ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ತೀವ್ರಗೊಂಡ ನೀರಿನ ಸಮಸ್ಯೆ

3ರಿಂದ 4 ದಿನಗಳಿಗೆ ಸರಬರಾಜು ಮಾಡುವ ನೀರಿಗೂ ಕನ್ನ?
Published 30 ಮಾರ್ಚ್ 2024, 7:44 IST
Last Updated 30 ಮಾರ್ಚ್ 2024, 7:44 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪಟ್ಟಣದಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ.

ಪಟ್ಟಣಕ್ಕೆ ಅಂತರ್ಜಲದ ಮೂಲವಾಗಿದ್ದ ಸುತ್ತಮುತ್ತಲಿನ ಕೀರೆಹೊಳೆ, ತೊರೆ ತೋಡುಗಳು ಒಣಗಿ ನೀರಿನ ಸೆಲೆಯೇ ಬತ್ತಿ ಹೋಗಿರುವುದರಿಂದ ಕೊಳವೆಬಾವಿಗಳ ನೀರೂ ದಿನೇ ದಿನೇ ಕಡಿಮೆಯಾಗುತ್ತಿದೆ. ಇದರಿಂದ 3ರಿಂದ 4 ದಿನಗಳಿಗೆ ಗ್ರಾಮ ಪಂಚಾಯಿತಿ ನೀರು ಸರಬರಾಜು ಮಾಡುವ ಸ್ಥಿತಿ ಸೃಷ್ಟಿಯಾಗಿದೆ. ಈಗ ಈ ರೀತಿ ಬಿಡುವ ನೀರಿಗೂ ಕನ್ನ ಹಾಕುವ ಮಟ್ಟಕ್ಕೆ ನೀರಿನ ಸಮಸ್ಯೆ ಮುಟ್ಟಿದ್ದು, ಮಳೆಯಾಗದೇ ಇದ್ದರೆ ಮುಂಬರುವ ದಿನಗಳ ಪರಿಸ್ಥಿತಿ ಹೇಗೋ ಎಂಬ ಆತಂಕ ಸೃಷ್ಟಿಸಿದೆ.

‘3ರಿಂದ 4 ದಿನಗಳಿಗೆ ಬರುವ ನೀರಿನ ಪೈಪ್‌ಗೆ, ನಲ್ಲಿಗೆ ಅಥವಾ ಪೈಪ್‌ಲೈನ್‌ಗೆ ಮೋಟಾರ್ ಅಳವಡಿಸಿ ಕೆಲವರು ನೀರು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಕೊನೆ ಹಂತದ ಮನೆಗಳಿಗೆ ಅಥವಾ ಇನ್ನುಳಿದ ಮನೆಗಳಿಗೆ ಸರಬರಾಜಾಗುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಈ ರೀತಿ  ಮೋಟಾರ್ ಅಳವಡಿಸಿಕೊಂಡ ಉಳ್ಳವರ ಮನೆಗಳಿಗೆ ಹೆಚ್ಚು ರಭಸದಲ್ಲಿ ನೀರು ಬಂದರೆ, ಇನ್ನುಳಿದವರ ಮನೆಗಳಿಗೆ ಬೆರಳಿನ ಗಾತ್ರ ಇಲ್ಲವೇ ದಾರದ ಗಾತ್ರದಲ್ಲಿ ನೀರು ಬರುವಂತಾಗಿದೆ’ ಎಂದು ಪಟ್ಟಣದ ಅನೇಕರು ದೂರುತ್ತಾರೆ.

ದಕ್ಷಿಣ ಕೊಡಗಿನ ಬಾಳೆಲೆ, ಪೊನ್ನಂಪೇಟೆ, ತಿತಿಮತಿ, ಪಾಲಿಬೆಟ್ಟ ಮೊದಲಾದ ಪಟ್ಟಣಗಳು ಬೇಸಿಗೆಯಲ್ಲಿ ನೀರಿನ ಬರ ಎದುರಿಸುವುದು ಸಹಜವಾಗಿತ್ತು. ಆದರೆ, ಎಲ್ಲ ಕಡೆಗಳಿಂದಲೂ ತಗ್ಗು ಪ್ರದೇಶದಿಂದ ಕೂಡಿರುವ ಗೋಣಿಕೊಪ್ಪಲಿಗೆ ಯಾವ ವರ್ಷವೂ ನೀರಿಗೆ ಬರ ಎದುರಾಗಿರಲಿಲ್ಲ. ಈ ಕಾರಣದಿಂದಲೇ ಬಹುಪಾಲು ಜನರು ವಾಸಕ್ಕೆ ಗೋಣಿಕೊಪ್ಪಲನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದರಿಂದ ಪಟ್ಟಣವೂ ಬೆಳೆಯುತ್ತಾ ಹೋಯಿತು.

‘ಪಟ್ಟಣ ಬೆಳೆದಂತೆ ಇಲ್ಲಿನ ಜನರಿಗೆ ಗ್ರಾಮ ಪಂಚಾಯಿತಿ ವಿದ್ಯುತ್, ರಸ್ತೆ ಸೌಲಭ್ಯ ನೀಡಿತೆ ಹೊರತು, ಶಾಶ್ವತ ಕುಡಿಯುವ ನೀರಿನ ಮೂಲವನ್ನು ಹುಡುಕಲಿಲ್ಲ. ಅಂತರ್ಜಲದ ಮೂಲವಾಗಿದ್ದ ಗದ್ದೆ ಮೊದಲಾದ ತಗ್ಗು ಪ್ರದೇಶಗಳೆಲ್ಲ ನಿವೇಶನಗಳಾದವು. ಅವುಗಳಲ್ಲಿ ಸಿಮೆಂಟ್ ರಸ್ತೆ ಮತ್ತು ಕಾಂಕ್ರಿಟ್ ಕಟ್ಟಡಗಳು ತಲೆ ಎತ್ತಿದವು. ಮಳೆಗಾಲದಲ್ಲಿ ಸುರಿದ ನೀರು ಒಂದಿಂಚೂ ಭೂಮಿಗೆ ಇಳಿಯದಂತೆ ಸರ್ರನೆ ಜಾರಿ ಹೊಳೆ, ತೋಡು ಸೇರಿತು. ಇವೆಲ್ಲವೂ ಅಂರ್ತಜಲ ಕ್ಷೀಣಿಸುವಿಕೆಗೆ ಕಾರಣವಾಯಿತು’ ಎಂಬುದು ‘ಜಲಯೋಧ’ ಎಂದೇ ಕರೆಸಿಕೊಳ್ಳುವ ಸುಳುಗೋಡಿನ ಪರಿಸರಪ್ರೇಮಿ ಸೂರಜ್ ಅವರ ಅಭಿಪ್ರಾಯ.

ಗೋಣಿಕೊಪ್ಪಲು ಪಟ್ಟಣ ಬೆಳೆದಿರುವುದೇ ಗದ್ದೆಗಳಲ್ಲಿ. 25 ವರ್ಷದ ಹಿಂದೆ ಸಮೃದ್ಧವಾಗಿ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಇಂದು ಒಂದಿಂಚೂ ಇಲ್ಲದಂತೆ ಮಾಯವಾಗಿವೆ. ಜನಸಂಖ್ಯೆ 8 ಸಾವಿರಕ್ಕೆ ಏರಿದೆ. ಗ್ರಾಮ ಪಂಚಾಯಿತಿ ಹಳೆಯ ಕೊಳವೆಬಾವಿಗಳನ್ನೇ ನಂಬಿಕೊಂಡು ಹಳೆಯ ಪೈಪ್‌ಲೈನ್‌ಗೆ ಹೊಸ ನಲ್ಲಿ ಪೈಪ್ ಜೋಡಿಸುತ್ತಾ, ನೀರು ಒದಗಿಸಲು ಮುಂದಾಯಿತು. ಬೆಳೆಯುತ್ತಿರುವ ಪಟ್ಟಣಕ್ಕೆ ನೀರಿನ ಕೊರತೆ ನೀಗಿಸುವ ಯಾವ ದೂರದೃಷ್ಟಿ ಯೋಜನೆಯನ್ನೂ ಗ್ರಾಮ ಪಂಚಾಯಿತಿ ಹಾಕಿಕೊಳ್ಳಲಿಲ್ಲ ಎಂಬುದು ಪ್ರಜ್ಞಾವಂತ ನಾಗರಿಕರ ಅಸಮಾಧಾನ.

ಗೋಣಿಕೊಪ್ಪಲು ಸುತ್ತಮುತ್ತ ಕಕ್ಕಟ್ಟು ಹೊಳೆ, ಆಡುಗುಂಡಿ, ಕೊಂಗಣಹೊಳೆ, ಕೀರೆಹೊಳೆ ಮೊದಲಾದ ಹೊಳೆಗಳು ಹರಿಯುತ್ತಿವೆ. ಮಳೆಗಾಲದಲ್ಲಿ ಇವುಗಳೆಲ್ಲ ಉಕ್ಕಿ ಹರಿದು ಗೋಣಿಕೊಪ್ಪಲು ಪಟ್ಟಣಕ್ಕೆ ಪ್ರವಾಹದ ಭೀತಿ ಸೃಷ್ಟಿಸುತ್ತವೆ. ಆದರೆ, ಈ ಹೊಳೆಗಳಿಂದ ನೀರನ್ನು ಹಿಡಿದಿಟ್ಟುಕೊಂಡು ಶಾಶ್ವತವಾಗಿ ನೀರು ಒದಗಿಸುವ ಕೆಲಸಕ್ಕೆ ಮಾತ್ರ ಗ್ರಾಮ ಪಂಚಾಯಿತಿ ಮುಂದಾಗಲಿಲ್ಲ. ಈಗ ಜನತೆಗೆ ನೀರು ಒದಗಿಸಲಾಗದೆ ಪರಿತಪಿಸುತ್ತಿದೆ ಎಂಬ ದೂರು ಸಾರ್ವಜನಿಕರದು.

ಹೊಂಡ, ಕೆರೆಗಳು ಮಾಯ

‘ಪಟ್ಟಣದ ಆಜುಬಾಜುಗಳಲ್ಲಿ ಹತ್ತಾರು ಹೊಂಡಗಳಿದ್ದವು. ಸಣ್ಣಪುಟ್ಟ ಕೆರೆಗಳಿದ್ದವು. ಈಗ ಅವೆಲ್ಲವನ್ನು ಮುಚ್ಚಿ ನಿವೇಶನ ಮಾಡಲಾಗಿದೆ. ಕೀರೆಹೊಳೆ, ಕೈಕೇರಿ ತೋಡು ಕೂಡ ಒತ್ತುವರಿಯಾಗಿದೆ. ಇದೆಲ್ಲವನ್ನು ಗ್ರಾಮ ಪಂಚಾಯಿತಿ ರಕ್ಷಿಸಿದ್ದರೆ ನೀರಿನ ಬವಣೆ ಎದುರಾಗುತ್ತಿರಲಿಲ್ಲ’ ಎಂದು ನೀರಿನ ಕ್ಷಾಮದ ವಾಸ್ತವ ಸ್ಥಿತಿ ತೆರೆದಿಡುತ್ತಾರೆ ಕಾವೇರಿ ಜಲಮೂಲಕ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್.

ಗೋಣಿಕೊಪ್ಪಲು ಪಟ್ಟಣದ ಬೈಪಾಸ್ ತೋಡು ಒಣಗಿರುವುದು
ಗೋಣಿಕೊಪ್ಪಲು ಪಟ್ಟಣದ ಬೈಪಾಸ್ ತೋಡು ಒಣಗಿರುವುದು

ಕೆರೆಗಳೆಲ್ಲವೂ ನಿವೇಶನಗಳಾದವು, ಹೊಂಡಗಳೆಲ್ಲವೂ ಮುಚ್ಚಿದವು ನೀರು ಹಿಂಗದೇ ಅಂತರ್ಜಲ ಕುಸಿಯಿತು ನೀರಿನ ಮೂಲ ಹುಡುಕಲು ದೂರದೃಷ್ಟಿಯ ಯೋಜನೆ ಹಾಕಿಕೊಳ್ಳದ ಪಂಚಾಯಿತಿ

ನೀರಿರುವ ಕೊಳವೆ ಬಾವಿಗಳು ಎಷ್ಟೇ ದೂರದಲ್ಲಿದ್ದರೂ ಅವುಗಳನ್ನು ಹುಡುಕಿ ಅಲ್ಲಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಒದಗಿಸಲಾಗುವುದು. ಮಳೆ ಬೀಳುವವರೆಗೆ ಜನತೆ ಸಹಕರಿಸಬೇಕು. ನೀರನ್ನು ಮಿತವಾಗಿ ಬಳಸಬೇಕು

-ಕುಲ್ಲಚಂಡ ಪ್ರಮೋದ್ ಗಣಪತಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT