ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ತೋಟಗಳನ್ನು ಉಳಿಸಲು ಮಾನವ ಸರಪಳಿ

ನಿರಂತರವಾಗಿ ಹೋರಾಟ ನಡೆಸಲು ಸಿಎನ್‌ಸಿ ನಿರ್ಧಾರ
Published 4 ಜೂನ್ 2024, 2:25 IST
Last Updated 4 ಜೂನ್ 2024, 2:25 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಕಾಫಿತೋಟಗಳ ಭೂಪರಿವರ್ತನೆ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸೋಮವಾರ ಬಿರುನಾಣಿ ಗ್ರಾಮದಲ್ಲಿ ಮಾನವ ಸರಪಳಿ ರಚಿಸಿತು.

ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ‘ಸಿದ್ದಾಪುರ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾವಿರಾರು ಎಕರೆ ಕಾಫಿ ತೋಟಗಳು ಭೂಪರಿವರ್ತನೆಯಾಗುತ್ತಿವೆ. ಒಂದು ವೇಳೆ ಈ ಭೂಪರಿವರ್ತನೆಗಳನ್ನು ತಡೆಯದೇ ಹೋದರೆ ಕೊಡವರು ಅಲೆಮಾರಿಗಳಾಗಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಿದ್ದಾಪುರ, ತಡಿಯಂಡಮೋಲ್‍, ಗಾಳಿಬೀಡು ಭಾಗದಲ್ಲಿ ಸಾವಿರಾರು ಎಕರೆ ಕಾಫಿ ತೋಟ ನಿವೇಶನವಾಗಿ ಅಲ್ಲಿ ಮನೆಗಳನ್ನು ಕಟ್ಟಿದರೆ ಅಲ್ಲಿ ಲಕ್ಷಾಂತರ ಮಂದಿ ನೆಲೆಸುತ್ತಾರೆ. ಆಗ ಕೊಡಗಿನಲ್ಲಿ ಜನಸಂಖ್ಯಾ ಸ್ಫೋಟ ಸಂಭವಿಸಿ, ಕೊಡವರ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

ಇಲ್ಲಿನ ಮೂಲನಿವಾಸಿಗಳು ವಾಸದ ಮನೆ ನಿರ್ಮಿಸಲು ಅನುಮತಿ ಕೋರಿದರೆ ಹಸಿರು ವಲಯ ಪ್ರದೇಶವೆಂದು ಅಡ್ಡಿಪಡಿಸುವ ಆಡಳಿತ ವ್ಯವಸ್ಥೆ ಭೂಮಾಫಿಯಾಗಳು ಸಾವಿರಾರು ಎಕರೆ ಹಸಿರ ಭೂಮಿಯನ್ನು ಪರಿವರ್ತನೆ ಮಾಡುತ್ತಿದ್ದರೆ ಮೌನಕ್ಕೆ ಶರಣಾಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಬೆಳೆಗಾರರು ಕೇವಲ 15 ದಿನದ ಮಟ್ಟಿಗೆ ನದಿಯಿಂದ ತೋಟಗಳಿಗೆ ನೀರು ಬಳಸಿದರೆ ಇಲ್ಲದ ಕಾನೂನುಗಳನ್ನು ಹೇರಿ ನೀರು ಬಳಸದಂತೆ ಮಾಡುವ ಆಡಳಿತಶಾಹಿ ಇಂತಹ ಭೂಪರಿವರ್ತನೆಗಳನ್ನು ತಡೆಯುತ್ತಿಲ್ಲ ಎಂದು ಕಿಡಿಕಾರಿದರು.‌‌

ಒಂದು ವೇಳೆ ಕಾಫಿತೋಟಗಳು ಭೂಪರಿವರ್ತನೆಯಾಗಿ ಮನೆಗಳು ನಿರ್ಮಾಣವಾದರೆ ಇಲ್ಲಿ ಹರಿಯುವ ಜಲಮೂಲಗಳು ನಾಶವಾಗುತ್ತವೆ. ನದಿಗೆ ನೀರು ಸೇರುವಿಕೆ ಪ್ರಮಾಣ ಕುಸಿಯುತ್ತದೆ. ಪರಿಸರ ಸಮತೋಲನ ತಪ್ಪುತ್ತದೆ. ಕೂಡಲೇ ಇಂತಹ ಪ್ರಕ್ರಿಯೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ‘ಕೊಡವ ಲ್ಯಾಂಡ್’ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆಗಳು ನಿಲ್ಲುವವರೆಗೆ ಸಿಎನ್‍ಸಿ ವತಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಜೂನ್ 10ರಂದು ಬಾಳೆಲೆಯಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಮಾನವ ಸರಪಳಿಯಲ್ಲಿ ಬೊಟ್ಟಂಗಡ ಸವಿತಾ ಗಿರೀಶ್, ಕಳಕಂಡ ಗಂಗಮ್ಮ, ಬೊಟ್ಟಂಗಡ ಗಿರೀಶ್, ಬುಟ್ಟಿಯಂಡ ತಂಬಿ ನಾಣಯ್ಯ, ಕಾಳಿಮಾಡ ಸೋಮಯ್ಯ, ಚಟ್ಟಂಗಡ ಸೋಮಣ್ಣ, ಕುಪ್ಪನಮಾಡ ಪ್ರೀತಂ, ಅಣ್ಣಳಮಾಡ ಸುರೇಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರೀನ್, ಬೊಟ್ಟಂಗಡ ನಟರಾಜ್, ಮೂಕಲೇಮಾಡ ಈರಪ್ಪ, ಕಾಳಿಮಾಡ ಭೀಮಯ್ಯ, ಅಣ್ಣಳಮಾಡ ಗಿರೀಶ್, ಕೀಕನಮಾಡ ಮನು, ಅಣ್ಣಳಮಾಡ ಅಪ್ಪಚ್ಚು, ಕಾಳಿಮಾಡ ಹರೀಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT