ಯ ಖರೀದಿಸಿ ಕೊಂಡೊಯ್ದು ಪಾರ್ಟಿ ನಡೆಸಿದರು. ಕೆಲವರು ಮದ್ಯದ ಕಿಕ್‌ನೊಂದಿಗೆ ಹೊಸ ವರ್ಷ ಸ್ವಾಗತಿಸಿದರೆ, ಮತ್ತೆ ಕೆಲವರು ಕೇಕ್‌ ಕತ್ತರಿಸಿ ಶುಭಾಶಯ ವಿನಿಮಯದೊಂದಿಗೆ ನೂತನ ವರ್ಷ ಬರಮಾಡಿಕೊಂಡರು.

ಮಂಗಳವಾರ ವೈನ್‌ಶಾಪ್‌ಗಳಲ್ಲಿ ಜನಜಂಗುಳಿ ಇರುತ್ತದೆ ಎಂಬ ಕಾರಣಕ್ಕೆ, ಕೆಲವರು ಭಾನುವಾರ– ಸೋಮವಾರವೇ ಸಾಕಷ್ಟು ಮದ್ಯ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದರು. ಪಾರ್ಟಿಯ ನಡುವೆ 2019ಕ್ಕೆ ವಿದಾಯ ಹೇಳಿ, 2020 ಅನ್ನು ಸ್ವಾಗತಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು