ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ವಲಸೆ ಕಾರ್ಮಿಕರ ವಿರುದ್ಧ ಹೆಚ್ಚಿದ ಆತಂಕ, ಅಸಹನೆ

ಕೊಡಗು ಜಿಲ್ಲೆಯಲ್ಲಿ ದಿನ ಕಳೆದಂತೆ ಹೆಚ್ಚುತ್ತಿದ್ದಾರೆ ವಲಸೆ ಕಾರ್ಮಿಕರು
Published : 26 ಆಗಸ್ಟ್ 2024, 7:11 IST
Last Updated : 26 ಆಗಸ್ಟ್ 2024, 7:11 IST
ಫಾಲೋ ಮಾಡಿ
Comments

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನ ಕಳೆದಂತೆ ವಲಸೆ ಕಾರ್ಮಿಕರ ವಿರುದ್ಧ ಸ್ಥಳೀಯರ ಅಸಹನೆ ಹೆಚ್ಚುತ್ತಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರ ಅಸ್ಸಾಮಿಗಳ ಸಂಖ್ಯೆಯೂ ಏರುತ್ತಿದೆ. ಇದರ ಮಧ್ಯೆ, ಯಾವುದೇ ತಪ್ಪು ಮಾಡದೇ ಜೀವನೋಪಾಯಕ್ಕೆ ಬಂದಿರುವ ಲಕ್ಷಾಂತರ ವಲಸೆ ಕಾರ್ಮಿಕರು ದುಡಿಮೆ ಮಾಡುತ್ತಿದ್ದಾರೆ. ಸದ್ಯ, ಕೊಡಗಿನಲ್ಲಿ ಕಂಡು ಬರುತ್ತಿರುವ ಚಿತ್ರಣವಿದು.

ಮೊನ್ನೆಯಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಅಸ್ಸಾಂ ಕಾರ್ಮಿಕರ ಬಗ್ಗೆ ಮಾತನಾಡಿ, ತೋಟದ ಮಾಲೀಕರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. ಅಸ್ಸಾಂನಿಂದ ಮಾತ್ರವಲ್ಲ ಹೊರರಾಜ್ಯದಿಂದ ಬರುವ ಯಾವುದೇ ಕಾರ್ಮಿಕರಾದರೂ ಸರಿ ಅವರಿಂದ ಸೂಕ್ತ ದಾಖಲಾತಿಗಳನ್ನು ಪಡೆದುಕೊಂಡೇ ಕೆಲಸ ನೀಡಬೇಕು. ಇಲ್ಲದಿದ್ದರೆ ಕಾರ್ಮಿಕರು ಭಾಗಿಯಾಗುವ ಅಪರಾಧ ಪ್ರಕರಣಗಳಲ್ಲಿ ತೋಟದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್‌ ಆಗಿ ಹೇಳಿರುವುದು ವಲಸೆ ಕಾರ್ಮಿಕರ ಸಮಸ್ಯೆಗೆ ಹಿಡಿದ ಕನ್ನಡಿಯಂತಿದೆ.

ಹಾಗೆ ನೋಡಿದರೆ, ಜಿಲ್ಲೆಯಲ್ಲಿ ಅಸ್ಸಾಂನಿಂದ ಬಂದವರು ಎಸಗಿರುವ ಅಪರಾಧ ಕೃತ್ಯಗಳು ಸಾಕಷ್ಟಿವೆ. ಕೇವಲ ಕಳವು ಮಾತ್ರವಲ್ಲ ಹಲ್ಲೆ ಮೊದಲಾದ ಕ್ರೂರ ಪ್ರಕರಣದಲ್ಲೂ ಅವರು ಆರೋಪಿಗಳಾಗಿದ್ದಾರೆ. ಇದರಿಂದ ಸಹಜವಾಗಿಯೇ ಇವರನ್ನು ಕಂಡರೆ ಸ್ಥಳೀಯರಿಗೆ ಭಯ ಶುರುವಾಗಿದೆ.

ಮತ್ತೊಂದೆಡೆ, ಇವರು ಅತ್ಯಂತ ಕಡಿಮೆ ಕೂಲಿ ಪಡೆಯಲು ಒಪ್ಪಿ ಕೆಲಸಕ್ಕೆ ಬರುವುದರಿಂದ ಸ್ಥಳೀಯ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ತೋಟದ ಕೆಲಸ ಸಿಗದೇ ಈಗ ಸ್ಥಳೀಯರು ಬೇರೆ ಕಡೆ ವಲಸೆ ಹೋಗುವಂತಾಗಿದೆ. ಕೆಲವರು ಬಣ್ಣ ಬಳಿಯುವ ಹಾಗೂ ಕಟ್ಟಡ ನಿರ್ಮಾಣ ಚಟುವಟಿಕೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅಸ್ಸಾಂನಿಂದ ಬಂದವರು ನಮ್ಮ ಕೆಲಸ ಕಿತ್ತುಕೊಂಡರು ಎಂಬ ಅಸಮಾಧಾನವೂ ಸ್ಥಳೀಯ ಕಾರ್ಮಿಕರಲ್ಲಿದೆ.

ಇಷ್ಟೆಲ್ಲ ಆರೋಪಗಳ ಮಧ್ಯೆ ಮುಗುಮ್ಮಾಗಿ ಲಕ್ಷಾಂತರ ಮಂದಿ ಅಸ್ಸಾಂನಿಂದ ಬಂದು ಇಲ್ಲಿ ಬೆವರು ಹರಿಸಿ ದುಡಿಯುತ್ತಿದ್ದಾರೆ. ಕಡಿಮೆ ಕೂಲಿ, ಹೆಚ್ಚು ಅವಧಿಯ ಕೆಲಸದಿಂದ ತೋಟದ ಮಾಲೀಕರಿಗೂ ಇವರು ಅಗತ್ಯವಾಗಿಯೇ ಬೇಕು ಎನ್ನುವಂತಾಗಿದೆ.

ಈ ರೀತಿ ಬರುವ ಬಹುತೇಕ ಮಂದಿ ಹೊಟ್ಟೆಪಾಡಿಗಾಗಿ ಬಂದು ಇಲ್ಲಿಯೇ ಪ್ರಾಮಾಣಿಕವಾಗಿ ದುಡಿದು, ಬದುಕು ಕಟ್ಟಿಕೊಂಡಿದ್ದಾರೆ. ತೋಟಗಳಲ್ಲಿ ಲೈನ್‌ಮನೆಗಳಲ್ಲಿ ಮಾತ್ರವಲ್ಲ ಹೊರಗಡೆ ಬಾಡಿಗೆ ಮನೆಗಳಲ್ಲೂ ಸ್ಥಳೀಯರೊಂದಿಗೆ ವಿಶ್ವಾಸದಿಂದ ಬದುಕುತ್ತಿದ್ದಾರೆ. ಆದರೆ, ಆಗೊಮ್ಮೆ ಈಗೊಮ್ಮೆ ಸಂಭವಿಸುವ ಅಪರಾಧ ಚಟುವಟಿಕೆಗಳು ಇವರನ್ನೆಲ್ಲ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.

ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ ನಡೆದ  ಮೇಲಂತೂ ಅಸ್ಸಾಂನವರ ಹೆಸರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇಲ್ಲಿದ್ದಾರೆ ಎಂಬ ಅಭಿಪ್ರಾಯವೂ ಬಲವಾಗಿ ಕೇಳಿ ಬರುತ್ತಿದೆ. ಆದರೆ, ಈ ಕುರಿತು ಸ್ಪಷ್ಟತೆ ಇಲ್ಲ ಎಂದಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ‘ಯಾರಾದರೂ ಬಾಂಗ್ಲಾದೇಶದವರು ಎಂಬ ಅನುಮಾನ ಬಂದರೆ ಸಾಕು ಮಾಹಿತಿ ನೀಡಿ’ ಎಂದು ಮನವಿ ಮಾಡುತ್ತಾರೆ.

ಜವಾಬ್ದಾರಿ ನುಣುಚಿಕೊಳ್ಳುತ್ತಿರುವ ಅಧಿಕಾರಿಗಳು: ಅಸ್ಸಾಂ ಕಾರ್ಮಿಕರ ಕುರಿತು ಕೇಳಿ ಬರುತ್ತಿರುವ ಆರೋಪಗಳಿಗೆ ಇಲ್ಲಿನ ಅಧಿಕಾರಿಗಳು ಅಕ್ಷರಶಃ ಕಿವುಡಾಗಿದ್ದಾರೆ. ಪೊಲೀಸರೂ ಜವಾಬ್ದಾರಿಯನ್ನು ತೋಟದ ಮಾಲೀಕರಿಗೆ ವರ್ಗಾಯಿಸಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳೂ ಈ ಕುರಿತು ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ.

ಅಸ್ಸಾಂನಿಂದ ಹೇಗೆ ಇಷ್ಟೊಂದು ಪ್ರಮಾಣದಲ್ಲಿ ಜನರು ಬರುತ್ತಿದ್ದಾರೆ, ಅವರನ್ನು ಕರೆದುಕೊಂಡು ಬರುವ ಮಧ್ಯವರ್ತಿಗಳು ಯಾರು?, ಅದರಿಂದ ಅವರಿಗೆ ಸಿಗುವ ಲಾಭವೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ಪೊಲೀಸರೂ ಕೈ ಹಾಕಿಲ್ಲ.

ಬೀಟ್‌ ಪೊಲೀಸರಿಂದ ಮಾಹಿತಿ ಸಂಗ್ರಹ ಸುಲಭ: ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಮಾಹಿತಿಯನ್ನು ಬೀಟ್ ಪೊಲೀಸರು ಸುಲಭವಾಗಿ ಪತ್ತೆ ಮಾಡಬಹುದು ಹಾಗೂ ಸಂಗ್ರಹಿಸಬಹುದು. ತಮ್ಮ ಬೀಟ್ ವ್ಯಾಪ್ತಿಯಲ್ಲಿರುವವರ ವಿವರ ಪಡೆದು, ಹೊಸದಾಗಿ ಬಂದವರ ದಾಖಲಾತಿಗಳನ್ನು ಪರಿಶೀಲಿಸಬಹುದು. ಆದರೆ, ಇಂತಹ ಕೆಲಸಗಳು ಜಿಲ್ಲೆಯಲ್ಲಿ ನಡೆದಂತಿಲ್ಲ. ಇದಕ್ಕೆ ಜಿಲ್ಲೆಯ ಬೀಟ್ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳ್ಳಬೇಕಿದೆ.

ಲೈನ್‌ಮನೆಗಳಿಂದ ಬಾಡಿಗೆ ಮನೆಗಳತ್ತ: ಅಸ್ಸಾಂ ಕಾರ್ಮಿಕರು ಈಗ ಲೈನ್‌ಮನೆಗಳಿಂದ ಬಾಡಿಗೆ ಮನೆಗಳಲ್ಲಿ ನೆಲೆಸಲು ಆರಂಭಿಸಿದ್ದಾರೆ. ಲೈನ್‌ಮನೆಗಳಲ್ಲಿ ಇದ್ದರೆ ಕೂಲಿ  ಕಡಿಮೆ ಸಿಗುತ್ತದೆ ಎಂಬ ಕಾರಣಕ್ಕೆ ಒಂದೇ ಬಾಡಿಗೆ ಮನೆಯಲ್ಲಿ ಹೆಚ್ಚು ಮಂದಿ ಉಳಿದುಕೊಂಡು, ತೋಟಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಇದರಿಂದ ಕೂಲಿ ಹೆಚ್ಚು ಸಿಗುತ್ತದೆ ಎಂಬುದು ಅವರು ಲೆಕ್ಕಾಚಾರ. ಮನೆಗಳನ್ನು ಬಾಡಿಗೆಗೆ ಕೊಡುವವರೂ ಎಲ್ಲ ದಾಖಲಾತಿಗಳನ್ನು ಪಡೆದುಕೊಂಡು, ಪೂರ್ವಾಪರ ವಿಚಾರಿಸಿಯೇ ನೀಡಬೇಕು.

ಕೆಲಸ ನಿರತ ಕಾರ್ಮಿಕರು
ಕೆಲಸ ನಿರತ ಕಾರ್ಮಿಕರು
ಹೊರರಾಜ್ಯದ ಕಾರ್ಮಿಕರ ದಾಖಲಾತಿ ಪಡೆದೇ ಕೆಲಸ ನೀಡಬೇಕು. ಒಂದು ವೇಳೆ ದಾಖಲಾತಿ ಇಲ್ಲದವರು ತೋಟದ ಲೈನ್‌ಮನೆಯಲ್ಲಿದ್ದು ಅವರಿಂದ ಅಪರಾಧ ಕೃತ್ಯಗಳು ಜರುಗಿದರೆ ತೋಟದ ಮಾಲೀಕರನ್ನೂ ಜವಾಬ್ದಾರಿಯನ್ನಾಗಿ ಮಾಡಲಾಗುವುದು
ಕೆ.ರಾಮರಾಜನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಎಲ್ಲರ ಮೇಲೂ ಜವಾಬ್ದಾರಿ ಇದೆ
ಅಸ್ಸಾಂ ಆರೋಪಿಗಳ ಮೂಲ ವಿಳಾಸವನ್ನು ಪತ್ತೆ ಮಾಡಬೇಕು. ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಇತರೆಡೆ ಕಾರ್ಮಿಕರಿದ್ದಾರೆ. ಕನಿಷ್ಠ ಆರೋಪಿಗಳ ಮೂಲ ವಿಳಾಸವನ್ನು ಖುದ್ದು ಪರಿಶೀಲಿಸಬೇಕು. ಜೊತೆಗೆ ಕಾರ್ಮಿಕರನ್ನು ಕರೆತರುವ ಮಧ್ಯವರ್ತಿಗಳ ಮೇಲೂ ಹದ್ದಿನ ಕಣ್ಣಿಡಬೇಕು. ಇವರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿರಬೇಕು. ಇದು ಪೊಲೀಸ್ ಇಲಾಖೆಯ ಕೆಲಸ. ಇನ್ನು ಈ ವಿಚಾರದಲ್ಲಿ ಕಾರ್ಮಿಕ ಇಲಾಖೆ ತನ್ನ ಜವಾಬ್ದಾರಿ ಮರೆತು ನಿದ್ದೆ ಮಾಡುತ್ತಿದೆ. ತೋಟದ ಮಾಲೀಕರೂ ತಮ್ಮಲ್ಲಿ ಬರುವ ಕಾರ್ಮಿಕರ ಪೂರ್ವಾಪರ ವಿಚಾರಿಸದೇ ದಾಖಲಾತಿಗಳನ್ನು ಪಡೆದುಕೊಳ್ಳದೇ ಯಾವುದೇ ಕಾರಣಕ್ಕೂ ಕೆಲಸ ನೀಡಬಾರದು. ಅಚ್ಚಂಡೀರ ಪವನ್ ಪೆಮ್ಮಯ್ಯ ವಕೀಲರು ಮತ್ತು ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ. ಭದ್ರತೆಗಾದರೂ ನಿಗಾ ಇರಿಸಿ ಅಸ್ಸಾಂ ಕಾರ್ಮಿಕರು ಮೊದಲು ಲೈನ್‌ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಕೂಲಿ ಕಡಿಮೆ ಸಿಗುತ್ತದೆ ಎಂಬ ಕಾರಣಕ್ಕೆ ಈಗ ಬಾಡಿಗೆ ಮನೆಯಲ್ಲಿ 10ರಿಂದ 15 ಜನ ಇರುತ್ತಿದ್ದಾರೆ. ಇವರ ದಾಖಲಾತಿಗಳನ್ನು ಮನೆ ಮಾಲೀಕರು ಪಡೆದೇ ಬಾಡಿಗೆ ಕೊಡಬೇಕು. ಕನಿಷ್ಠ ತಮ್ಮ ಭದ್ರತೆಗಾದರೂ ನಿಗಾ ಇರಿಸಿಕೊಂಡಿರಬೇಕು. ದಾಖಲಾದ ಪ್ರಕರಣಗಳು ಸಿಕ್ಕಿಬಿದ್ದ ಆರೋಪಿಗಳಿಂದಷ್ಟೇ ಮಾಹಿತಿ ಸಿಗುತ್ತಿದೆ. ಪತ್ತೆಯಾಗದ ಪ್ರಕರಣಗಳು ಬಹಳಷ್ಟಿರಬಹುದು. ಪೊಲೀಸರು ಗರಿಷ್ಠ ಮುಂಜಾಗ್ರತೆ ವಹಿಸಬೇಕು ತೋಟದ ಮಾಲೀಕರು ಮತ್ತು ಮನೆ ಮಾಲೀಕರು ಅವರಿಗೆ ಸಂಪೂರ್ಣ ಸಹಕಾರ ಕೊಡಬೇಕು ಮನ್ಸೂರ್ ಅಲಿ ಕೊಡಗು ಔಷಧ ವ್ಯಾಪರ ಸಂಘದ ನಿರ್ದೇಶಕ. ಸ್ಥಳೀಯರ ಕಡೆಗಣನೆ ಸಮಸ್ಯೆಗೆ ಮೂಲ ಸ್ಥಳೀಯರ ಕೂಲಿ ಕಾರ್ಮಿಕರನ್ನು ಕಡೆಗಣಿಸಿ ಕಡಿಮೆ ಕೂಲಿಗೆ ಕೆಲಸ ಮಾಡಿಸಿಕೊಳ್ಳಲು ಕಾಫಿ ತೋಟದ ಮಾಲಿಕರು ಅಸ್ಸಾಂ ಕಾರ್ಮಿಕರನ್ನು ನೇಮಿಸಿಕೊಂಡರು. ಇದರಿಂದ ಅವರಿಗೆ ಮುಳುವಾಗಿದೆ. ಒಳಗಿನ ಕಳ್ಳನನ್ನು ನಂಬಿದರೂ ಹೊರಗಿನ ಸಂಪನ್ನರನ್ನು ನಂಬಬಾರದು ಎಂಬ ಗಾದೆ ಮಾತು ಈಗ ಅಸ್ಸಾಂ ಕಾಮಿರನ್ನು ನೋಡಿದಾಗ ನಿಜವಾಗಿದೆ. ಈಗಲಾದರು ಕಾಫಿ ಬೆಳೆಗಾರರು ಎಚ್ಚರ ವಹಿಸಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ನೀಡುವಂತಾಗಲಿ. ಪಿ.ಆರ್.ಪಂಕಜಾ ಗಿರಿಜನ ಮುಖಂಡರು ತಿತಿಮತಿ. ದೂರದ ಕಾರ್ಮಿಕರ ಬಗ್ಗೆ ಎಚ್ಚರವಹಿಸಿ ಸಾವಿರಾರು ಕಿ.ಮೀ ದೂರದಿಂದ ಬರುವ ಕಾರ್ಮಿಕರು ಯಾವ ರೀತಿ ಇರುತ್ತಾರೆ ಎಂದು ಯಾರಿಗೂ ತಿಳಿದಿಲ್ಲ. ಅವರ ಹಿನ್ನೆಲೆ ಅರಿಯದೆ ಕೆಲಸಕ್ಕೆ ಸೇರಿಸಿಕೊಂಡು ಈಗ ಕೊಡಗಿನ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಈಗಲಾದರೂ ಸ್ಥಳೀಯರು ದೂರದ ಕಾರ್ಮಿಕರ ಬಗ್ಗೆ ಎಚ್ಚರವಹಿಸಲಿ. ಪ್ರಭು ನಿವೃತ್ತ ಸೈನಿಕ ಅರುವತ್ತೊಕ್ಕಲು. ಹೊಟ್ಟೆ ಪಾಡಿಗಾಗಿ ಗಿರಿಜನರ ಕಷ್ಟ ಬುಡಕಟ್ಟು ಜನಾಂಗದ ಗಿರಿಜನ ಕಾರ್ಮಿಕರು ಅನಾದಿ ಕಾಲದಿಂದಲೂ ಕಾಫಿ ತೋಟದ ಕೆಲಸ ಮಾಡಿಕೊಂಡು ಬಂದವರು. ಬದಲಾದ ಕಾಲಘಟ್ಟದಲ್ಲಿ ಅವರ ಕೆಲಸವನ್ನು ಅಸ್ಸಾಂನವರು ಕಿತ್ತುಕೊಂಡರು. ಈಗ ಗಿರಿಜನರು ಹೊಟ್ಟೆ ಪಾಡಿಗಾಗಿ ಕಷ್ಟ ಪಡಬೇಕಾಗಿದೆ. ಕೆಲವರು ತೋಟದ ಕೆಲಸ ಬಿಟ್ಟು ಬೇರೆ ಬೇರೆ ಕೆಲಸಗಳನ್ನು ಕಂಡುಕೊಂಡಿದ್ದಾರೆ. ಹಲವು ಜನರು ಕೆಲಸವಿಲ್ಲದೆ ಕುಳಿತಿದ್ದಾರೆ. ಅಸ್ಸಾಂ ಕಾರ್ಮಿಕರನ್ನು ಆದಷ್ಟು ಕಡಿಮೆ ಮಾಡಿ ಸ್ಥಳೀಯರಿಗೆ ಕೆಲಸ ನೀಡುವಂತಾಗಲಿ. ಮಣಿಕುಂಜಿ ತಿತಿಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT