ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಕಾಡಾನೆ ವಿರುದ್ಧ ಮಹತ್ವದ ಕಾರ್ಯಾಚರಣೆ ಇಂದು

1 ಆನೆ ಸೆರೆಗೆ, 2 ಆನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲು ಸಿದ್ಧತೆ
Published 14 ಮೇ 2024, 5:42 IST
Last Updated 14 ಮೇ 2024, 5:42 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹಲವು ದಿನಗಳ ನಂತರ ಕಾಡಾನೆಗಳ ವಿರುದ್ಧ ಮಹತ್ವದ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಮೇ 14ರಿಂದ ಕಾರ್ಯಾಚರಣೆ ಆರಂಭವಾಗಲಿದ್ದು, 1 ಕಾಡಾನೆ ಸೆರೆ ಹಿಡಿಯಲು ಹಾಗೂ 2 ಕಾಡಾನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲು ಸಿದ್ಧತೆಗಳು ನಡೆದಿವೆ.

ಸಿದ್ದಾ‍ಪುರ ಭಾಗದಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. ಒಂಟಿ ಸಲಗವೊಂದು ಪದೇ ಪದೇ ದಾಳಿ ನಡೆಸುತ್ತಿದೆ. ಇನ್ನೆರಡು ಆನೆ ಹಿಂಡುಗಳು ರೈತರನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಹಾಗಾಗಿ, ಒಂಟಿ ಸಲಗವನ್ನು ಸೆರೆ ಹಿಡಿಯಲು ಹಾಗೂ 2 ಕಾಡಾನೆ ಹಿಂಡಿನ ಮುಖ್ಯ ಆನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲಾಗುತ್ತದೆ.

ಈಗಾಗಲೇ ಕೊಡಗು ಜಿಲ್ಲೆಯಲ್ಲಿ 12 ಆನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲಾಗಿದ್ದು, ಯಶಸ್ವಿಯಾಗಿದೆ. ಇದರಿಂದ ರೈತರ ಜಮೀನುಗಳು, ಜನವಸತಿ ಪ್ರದೇಶಗಳ ಮೇಲಿನ ಆನೆಗಳ ದಾಳಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಪ್ರತಿ 3 ಗಂಟೆಗೆ ಒಂದು ಬಾರಿ ರೇಡಿಯೊ ಕಾಲರಿಂಗ್‌ನಿಂದ ಸಂದೇಶ ಬರಲಿದ್ದು, ಆ ಆನೆ ಎಲ್ಲಿದೆ ಎಂಬುದು ಗೊತ್ತಾಗಲಿದೆ. ಒಂದು ವೇಳೆ ಜನವಸತಿ ಪ್ರದೇಶಗಳ ಸಮೀಪಕ್ಕೆ ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ಜನರಿಗೆ ಮುನ್ನಚ್ಚರಿಕೆ ನೀಡಬಹುದು. ಇಲ್ಲವೇ, ಆ ಆನೆಗಳನ್ನು ಕಾಡಿನತ್ತ ಓಡಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳುತ್ತಾರೆ.

ರೇಡಿಯೊ ಕಾಲರಿಂಗ್‌ ಅಳವಡಿಸಿದ್ದಲ್ಲಿ ಆನೆಗಳನ್ನು ಕಂಡು ಜನರು ದೂರು ನೀಡುವವರೆಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾಯಬೇಕಿಲ್ಲ. ಮೊದಲೇ ಅವುಗಳ ಇರುವಿಕೆಯ ಜಾಗವನ್ನು ಅರಿತು ಅದಕ್ಕೆ ಸೂಕ್ತ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು.

ಆನೆಗಳ ಹಿಂಡಿನ ಯಜಮಾನಿಗೆ ಅಳವಡಿಕೆ!

ಸಾಮಾನ್ಯವಾಗಿ ಆನೆಗಳ ಹಿಂಡಿನ ನಾಯಕತ್ವವನ್ನು ಹೆಣ್ಣಾನೆಯೇ ವಹಿಸಿರುತ್ತದೆ. ಹಾಗಾಗಿ, ಹಿಂಡಿನ ಪ್ರಧಾನ ನಾಯಕಿಗೆ ರೇಡಿಯೊ ಕಾಲರಿಂಗ್ ಅಳವಡಿಸಲಾಗುತ್ತದೆ. ಇದೊಂದು ದೊಡ್ಡಮಟ್ಟದ ಕಾರ್ಯಾಚರಣೆಯಾಗಿದ್ದು, ಅರಣ್ಯ ಇಲಾಖೆ ಎಲ್ಲ ಬಗೆಯ ಸಿದ್ಧತೆಗಳನ್ನೂ ಕೈಗೊಂಡಿದೆ.

ಹಿಂಡಿನ ಆನೆಗಳ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಕುಮ್ಕಿ ಆನೆಗಳನ್ನು ಬಳಕೆ ಮಾಡಲಾಗುತ್ತದೆ. ಹಾಗಾಗಿ, ಈ ಬಗೆಯ ಕಾರ್ಯಾಚರಣೆಗೆ 7ರಿಂದ 8 ಸಾಕಾನೆಗಳನ್ನು ದುಬಾರೆ ಮತ್ತು ಮತ್ತಿಗೋಡು ಶಿಬಿರಗಳಿಂದ ಕರೆಸಿಕೊಳ್ಳಲಾಗಿದೆ. ಒಟ್ಟು 50ಕ್ಕೂ ಅಧಿಕ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.

ಅರವಳಿಕೆ ಚುಚ್ಚುಮದ್ದು ನೀಡಿ ಒಂಟಿ ಸಲಗವನ್ನು ಸೆರೆ ಹಿಡಿಯಲಾಗುತ್ತದೆ. 2 ಹಿಂಡಿನ 2 ಕಾಡಾನೆಗಳಿಗೂ ಅರವಳಿಕೆ ಚುಚ್ಚುಮದ್ದು ನೀಡಿ, ರೇಡಿಯೊ ಕಾಲರಿಂಗ್ ಅಳವಡಿಸಿ, ಬಿಡಲಾಗುತ್ತದೆ.

ಓಡಿಸಿ, ಓಡಿಸಿ ಹೈರಣಾಗಿರುವ ಸಿಬ್ಬಂದಿ!

ಈ 3 ಕಾಡಾನೆಗಳನ್ನು ಕಾಡಿಗೆ ಓಡಿಸಿ ಓಡಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹೈರಣಾಗಿದ್ದಾರೆ. ಬೆಳಿಗ್ಗೆ ಕಾರ್ಯಾಚರಣೆ ಕೈಗೊಂಡು ಕಾಡಿಗೆ ಕಳುಹಿಸಿದರೆ, ಈ ಆನೆಗಳು ರಾತ್ರಿ ವೇಳೆ ಮತ್ತೆ ಬರುತ್ತಿವೆ. ಇದರಿಂದ ಬೇರೆ ವಿಧಿ ಇಲ್ಲದೇ ಈ ಬಗೆಯ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT